ಜೀರ್ಣೋದ್ಧಾರ ದೇವಾಲಯ ಲೋಕಾರ್ಪಣೆ

| Published : Aug 28 2024, 12:47 AM IST

ಸಾರಾಂಶ

ತಾಲೂಕಿನ ಕೋಡಿಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ ಮತ್ತು ವಿಮಾನಗೋಪುರ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ವಿಧಿ ವಿಧಾನಗಳಿಂದ ನೆರವೇರಿತು

ಕನಕಪುರ: ತಾಲೂಕಿನ ಕೋಡಿಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಲಯ ಪುನರ್ ಪ್ರತಿಷ್ಠಾಪನೆ ಮತ್ತು ವಿಮಾನಗೋಪುರ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ವಿಧಿ ವಿಧಾನಗಳಿಂದ ನೆರವೇರಿತು.

ಕೋಡಿಹಳ್ಳಿ ಮುಖ್ಯರಸ್ತೆಯಲ್ಲಿ 124 ವರ್ಷ ಇತಿಹಾಸವಿರುವ ದೇಗುಲದ ಜೀರ್ಣೋದ್ಧಾರ ಮತ್ತು ವಿವಿಧ ಪೂಜಾಕೈಂಕರ್ಯಗಳನ್ನು ನೆರವೇರಿಸ ಲಾಯಿತು. ದೇಗುಲಮಠದ ಶ್ರೀ ಚನ್ನಬಸವ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ಮರಳೇಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿಗಳು ಪೂಜಾಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಮಾಜಿ ಸಂಸದ ಡಿ.ಕೆ.ಸುರೇಶ್ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ಹೊಸದುರ್ಗ ರಾಮದೇವರ ಬೆಟ್ಟ, ಕಲ್ಲಹಳ್ಳಿ ಶ್ರೀನಿವಾಸ ಹಾಗೂ ಕೋಡಿಹಳ್ಳಿಯ ಲಕ್ಷ್ಮಿವೆಂಕಟೇಶ್ವರ ದೇವಾಲಯ ಗಳು ಬಹಳ ಪುರಾತನ ಇತಿಹಾಸವನ್ನು ಹೊಂದಿವೆ. ಈ ದೇಗುಲವು ಜೀರ್ಣೋದ್ಧಾರವಾಗಬೇಕು ಎಂಬುದು ಕೋಡಿಹಳ್ಳಿ ಜನತೆಯ ಬಹುದಿನಗಳ ಕನಸಾಗಿತ್ತು. ಆದರೆ ಇಂದು ಜೀರ್ಣೋದ್ಧಾರ ಸೇವಾ ಸಮಿತಿ ಮತ್ತು ಭಕ್ತರ ಆಶಯದಂತೆ ಇಂದು ಲೋಕಾರ್ಪಣೆಯಾಗಿದೆ ಎಂದರು.

ದೇವಾಲಯ ಜೀರ್ಣೋದ್ಧಾರ ಮತ್ತು ಸೇವಾಸಮಿತಿ ಅಧ್ಯಕ್ಷ ರವಿಕುಮಾರ್ ದೇಗುಲದ ಇತಿಹಾಸ, ಪರಂಪರೆ ಮತ್ತು ದೇಗುಲ ನಿರ್ಮಾಣದ ಆಗು-ಹೋಗುಗಗಳನ್ನು ಸಭೆಗೆ ವಿವರಿಸಿದರು. ಸಂಜೆ ಶ್ರೀ ವೆಂಕಟರಮಣಸ್ವಾಮಿ ಹಾಗು ಗ್ರಾಮದೇವರುಗಳ ಬೆಳ್ಳಿಪಲ್ಲಕ್ಕಿ ಉತ್ಸವವನ್ನು ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೈಸೂರಿನ ಗುರುಮೂರ್ತಿ ಶಾಸ್ತ್ರಿ, ಕೋಡಿಹಳ್ಳಿ ವಿವೇಶ್‌ ಶಾಸ್ತ್ರಿ, ಹಿಂದೂಪುರದ ಅಶ್ವಿತ್‌ ಶಾಸ್ತ್ರಿ ಪೂಜಾಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಭೂದಾನಿಗಳಾದ ರಘುನಾಥ್, ಅಶ್ವಥ್‌ಕುಮಾರ್, ಜಿಲ್ಲಾ ಅರಣ್ಯಾಧಿಕಾರಿ ರಾಮಕೃಷ್ಣಪ್ಪ, ದೇವಾಲಯ ಸೇವಾ ಸಮಿತಿ ಕಾರ್ಯದರ್ಶಿ ಉಮಾಕಾಂತ್, ಉಪಕಾರ್ಯದರ್ಶಿ ಅಶೋಕ್, ಖಜಾಂಚಿ ಬಸವರಾಜು, ಅಖಿಲಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಉಮಾಶಂಕರ್ ಸೇರಿದಂತೆ ಅನೇಕ ಮುಖಂಡರು, ಭಕ್ತಾದಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.