ಕನ್ನಡಪ್ರಭ ವಾರ್ತೆ ಭದ್ರಾವತಿ
ಸರ್ಕಾರ ಮಹಾನ್ ಆದರ್ಶ ವ್ಯಕ್ತಿಗಳ ಜಯಂತಿಗೆ ಸಾರ್ವಜನಿಕ ರಜೆ ನೀಡುವ ಬದಲು ಆದರ್ಶ ವ್ಯಕ್ತಿಗಳ ಕುರಿತು ಯುವ ಸಮುದಾಯಕ್ಕೆ ಮಾಹಿತಿ ನೀಡುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಚಿಕ್ಕಮಗಳೂರು ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಶ್ರೀ ಡಾ. ಬಸವಮರುಳಸಿದ್ದ ಮಹಾಸ್ವಾಮಿಯವರು ಸಲಹೆ ವ್ಯಕ್ತಪಡಿಸಿದರು.ಹಳೇನಗರದ ಶ್ರೀ ಅಕ್ಕಮಹಾದೇವಿ ಬಳಗದಿಂದ ಗುರುವಾರ ವೀರವೀರಾಗಿಣಿ, ಕನ್ನಡದ ಪ್ರಪ್ರಥಮ ಮಹಿಳಾ ಕವಯಿತ್ರಿ, ಜಗದ ಅಕ್ಕ ಶ್ರೀ ಅಕ್ಕಮಹಾದೇವಿಯವರ ಜಯಂತ್ಯುತ್ಸವ ಸಮಾರಂಭದ ಅಂಗವಾಗಿ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಜಾಗೃತಿ ದಿನಾಚರಣೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಶ್ರೀಗಳು ಆಶೀವರ್ಚನ ನೀಡಿದರು.
ಸರ್ಕಾರ ಆದರ್ಶ ವ್ಯಕ್ತಿಗಳ ಜಯಂತಿಗಳಂದು ಸಾರ್ವಜನಿಕ ರಜೆ ನೀಡುವುದು ಸರಿಯಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಆದರ್ಶ ವ್ಯಕ್ತಿಗಳ ಜಯಂತಿಗಳಂದು ಆವರ ಕುರಿತು ಮಾಹಿತಿ ನೀಡುವ ಮೂಲಕ ಅರ್ಥಪೂರ್ಣವಾಗಿ ಜಯಂತಿಗಳನ್ನು ಆಚರಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ಯುವ ಸಮುದಾಯಕ್ಕೆ ಹೆಚ್ಚಿನ ಮಾಹಿತಿ ಲಭಿಸಬೇಕು. ಕೇವಲ ನೆಪ ಮಾತ್ರಕ್ಕೆ ಜಯಂತಿ ಆಚರಣೆಯಾಗಬಾರದು ಎಂದರು.ಅಕ್ಕಮಹಾದೇವಿಯವರು ಚನ್ನಮಲ್ಲಿಕಾರ್ಜುನನ ಒಲುಮೆಗಾಗಿ ದಿಗಂಬರ ಸನ್ಯಾಸಿಯಾದರು. ಆದರೆ ಪ್ರಸ್ತುತ ತಾವು ಸಹ ಏಕಾಗಬಾರದು ಎಂಬ ಪ್ರಶ್ನೆಯನ್ನು ಹರೆಯದ ಕನ್ಯೆಯರು ಪ್ರಶ್ನಿಸುತ್ತಾರೆ? ಅಕ್ಕಮಹಾದೇವಿಯವರು ಜಗತ್ತಿಗೋಸ್ಕರ ದಿಗಂಬರರಾದರು ಹೊರತು, ಯಾವುದೇ ಆಸೆಗೋಸ್ಕರ ಅಲ್ಲ ಎಂದರು.
ಛಲ ಹಾಗೂ ಧೈರ್ಯದಿಂದ ೧೨ನೇ ಶತಮಾನದ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಅಕ್ಕಮಹಾದೇವಿ ನಡೆಸಿದ ಹೋರಾಟ ಅನುಕರಣೀಯ. ಅಂದಿನ ಸಮಾಜ ತನಗೆಸೆದ ಸವಾಲುಗಳನ್ನು ಆತ್ಮಬಲದಿಂದ ಎದುರಿಸಿ ಅಕ್ಕಮಹಾದೇವಿ ಜಯಿಸಿದಳು ಎಂದರು.
