ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಜಾತಿಯವರು ಸೇರಿಕೊಂಡು ಆಚರಿಸಿದರೆ ಮಾತ್ರ ಅಂತಹ ಕಾರ್ಯಕ್ರಮಗಳಿಗೆ ಶೋಭೆ ಬರುತ್ತದೆ. ಕೇವಲ ಒಂದು ಸಮುದಾಯಕ್ಕೆ ಸೀಮಿತಗೋಳಿಸದೇ ಒಗ್ಗಟ್ಟಿನಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯಕ್ಕೆ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಕೌಜಲಗಿ ಗ್ರಾಮದ ಬಸವೇಶ್ವರ ಪೇಟೆಯಲ್ಲಿ ಮಂಗಳವಾರ ಜರುಗಿದ ಕಿತ್ತೂರು ರಾಣಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ಪುರುಷರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದೆಂದು ಕಿವಿಮಾತು ಹೇಳಿದರು.
ಅರಬಾವಿ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಎಲ್ಲ ಮಹಾನ್ ಪುರುಷರ ಜಯಂತಿ ಉತ್ಸವ ಕಾರ್ಯಕ್ರಮಗಳನ್ನು ಎಲ್ಲ ಜಾತಿಯ ಜನರೊಂದಿಗೆ ಆಚರಿಸಲಾಗುತ್ತಿದೆ. ಈ ಮೂಲಕ ನಮ್ಮ ಜನರು ಸಾಮರಸ್ಯ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗೀರಥ ಮಹರ್ಷಿ, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ವಿವಿಧ ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ದೊಡ್ಡಮಟ್ಟದಲ್ಲಿ ಆಚರಿಸುತ್ತಾ ಬರುತ್ತಿದ್ದೇವೆ. ಜೊತೆಗೆ ಸಣ್ಣ ಜಾತಿಗೆ ಸೇರಿರುವ ದಾರ್ಶನಿಕ ಪುರುಷರ ಸ್ಮರಣೆ ಮಾಡುವ ಮೂಲಕ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುತ್ತಿದ್ದೇವೆ ಎಂದವರು ತಿಳಿಸಿದರು.ಜನರ ಆಶೀರ್ವಾದದಿಂದ ಚುನಾಯಿತಗೊಂಡು ಪ್ರಮಾಣ ವಚನ ಮಾಡುವ ನಾವು ಅದರಂತೆ ನಡೆದುಕೊಳ್ಳಬೇಕಿದೆ. ರಾಗ, ದ್ವೇಷ, ಅಸೂಯೆ ಮರೆತು ಜನರ ಕೆಲಸ ಮಾಡಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಜನರ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ತರದೇ ಅವರ ಭಾವನೆಗಳನ್ನು ಗೌರವಿಸುವ ಕೆಲಸವನ್ನು ನಮ್ಮಂತಹ ಜನಪ್ರತಿನಿಧಿಗಳು ಮಾಡಬೇಕಿದೆ. ನಾವು ಮಾಡುವ ಯಾವುದೇ ಕೆಲಸಗಳು ಜನರ ಹೃದಯ ತಲುಪಬೇಕು. ಹೊರತು ನಮ್ಮನ್ನು ಸಾರ್ವಜನಿಕವಾಗಿ ಕೆಟ್ಟದಾಗಿ ಮಾತಾಡುವ ಮುನ್ನವೇ ಅಧಿಕಾರದಿಂದ ಕೆಳಗಿಳಿಯಬೇಕು. ಅಧಿಕಾರ ಎಂದಿಗೂ ಶಾಶ್ವತವಲ್ಲ. ಆದರೆ, ಅಧಿಕಾರ ಸಿಕ್ಕಾಗ ಕಷ್ಟ ಕಾಲದಲ್ಲಿ ಬೆಂಬಲಕ್ಕೆ ನಿಂತ ಜನರನ್ನು ನಾವು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಕೌಜಲಗಿ ತಾಲೂಕು ರಚನೆಗೆ ಕ್ರಮ:ಆಡಳಿತಾತ್ಮಕ ದೃಷ್ಟಿಯಿಂದ ಕೌಜಲಗಿ ಹೊಸ ತಾಲೂಕು ರಚನೆಯಾಗಬೇಕಿದೆ. ಕಳೆದ 40 ವರ್ಷಗಳಿಂದ ಕೌಜಲಗಿ ಮತ್ತು ಸುತ್ತಲಿನ ಗ್ರಾಮಸ್ಥರು ಸೇರಿಕೊಂಡು ಒಂದಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಎಲ್ಲ ರೀತಿಯಿಂದಲೂ ಸಹಕಾರ ನೀಡಲು ಸಿದ್ಧನಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡಿಕೊಳ್ಳೋಣ ಎಂದು ತಿಳಿಸಿದರು. ಕೌಜಲಗಿಗೆ ಅಗತ್ಯವಿರುವ ರಾಷ್ಟ್ರೀಕೃತ ಬ್ಯಾಂಕ ತೆರೆಯಲು ಸಂಬಂಧಪಟ್ಟವರಿಗೆ ಈಗಾಗಲೇ ಪತ್ರ ವ್ಯವಹಾರ ಮಾಡಲಾಗಿದೆ. ಸಂಸತ್ ಸದಸ್ಯ ಜಗದೀಶ ಶೆಟ್ಟರ್ ಮೂಲಕ ಪ್ರಯತ್ನಿಸುವ ವಾಗ್ದಾನ ಮಾಡಿದರು.
