ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಎಸ್.ಜಯಣ್ಣ ಮತ್ತು ನನ್ನ ಸಂಬಂಧ ಗಟ್ಟಿಯಾಗಿತ್ತು, ನಾವೆಂದೂ ಪರಸ್ಪರ ಎಂದೂ ಸಹಾ ಚುನಾವಣೆ ಎದುರಿಸಿದ ನಿದರ್ಶನಗಳಿಲ್ಲ, ನನಗಾಗಿ ಕ್ಷೇತ್ರ ತ್ಯಾಗ ಮಾಡಿದ ತ್ಯಾಗಮಯಿ ಜಯಣ್ಣ. ಅವರ ಅಗಲಿಕೆ ದುಃಖ ತರಿಸಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಬೆಳಗಾವಿ ಅಧಿವೇಶದಲ್ಲಿ ಮಾಜಿ ಶಾಸಕ, ಅಗಲಿದ ನಾಯಕ ಜಯಣ್ಣ ಅವರಿಗೆ ಭಾವುಕರಾಗಿ ಶ್ರದ್ಧಾಜಲಿ ಸಮರ್ಪಿಸಿದರು.ಸದನದಲ್ಲಿ ಮಾತನಾಡಿದ ಶಾಸಕರು, ಕೊಳ್ಳೇಗಾಲ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸ್ಪಂದಿಸಿದ ಧೀಮಂತ ನಾಯಕ ಎಸ್.ಜಯಣ್ಣ. ಅವರ ಕಾಲದಲ್ಲಿ ಕ್ಷೇತ್ರದಲ್ಲಿ ಅಗ್ನಿಶಾಮಕ ಠಾಣೆ, ಬಸ್ ನಿಲ್ದಾಣ, ಆದರ್ಶ ಶಾಲೆ, ಉಪವಿಭಾಗ ಆಸ್ಪತ್ರೆ ಅಭಿವೃದ್ಧಿ, ಯುಜಿಡಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಅನೇಕ ಜನಪರ ಕೆಲಸಗಳಿಗೆ ಮುನ್ನುಡಿ ಬರೆದರು, ನಾನು-ಜಯಣ್ಣ ಅವರು 1994ರಲ್ಲಿ ಒಟ್ಟಿಗೆ ಶಾಸಕರಾಗಿ ಅನ್ಯೂನ್ಯತೆಯಿಂದ ಕೆಲಸ ಮಾಡಿದ್ದೇವೆ, 1994ರಲ್ಲಿ ನಾನು ಸಂತೇಮರಳ್ಳಿ ಶಾಸಕನಾಗಿದ್ದೆ, ಅವರು ಕೊಳ್ಳೇಗಾಲ ಶಾಸಕರಾಗಿದ್ದರು, ನನ್ನ ಮತ್ತು ಅವರ ವಿಶ್ವಾಸ ಬಹಳ ಗಟ್ಟಿಯಾಗಿತ್ತು ಎಂದರು.ಡಿ.12ರಂದು ಅವರ ಮನೆ ಗೃಹ ಪ್ರವೇಶ ಕಾರ್ಯಕ್ರಮವಿತ್ತು, ಆದರೆ 2 ದಿನ ಮುನ್ನವೇ ಅವರು ತೀರಿಕೊಂಡರು, ಅವರೇ ಹೆಸರಿಟ್ಟಿದ್ದ ನೂತನ ಮನೆಗೆ ಪ್ರವೇಶಿಸಲು ಅವರಿಗೆ ಭಗವಂತನ ಅನುಗ್ರಹ ಸಿಗಲಿಲ್ಲ ಎಂದು ವಿಷಾದಿಸಿದರು. ಡಿ.7ರಂದು ಜಿಲ್ಲೆಯಲ್ಲಿ 3 ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು, ಅಂದು ಸ್ವತಃ ಮುಖ್ಯಮಂತ್ರಿಗಳಿಗೆ 12ರಂದು ಯಾರು ಸಹಾ ಗೃಹಪ್ರವೇಶಕ್ಕೆ ಅಧಿವೇಶನ ಇರುವ ಕಾರಣ ಬರಲಾಗಲ್ಲ ಎಂಬುದನ್ನು ಮನಗಂಡು ಅವರ ಮನೆಗೆ ತೆರಳಿದ್ದರು, ಅಂದು