ಅಕ್ಕ ಮಹಾದೇವಿ ವಿರಚಿತ ವಚನಗಳಲ್ಲಿ ಪ್ರಕೃತಿಯಲ್ಲಿ ದೇವರನ್ನು ಹುಡುಕುವ ಹಂಬಲವಿದೆ. ತನ್ನ ಇಷ್ಟದೈವವಾದ ಚನ್ನಮಲ್ಲಿಕಾರ್ಜುನನನ್ನು ಅರಸುತ್ತ ಗಿಳಿ, ನವಿಲು, ತರುಲತೆಗಳ ಜೊತೆ ಅವರು ನಡೆಸುವ ಸಂವಹನ ಕನ್ನಡ ಕಾವ್ಯದಲ್ಲಿ ನಡೆದಿರುವ ಅಪರೂಪದ ಪ್ರಯೋಗ ಎಂದರು.
ಶ್ರೀ ಅಕ್ಕಮಹಾದೇವಿ ದೇಹಾಂಗ ದಾನ ಪ್ರೇರಣ ವೇದಿಕೆಯಿಂದ ಮರಣ ನಂತರ ದೇಹಾಂಗ ದಾನ ಮಾಡುವ ಬಗ್ಗೆ ಸಭೆಯಲ್ಲಿ ೧೩ ಜನ ನೀಡಿದ ವಚನ (ಒಪ್ಪಿಗೆ) ಪತ್ರದ ಬಗ್ಗೆ ಶ್ರೀಗಳು ಮಾತನಾಡಿ, ಕೆಲ ನೈಜ ಘಟನೆಗಳೊಂದಿಗೆ ದೇಹದಾನದ ಮಹತ್ವ ವಿವರಿಸಿದರು.ಅಕ್ಕಮಹಾದೇವಿಯ ಜೀವನ ಹಾಗೂ ಸಂದೇಶದ ಕುರಿತು ಉಪನ್ಯಾಸ ನೀಡಿದ ಕುವಿವಿಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ, ಮುಖ್ಯವಾಹಿನಿಯಲ್ಲಿ ಮಹಿಳೆಗೆ ಪ್ರಾತಿನಿಧ್ಯವಿರದಿದ್ದ ಕಾಲಮಾನದಲ್ಲಿ ಅಕ್ಕಮಹಾದೇವಿ ಮಹತ್ವದ ಸಾಹಿತ್ಯಿಕ ಪ್ರಯೋಗಗಳನ್ನು ನಡೆಸಿದಳು. ದಿಟ್ಟತನ ಹಾಗೂ ತಾಳ್ಮೆ ಅಕ್ಕಮಹಾದೇವಿಯ ವ್ಯಕ್ತಿತ್ವ ಹಾಗೂ ಕಾವ್ಯದಲ್ಲಿ ಕಂಡುಬರುವ ಪ್ರಧಾನ ಗುಣಗಳು ಎಂದರು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ ಹಿರೇಮಠ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನೇಶ್ ಮಾತನಾಡಿದರು.ಅಕ್ಕಮಹಾದೇವಿ ಬಳಗದ ಸಂಚಾಲಕ ಟಿ.ಜಿ ಬಸವರಾಜಯ್ಯ, ಆರ್. ಮಲ್ಲಿಕಾಂಬ, ಗಂಗಾ ಕುಬ್ಸದ್ ಉಪಸ್ಥಿತರಿದ್ದರು. ಶ್ರೀ ಅಕ್ಕಮಹಾದೇವಿ ಬಳಗದ ಅಧ್ಯಕ್ಷೆ ಸುವರ್ಣಮ್ಮ ಹಿರೇಮಠ್, ಸಂಚಾಲಕ ಟಿ.ಜಿ ಬಸವರಾಜಯ್ಯ ದಂಪತಿ, ಪತ್ರಕರ್ತ ಕೆ.ಆರ್ ಶಂಕರ್ ದಂಪತಿ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಸೇರಿದಂತೆ ೧೩ ಜನರು ಸ್ವಯಂ ಪ್ರೇರಣೆಯಿಂದ ದೇಹಾಂಗ ದಾನಕ್ಕೆ ವಚನ ಪತ್ರ ನೀಡಿ, ಶ್ರೀಗಳಿಂದ ಆಶೀರ್ವಾದ ಪಡೆದರು.