ಕೈಗಾರಿಕೆ ಅಪಘಾತ ತಡೆಯಲು ಕಠಿಣ ಕ್ರಮಕ್ಕೆ ಸಿಐಟಿಯು ಆಗ್ರಹ

| Published : May 14 2024, 01:03 AM IST

ಕೈಗಾರಿಕೆ ಅಪಘಾತ ತಡೆಯಲು ಕಠಿಣ ಕ್ರಮಕ್ಕೆ ಸಿಐಟಿಯು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ ಬೃಹತ್ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಹೇರಳವಾಗಿದ್ದು, ಕಾರ್ಮಿಕರಿಗೆ ಸುರಕ್ಷತೆ ಇಲ್ಲದಾಗಿದೆ.

ಬಳ್ಳಾರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಕೈಗಾರಿಕಾ ಅಪಘಾತಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಜೀವಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಬೃಹತ್ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಹೇರಳವಾಗಿದ್ದು, ಕಾರ್ಮಿಕರಿಗೆ ಸುರಕ್ಷತೆ ಇಲ್ಲದಾಗಿದೆ. ಬಳ್ಳಾರಿಯ ಗುಗ್ಗರಹಟ್ಟಿ ಮತ್ತು ಬಿಟಿಪಿಎಸ್ ಅಪಘಾತದ ಆತಂಕದಲ್ಲಿರುವಾಗಲೇ ಸಂಡೂರು ತಾಲೂಕಿನ ತೋರಣಗಲ್‌ ಬಳಿಯ ಜಿಂದಾಲ್ ಕೈಗಾರಿಕೆಯಲ್ಲಿ ಸಂಭವಿಸಿರುವ ಅಪಘಾತ ಕಾರ್ಮಿಕರಲ್ಲಿ ಭಯಭೀತಗೊಳಿಸಿದೆ. ಜಿಂದಾಲ್ ಸ್ಟೀಲ್ ಕೈಗಾರಿಕೆಯಲ್ಲಿ ಬಿಸಿ ನೀರು ಹರಿಸುವ ಪೈಪ್ ಲೈನ್ ದುರಸ್ತಿ ವೇಳೆ ಮೂವರು ಇಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ ಎಂದರು.

ಕಾರ್ಮಿಕ ಸುರಕ್ಷತೆ ಕಾಯ್ದೆಗಳು ಹಾಗೂ ಕಾರ್ಖಾನೆಗಳ ಕಾಯಿದೆಯನ್ನು ಜಿಂದಾಲ್ ಸ್ಟೀಲ್ ಕಾರ್ಖಾನೆ ಸಂಪೂರ್ಣ ಉಲ್ಲಂಘಿಸಿದೆ. ಕೈಗಾರಿಕೆಗಳಲ್ಲಿನ ಕಾರ್ಮಿಕರ ಅಪಘಾತ ಸಾವುಗಳಿಗೆ ಕೈಗಾರಿಕಾ ಮಾಲೀಕರು ಮತ್ತು ಆಡಳಿತ ವರ್ಗದ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದರು.

ಜಿಲ್ಲಾಡಳಿತವು ಕಾರ್ಮಿಕರ ಸುರಕ್ಷತೆ ಕಾಪಾಡಬೇಕು. ಕಾರ್ಖಾನೆ ಮಾಲೀಕರ ಪ್ರಭಾವ ಹಾಗೂ ಒತ್ತಡಕ್ಕೆ ಒಳಗಾಗಿರುವ ಕಾರ್ಮಿಕ ಇಲಾಖೆ, ಕೈಗಾರಿಕೆ ಬಾಯ್ಲರ್‌ಗಳು ಕಾರ್ಮಿಕರ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆಗಳು ಕಾರ್ಮಿಕರ ರಕ್ಷಣೆಯಲ್ಲಿ ನಿಷ್ಕ್ರಿಯವಾಗಿವೆ ಎಂದರು.

ಜಿಲ್ಲಾಡಳಿತವು ಕೈಗಾರಿಕೆಗಳ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಗಳನ್ನು ಕೈಗೊಂಡು ತಪ್ಪಿತಸ್ಥರನ್ನು ಶಿಕ್ಷಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ.ಸತ್ಯಬಾಬು ಮಾತನಾಡಿ, ಕೈಗಾರಿಕೆ ಅಪಘಾತಗಳಲ್ಲಿ ಕೈಗಾರಿಕಾ ಮಾಲೀಕರು ಮತ್ತು ಆಡಳಿತ ವರ್ಗದ ಉನ್ನತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಮೊಕದ್ದಮೆಗಳನ್ನು ಹೂಡಿ ಕಾನೂನು ಕ್ರಮ ಕೈಗೊಳ್ಳಬೇಕು. ಜಿಂದಾಲ್ ಸ್ಟೀಲ್ ಕಾರ್ಖಾನೆಯಲ್ಲಿ ಸಂಭವಿಸಿದ ದುರಂತದ ಪ್ರಕರಣದಲ್ಲಿ ಜಿಂದಾಲ್ ಸ್ಟಿಲ್ ಸಂಸ್ಥೆಯ ಅಧ್ಯಕ್ಷ ಪಿ.ಕೆ. ಮುರುಗನ್, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಸಂಜೀವ್ ಹೊಂಡರ ಹಾಗೂ ಕಂಪನಿ ಸುರಕ್ಷತೆ ವಿಭಾಗದ ಮುಖ್ಯಸ್ಥರನ್ನು ಹೊಣೆಗಾರನಾಗಿ ಮಾಡಬೇಕು.ಅವರ ಮೇಲೆ ಕೇಸ್‌ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು.

ಕಾರ್ಮಿಕರ ಕುಂದುಕೊರತೆಗಳ ಚರ್ಚಿಸಲು ಕಾರ್ಮಿಕರ ಸಂಘಟನೆಗಳು ಹಾಗೂ ಕೈಗಾರಿಕೆಗೆಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳು ಸಭೆ ನಡೆಸಿ, ಸುರಕ್ಷತೆಯ ಕ್ರಮ, ಸೌಲಭ್ಯಗಳ ಕುರಿತ ಚರ್ಚಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ, ಜಂಟಿ ಕಾರ್ಯದರ್ಶಿ ಎರಿಸ್ವಾಮಿ, ಎಂ.ತಿಪ್ಪೇಸ್ವಾಮಿ, ಓಬಳೇಶಪ್ಪ, ಈರಣ್ಣಬೆಲ್ಲದ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ್, ಮಸಣ ಕಾರ್ಮಿಕರ ಸಂಘದ ಅಧ್ಯಕ್ಷ ಎ.ಸ್ವಾಮಿ, ನಾಗರಾಜ್, ಡಿವೈಎಫ್‌ಐನ ಎರಿಸ್ವಾಮಿ ಸೇರಿದಂತೆ ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಮನವಿಪತ್ರ ಸ್ವೀಕರಿಸಿದರು.