ಹಾಸನ ಸರ್ಕಲ್ ರೈಲ್ವೆ ಗೇಟ್‌ನಲ್ಲಿ ಮೇಲ್ಸೆತುವೆ ನಿರ್ಮಿಸುವಂತೆ ಜಯಣ್ಣ ಒತ್ತಾಯ

| Published : Jan 16 2024, 01:53 AM IST / Updated: Jan 16 2024, 05:56 PM IST

News
ಹಾಸನ ಸರ್ಕಲ್ ರೈಲ್ವೆ ಗೇಟ್‌ನಲ್ಲಿ ಮೇಲ್ಸೆತುವೆ ನಿರ್ಮಿಸುವಂತೆ ಜಯಣ್ಣ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಸರ್ಕಲ್‌ನ ರೈಲ್ವೆ ಗೇಟ್‌ನಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಮಾಡಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಪ್ರತಿನಿತ್ಯ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ತಾಲ್ಲೂಕು ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್. ಜಯಣ್ಣ ರಾಜ್ಯ ಸರ್ಕಾರ ಹಾಗೂ ಲೋಕಸಭಾ ಸದಸ್ಯರನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಹಾಸನ ಸರ್ಕಲ್‌ನ ರೈಲ್ವೆ ಗೇಟ್‌ನಲ್ಲಿ ರೈಲ್ವೆ ಮೇಲ್ಸೆತುವೆ ಅಥವಾ ಕೆಳ ಸೇತುವೆ ನಿರ್ಮಾಣ ಮಾಡಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಪ್ರತಿನಿತ್ಯ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ತಾಲ್ಲೂಕು ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್ ಜಯಣ್ಣ ರಾಜ್ಯ ಸರ್ಕಾರ ಹಾಗೂ ಲೋಕಸಭಾ ಸದಸ್ಯರನ್ನು ಒತ್ತಾಯಿಸಿದ್ದಾರೆ.

ತಿಪಟೂರು ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇದಕ್ಕೆ ಪೂರಕವಾಗಿರುವಂತೆ ರೈಲು ಹಾಗೂ ಬಸ್ ಸಾರಿಗೆ ವ್ಯವಸ್ಥೆಯೂ ಇದೆ. ಆದರೆ ರೈಲ್ವೆ ದ್ವಿಪದ ಮಾರ್ಗ ಬಂದ ಮೇಲೆ ಬೆಂಗಳೂರು-ಅರಸೀಕೆರೆ ಮಾರ್ಗವಾಗಿ ಪ್ರತಿದಿನ ೫೦ರಿಂದ ೬೦ಕ್ಕೂ ಹೆಚ್ಚು ರೈಲುಗಳು, ಗೂಡ್ಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.

ಹಾಸನ ಸರ್ಕಲ್ ರೈಲ್ವೆ ಗೇಟ್ ಮೂಲಕ ಬೆಂಗಳೂರು-ಹಾಸನ, ನಗರದ ಗಾಂಧೀನಗರ ಭಾಗದ ಬಡಾವಣೆಗಳು, ಶಾರದಾ ನಗರ ಸೇರಿದಂತೆ ತಿಪಟೂರು, ಅರಸೀಕೆರೆ, ಚನ್ನರಾಯಪಟ್ಟಣ ಭಾಗಗಳ ಸಾವಿರಾರು ವಾಹನಗಳು ಇದೇ ರೈಲ್ವೆ ಗೇಟ್ ದಾಟಿ ಹೋಗಬೇಕಾಗಿದೆ. 

ಅಲ್ಲದೆ ನಗರ ಹಾಗೂ ಗ್ರಾಮೀಣ ಭಾಗದ ಸಾರ್ವಜನಿಕರು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ, ಅಧಿಕಾರಿಗಳು ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹೋಗಲಾಗುತ್ತಿಲ್ಲ. ತುರ್ತು ಕೆಲಸವಿದ್ದರಂತೂ ದೇವರೆ ಗತಿ. 

ಅರ್ಧಗಂಟೆಗಳ ಕಾಲ ಸುಖಾಸುಮ್ಮನೆ ವ್ಯಯ ಮಾಡುವಂತಾಗಿದೆ. ಒಟ್ಟಾರೆ ಈ ರೈಲ್ವೆ ಗೇಟ್ ಅನೇಕ ಭಾಗಗಳಿಗೆ ಸಂಪರ್ಕ ಹೊಂದಿದ್ದು ಮೇಲ್ಸೆತುವೆ ಇಲ್ಲದ ಕಾರಣ ದಿನದಲ್ಲಿ ಅನೇಕ ಬಾರಿ ಗೇಟ್ ಮುಚ್ಚುವುದರಿಂದ, ವಾಹನ ಸವಾರರು ಕನಿಷ್ಠ ೨೦-೩೦ನಿಮಿಷಗಳ ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಜೊತೆಗೆ ಬದಲಿ ಮಾರ್ಗವೂ ಇಲ್ಲದ್ದರಿಂದ ಗೇಟ್‌ನ ಎರಡೂ ಕಡೆಗಳಿಂದ ವಾಹನ ಸವಾರರು ಸಾಲುಗಟ್ಟಿ ನಿಂತುಕೊಳ್ಳುತ್ತಾರೆ. ಗೇಟ್ ತೆರೆದ ತಕ್ಷಣವೆ ವಾಹನ ದಟ್ಟಣೆಯಿಂದ ಮುಖಾಮುಖಿ ಡಿಕ್ಕಿ ಒಡೆದುಕೊಂಡು ಸಣ್ಣಪುಟ್ಟ ಅಪಘಾತಗಳು ಸಹ ಸಂಭವಿಸುತ್ತಿದ್ದು, ಈ ಸಮಸ್ಯೆಯನ್ನು ಪ್ರತಿನಿತ್ಯ ಅನುಭವಿಸುವಂತಾಗಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪ್ರತಿನಿಧಿಗಳು ಬಗೆಹರಿಸಬೇಕೆಂದು ಜಯಣ್ಣ ಒತ್ತಾಯಿಸಿದ್ದಾರೆ.