ಸಾರಾಂಶ
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ‘ಜಯಂತ್ ಕಾಯ್ಕಿಣಿ ಮತ್ತು ಅವರ ಸಾಹಿತ್ಯದ ಜೊತೆ ಒಂದು ದಿನ’ ಎಂಬ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಪ್ರತಿ ಸಾಮಾನ್ಯ ಮುಖದ ಹಿಂದೆ ನೂರಾರು ಅಸಾಮಾನ್ಯ ಕಥೆಗಳಿವೆ ಎಂದು ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಸಾಬೀತುಪಡಿಸಿದೆ. ದಟ್ಟ ಭೌತಿಕ ವಿವರಗಳಲ್ಲಿ ಹರಳುಗಟ್ಟುವ ಅವರ ಕಥೆಗಳ ಕಾರಣದಿಂದ ಇವರನ್ನು ಬದಲಾವಣೆಯ ‘ಸಾಂಸ್ಕೃತಿಕ ಇತಿಹಾಸಕಾರ’ ಎನ್ನಬಹುದು ಎಂದು ಖ್ಯಾತ ಲೇಖಕ, ವಿಮರ್ಶಕ ಪ್ರೊ. ರಾಜೇಂದ್ರ ಚೆನ್ನೈ ಅಭಿಪ್ರಾಯಪಟ್ಟರು.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ ಆಶ್ರಯದಲ್ಲಿ ನಡೆದ ‘ಜಯಂತ್ ಕಾಯ್ಕಿಣಿ ಮತ್ತು ಅವರ ಸಾಹಿತ್ಯದ ಜೊತೆ ಒಂದು ದಿನ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಯಂತ್ ಇವರನ್ನು ಚೆಕೋವ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ದೇವನೂರು ಮಹಾದೇವ ಮುಂತಾದವರ ಕಥಾ ಪರಂಪರೆಯ ಹಿನ್ನೆಲೆಯಲ್ಲಿ ನಿಲ್ಲಿಸಿ ನೋಡಿದ ಪ್ರೊ ಚೆನ್ನಿ, ಅವರ ಗದ್ಯವನ್ನು ‘ಅತ್ಯುತ್ತಮ’ ಎಂದು ಬಣ್ಣಿಸಿದರು. ಜನಪ್ರಿಯ ಮಾಧ್ಯಮ ಸಿನೆಮಾ ಸಾಹಿತ್ಯದಲ್ಲಿ ಭಾಗವಹಿಸುವುದರ ಮೂಲಕ ‘ಶ್ರೇಷ್ಠ’ ಮತ್ತು ‘ಜನಪ್ರಿಯ’ದ ಮಧ್ಯದ ಗೋಡೆಯನ್ನು ಜಯಂತ್ ಒಡೆಯುವುದರ ಮೂಲಕ ಹಲವರನ್ನು ದಿಗಿಲುಗೊಳಿಸಿದ್ದಾರೆ ಎಂದರು.ಲೇಖಕಿ ಅಭಿಲಾಷ ಹಂದೆ ಮಾತನಾಡಿ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದ ಮಾನವೀಯ ಎಳೆಗಳನ್ನು ಗುರುತಿಸಿದರು. ವಿಮರ್ಶಕ ಡಾ. ಸಿರಾಜ್ ಅಹಮದ್ ಮಾತನಾಡಿ ಜಯಂತ್ ಕಾವ್ಯ ಸಂಕೀರ್ಣವಾದುದ್ದು, ಸೂಕ್ಷ್ಮವಾದದ್ದು. ಅವರ ಕಥಾಪಾತ್ರಗಳು ಬಂಡವಾಳಶಾಹಿ ಆಧುನಿಕತೆಯನ್ನು ಧೈರ್ಯದಿಂದ ಎದುರಿಸುವಂತವರಾಗಿವೆ ಎಂದರು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ತಮ್ಮ ಪ್ರತಿಪುಸ್ತಕದ ‘ಅರಿಕೆ’ಯಲ್ಲಿ ಜಯಂತ್ ಸಾಹಿತ್ಯದ ತಾತ್ವಿಕತೆಯ ಕುರಿತು, ಒಳನೋಟಗಳನ್ನು ನೀಡುತ್ತ, ದೈನಂದಿನ ವಿವರಗಳಿಂದ ಅಸಾಮಾನ್ಯವನ್ನು ಹೊಳೆಸುತ್ತ ದಾರ್ಶನಿಕರಾಗಿದ್ದಾರೆ ಎಂದರು.ಜಿಸಿಪಿಎಎಸ್ ವಿದ್ಯಾರ್ಥಿಗಳಾದ ಗೌತಮಿ ಕಾಕತ್ಕರ್, ಸಂಪದ ಭಾಗವತ್, ಅಭಿಜಿತ್ ಅನಿಲ್ ಕುಮಾರ್, ಸಘರ್ ಅಡಾ ಇವರು ಜಯಂತ್ ಕತೆಗಳ ಕುರಿತು ಪ್ರಬಂಧ ಮಂಡಿಸಿದರು. ಜಯಂತ್ ಕುರಿತ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ ಅವಿನಾಶ್ ಕಾಮತ್ ಜೊತೆ ಚರ್ಚೆ ನಡೆಯಿತು. ಗಾಯಕಿ ಶ್ರಾವ್ಯ ಬಾಸ್ರಿ ಜಯಂತರ ಚಲನಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ನಂತರದ ಮಾತುಕತೆಯಲ್ಲಿ ಜಯಂತ್ ಕಾಯ್ಕಿಣಿ, ಸಾಹಿತ್ಯದ ತಮ್ಮೆಲ್ಲ ಒಳನೋಟಗಳನ್ನು ತೆರೆದಿಟ್ಟರು. ಪಾಸ್‌ಬುಕ್, ಫೇಸ್‌ಬುಕ್‌ಗಳಾಚೆ ಹಿರಿಯ ಲೇಖಕರ ಬುಕ್''''''''ಗಳನ್ನ ಓದಲು ಕಿರಿಯ ಲೇಖಕರಿಗೆ ಕರೆನೀಡಿದ ಅವರು, ನೀವು ಜನರ ಜೊತೆ ಬೆರೆತಾಗ ಕಥೆಗಳು ಹುಟ್ಟಿಕೊಳ್ಳುತ್ತವೆ ಎಂದು ಹೇಳಿದರು.