ಕೌಜಲಗಿ ಭಾಗದ ರೈತರಿಗೆ ಈಗಾಗಲೇ ಕಲ್ಮಡ್ಡಿ ಯೋಜನೆ ಸಾಕಾರಗೊಳಿಸಲಾಗಿದೆ. ಇದನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು. ಬೇಸಿಗೆಯ ಸಮಯದಲ್ಲಿ ಕೌಜಲಗಿ ರೈತರಿಗೆ ಅನ್ಯಾಯವಾಗಬಾರದು. ಇತರೆ ಗ್ರಾವಗಳ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.ಸುಣಧೋಳಿಯ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಮುರುಘರಾಜೇಂದ್ರ ಶಿವಾಚಾರ್ಯರು, ಸ್ಥಳೀಯ ಮರುಳಸಿದ್ಧೇಶ್ವರ ಮಠದ ಕೃಪಾನಂದ ಸ್ವಾಮೀಜಿ, ಶ್ರೀಕಾಂತ ವಿರಕ್ರಮಠ ವಹಿಸಿದ್ದರು.
ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಬಿಡಿಸಿಸಿ ಬ್ಯಾಂಕ್ ಪ್ರಭಾರ ಅಧ್ಯಕ್ಷ ಸುಭಾಸ ಢವಳೇಶ್ವರ, ಪ್ರದೇಶ ಕುರುಬರ ಸಂಘದ ನಿರ್ದೆಶಕ ರಾಜೇಂದ್ರ ಸಣ್ಣಕ್ಕಿ, ಪ್ರಭಾ ಶುಗರ್ ಉಪಾಧ್ಯಕ್ಷ ರಾಮಣ್ಣ ಮಹಾರೆಡ್ಡಿ, ನಿರ್ದೆಶಕ ಕೆಂಚನಗೌಡ ಪಾಟೀಲ, ಜಿಲ್ಲಾ ಹಾಲು ಒಕ್ಕೂಟದ ನಿರ್ದೆಶಕ ಮಲ್ಲು ಪಾಟೀಲ, ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಬಿ.ಡಿ.ಪಾಟೀಲ, ಎಂ. ಎಂ. ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಮುಖಂಡರಾದ ರವೀಂದ್ರ ಪರುಶೆಟ್ಟಿ, ಶಿವಾನಂದ ಲೋಕನ್ನವರ, ಪರಮೇಶ್ವರ ಹೊಸಮನಿ, ಸುಭಾಸ ಕುರಬೇಟ, ಸುಭಾಸ ಕೌಜಲಗಿ, ನೀಲಪ್ಪ ಕೇವಟಿ, ಮಹಾಂತಪ್ಪ ಶಿವನಮಾರಿ, ಮಹೇಶ ಪಟ್ಟಣಶೆಟ್ಟಿ, ಅಶೋಕ ಹೊಸಮನಿ, ಅಶೋಕ ಶಿವಾಪೂರ, ಬಸಪ್ಪ ದಾನನ್ನವರ, ಈರಪಣ್ಣ ಬಿಸಗುಪ್ಪಿ, ಕರೆಪ್ಪ ಬಿಸಗುಪ್ಪಿ, ಶ್ರೀಶೈಲ ಗಾಣಿಗೇರ, ಸುತ್ತಮುತ್ತಲಿನ ಅನೇಕ ಮುಖಂಡರು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಮಳೆಯಿಂದಾಗಿ ಕ್ಷೇತ್ರದ ಕೆಲ ರಸ್ತೆಗಳು ಹದಿಗೆಟ್ಟಿವೆ. ಇವುಗಳ ದುರಸ್ತಿ ಕಾರ್ಯಗಳಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ₹60 ಕೋಟಿ ಅನುದಾನ ನೀಡುವಂತೆ ಕೋರಲಾಗಿದೆ. ಈಗೀರುವುದು ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ನಾನೇನು ಮಾಡಲಿ? ನಮ್ಮ ಬಿಜೆಪಿ ಸರ್ಕಾರವಿದ್ದಾಗ ಬಡಿದಾಡಿ ಅನುದಾನ ತರುತ್ತಿದ್ದೆ. ಇವರು ಕೊಡುತ್ತಿಲ್ಲ. ಇದರಲ್ಲಿ ನನ್ನ ತಪ್ಪು ಇಲ್ಲ. ಬೈಯುದಿದ್ದರೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿ, ನನ್ನನ್ನಲ್ಲ.- ಬಾಲಚಂದ್ರ ಜಾರಕಿಹೊಳಿ ಶಾಸಕ ಅರಬಾವಿ ಕ್ಷೇತ್ರ