ಮುಖ್ಯಮಂತ್ರಿಗಳು ಸೇರಿದಂತೆ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದರು. ಅಂದೆ ಆರೋಗ್ಯ ವ್ಯತ್ಯಾಸವಾಗಿ ಕೆಲಕಾಲ ಕುಳಿತು ವಿಶ್ರಮಿಸಿಕೊಂಡರು. ಆಹ್ವಾನ ಪತ್ರಿಕೆ ಹಂಚಲು ಹೋಗಿ ಅವರು ಹೃದಯಾಘಾತದಿಂದ ನಿಧನವಾದ ವಿಚಾರ ಕೇಳಿ ನನಗೆ ಅಪಾರ ದುಃಖವಾಯಿತು. ವಿಚಾರವನ್ನು ಮುಖ್ಯಮಂತ್ರಿಗಳಿಗೂ ತಿಳಿಸಿದೆ, ಅವರು ಅಚ್ಚರಿಗೊಂಡರು. ಇದೇನು ಹೀಗಾಯಿತು ಎಂದು ನನ್ನನ್ನು ಕೊಳ್ಳೇಗಾಲಕ್ಕೆ ಹೊರಡಲು ಸೂಚಿಸಿದರು.ಈ ಹಿಂದೆ ರಾಜ್ಯಾಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಚುನಾವಣಾ ಪ್ರಚಾರದ ವೇಳೆ ಕೊಳ್ಳೇಗಾಲಕ್ಕೆ ಆಗಮಿಸಿದ್ದ ವೇಳೆ ಅವರನ್ನು ತ್ಯಾಗಮಯಿ ಎಂದು ಸಂಬೋಧಿಸಿದ್ದರು, ಹಾಗಾಗಿಯೇ ತ್ಯಾಗಮಯಿ ಜಯಣ್ಣ ಅವರಿಗೆ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಗ್ರಾಣ ನಿಗಮದ ಅದ್ಯಕ್ಷ ಸ್ಥಾನ ಕರುಣಿಸಿದರು. ಪ್ರಕೃತಿ ಮಾತೆ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದರು. ಅದೇನೊ ಗೊತ್ತಿಲ್ಲ ಅಧ್ಯಕ್ಷರೇ? ಉಗ್ರಾಣ
ನಿಗಮದ ಅಧ್ಯಕ್ಷರಾದವರು ಕಾಲವಾಗುತ್ತಿದ್ದಾರೆ!ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಅಗಲಿದ ನಾಯಕ, ಮಾಜಿ ಶಾಸಕ ಜಯಣ್ಣ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಅದೇನೊ ಗೊತ್ತಿಲ್ಲ ಅಧ್ಯಕ್ಷರೇ ಉಗ್ರಾಣ ನಿಗಮದ ಅಧ್ಯಕ್ಷರು ಕಾಲವಾಗುತ್ತಿದ್ದಾರೆ ಎಂಬ ಅಚ್ಚರಿ ಹೇಳಿಕೆಯನ್ನು ಕೃಷ್ಣಮೂರ್ತಿ ನೀಡಿದ್ದಾರೆ. ಹಿಂದೆ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ವೆಂಕಟಪ್ಪ ನಾಯಕ ಅವರು ಸಹಾ ಕಾಲವಾದರು, ಅದೇ ರೀತಿ ಈಗ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಜಯಣ್ಣ ಅವರು ಕಾಲವಾದರು, ಅದೇನೊ ಗೊತ್ತಿಲ್ಲ ಅಧ್ಯಕ್ಷರೇ ಎಂದು ದುಃಖದಿಂದಲೇ ಹೇಳಿದರು.