ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸಮಾಜಕ್ಕಾಗಿ ಹಾಗೂ ದೇಶಕ್ಕಾಗಿ ಕೊಡುಗೆ ನೀಡಿದ ಮಹಾಪುರುಷರ ಜಯಂತಿಗಳನ್ನು ಸರ್ಕಾರ ಆಚರಿಸಿಕೊಂಡು ಬರುತ್ತಿದ್ದು ಮಹಾತ್ಮರ ಜಯಂತಿಗಳನ್ನು ಆಚರಿಸುವುದು ಅವರ ಮೌಲ್ಯ, ತತ್ವಾದರ್ಶ, ಸಾಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದಾಗಿದ್ದು ಈ ನಿಟ್ಟಿನಲ್ಲಿ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಒಬ್ಬ ವ್ಯಕ್ತಿ ಹೇಗೆ ಬದುಕಬೇಕೆಂಬುದನ್ನು ತಮ್ಮ ರಾಮಾಯಣ ಮಹಾಕಾವ್ಯದಲ್ಲಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ಸಹೋದರೆ, ಸಮಾನತೆಯ ಇರಬೇಕೆಂಬ ಉದ್ದೇಶದಿಂದ ರಾಮಾಯಣ ಕಾವ್ಯದಲ್ಲಿ ರಾಮ ರಾಜ್ಯದ ಪರಿಕಲ್ಪನೆಯನ್ನು ಬರೆದಿದ್ದಾರೆ. ಅದರಂತೆ ನಾವೆಲ್ಲರೂ ಒಂದೇ ಎಂಬ ಸಂಕಲ್ಪ ಸಹೋದರತೆ, ಜೀವನ ನಡೆಸಿದಾಗ ಮಾತ್ರ ಇಂತಹ ಜಯಂತಿಗಳಿಗೆ ಅರ್ಥ ಲಭಿಸುತ್ತದೆ ಎಂದರು. ಉಪವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡಿ, ಮಹರ್ಷಿ ವಾಲ್ಮೀಕಿ ಬದುಕಿನ ಸರ್ವಶ್ರೇಷ್ಠವಾದ ಮೌಲ್ಯಗಳನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ಜಗದ ಜನರು ಉತ್ತಮ ಜೀವನ ನಡೆಸಲು ಮುನ್ನುಡಿಯನ್ನು ಬರೆದರು. ಅದೇ ರೀತಿ ಇದೆ ಸಮಾಜದ ಎಲ್.ಜೆ. ಹಾವನೂರುರವರು ಸಹ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ವೈಜ್ಞಾನಿಕ ವರದಿ ಸಲ್ಲಿಸಿದ ಪರಿಣಾಮ ಇಂದಿಗೂ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದರು. ನಗರಸಭಾ ಸದಸ್ಯ ಹಾಗೂ ವಾಲ್ಮೀಕಿ ಸಮಾಜದ ಅಧ್ಯಕ್ಷ ಮಹೇಶ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಎಲ್ಲಾ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು ಜಗತ್ತಿಗೆ ಆದರ್ಶ ರಾಮಾಯಣವನ್ನು ರಚಿಸಿ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ನಮ್ಮ ಸಮಾಜ ಶಿಕ್ಷಣದಿಂದ ಬಹಳಷ್ಟು ಹಿಂದುಳಿದಿದ್ದು ಸಮಾಜ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಅವಶ್ಯಕತೆ ಇದ್ದು ಶಿಕ್ಷಣದ ಕಡೆ ಹೆಚ್ಚು ಆದ್ಯತೆ ನೀಡಿದರೆ ಮುಂದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದಬಹುದು ಎಂದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ನಗರದ ಶ್ರೀಕೆಂಪಮ್ಮ ದೇವಿ ದೇವಸ್ಥಾನದಿಂದ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆ ಪೂರ್ಣಕುಂಭ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಡೆಯಿತು. ಪ್ರಾಧ್ಯಾಪಕ ಡಾ. ನಾಗಭೂಷಣ್ ಬಗ್ಗನಡು ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ನಗರಸಭೆ ಪ್ರಭಾರ ಅಧ್ಯಕ್ಷೆ ಮೇಘಶ್ರೀ ಭೂಷಣ್, ತಹಸೀಲ್ದಾರ್ ಮೋಹನ್‌ಕುಮಾರ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ತಾ.ಪಂ ಇಓ ಸುದರ್ಶನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತ್ರಿವೇಣಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ಬಿಇಒ ತಾರಮಣಿ, ಡಿವೈಎಸ್‌ಪಿ ಯಶ್‌ಕುಮಾರ್ ಶರ್ಮಾ, ಸಿಡಿಪಿಒ ದೀಪಾಹೆಬ್ಬಳ್ಳಿ, ಸಣ್ಣ ನೀರಾವರಿ ಇಲಾಖೆ ದೊಡ್ಡಯ್ಯ, ಗ್ರೇಡ್-೨ ತಹಸೀಲ್ದಾರ್ ಜಗನ್ನಾಥ್ ಸೇರಿದಂತೆ ನಗರಸಭೆ ಸದಸ್ಯರು, ಸಮಾಜದ ಮುಖಂಡರು ಭಾಗವಹಿಸಿದ್ದರು.