ನರಸಿಂಹರಾಜಪುರಜೇಸಿ ಸಂಸ್ಥೆಯಿಂದ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುತ್ತಿದ್ದೇವೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಸ್ಥಾಪಕ ಅಧ್ಯಕ್ಷ ಎಚ್.ಆರ್.ದಿನೇಶ್ ಹೇಳಿದರು.

- ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ವಿದ್ಯಾರ್ಥಿನಿಯರಿಗೆ ಆಶುಭಾಷಣ ಸ್ಪರ್ಧೆ, ಸನ್ಮಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜೇಸಿ ಸಂಸ್ಥೆಯಿಂದ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುತ್ತಿದ್ದೇವೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಸ್ಥಾಪಕ ಅಧ್ಯಕ್ಷ ಎಚ್.ಆರ್.ದಿನೇಶ್ ಹೇಳಿದರು.ಗುರುವಾರ ಪಟ್ಟಣದ ಬಸ್ತಿಮಠದ ಜ್ವಾಲಾಮಾಲಿನಿ ಬಾಲಿಕಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಆಶುಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ನರಸಿಂಹರಾಜಪುರದಲ್ಲಿ ಕಳೆದ 37 ವರ್ಷಗಳ ಹಿಂದೆ ಜ್ವಾಲಾ ಮಾಲಿನಿ ಜೇಸಿ ಸಂಸ್ಥೆ ಪ್ರಾರಂಭವಾಗಿದೆ. ಜೇಸಿ ಸಂಸ್ಥೆ ಸದಸ್ಯರಿಗೆ ನಾಯಕತ್ವ ಗುಣ ಬೆಳೆಸುತ್ತದೆ. ವ್ಯಕ್ತಿತ್ವ ವಿಕಸನ ಕಲಿಸಲು ಆದ್ಯತೆ ನೀಡುತ್ತಿದೆ. ಯುವಜನರಿಗೆ ಭಾಷಣ, ಸಂವಹನ ಕಲೆಯಲ್ಲಿ ಹಲವಾರು ತರಬೇತಿ ನೀಡಲಾಗುತ್ತದೆ. ಯುವಜನರು ಜೇಸಿ ಸಂಸ್ಥೆಗೆ ಸೇರಿ ಉತ್ತಮ ತರಬೇತಿ ಪಡೆದು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆದು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು.

ಅತಿಥಿಯಾಗಿದ್ದ ಜೇಸಿ ವಲಯ 14ರ ಮಾಜಿ ಉಪಾಧ್ಯಕ್ಷ ಚರಣ್ ರಾಜ್ ಮಾತನಾಡಿ, ಜೇಸಿ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ರಾಷ್ಟ್ರೀಯ ತರಬೇತುದಾರರಿಂದ ತರಬೇತಿ ಹಮ್ಮಿ ಕೊಳ್ಳಲಾಗುತ್ತದೆ. ಎಸ್.ಎಸ್.ಎಲ್.ಸಿಯಲ್ಲಿ ಕನ್ನಡದಲ್ಲಿ ಅತಿಹೆಚ್ಚು ಹಾಗೂ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವೈಯ್ಯಕ್ತಿಕವಾಗಿ ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ಆದರ್ಶ್ ಬಿ.ಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಜೇಸಿ ಸಂಸ್ಥೆಯಿಂದ ಶಾಲಾ, ಕಾಲೇಜು ಮಕ್ಕಳಲ್ಲಿ ಆತ್ಮ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಹಲವು ಸ್ಪರ್ಧೆ ಹಾಗೂ ತರಬೇತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಅಲ್ಲದೆ ಜೇಸಿ ಸಂಸ್ಥೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಸಹ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಸುಜಾತಾ, ಜೇಸಿ ಸಂಸ್ಥೆ ಕಾರ್ಯದರ್ಶಿ ರಜಿತ್ ವಗ್ಗಡೆ, ಉಪಾಧ್ಯಕ್ಷ ಸತ್ಯ ಪ್ರಸಾದ್, ನಿರ್ದೇಶಕರಾದ ಪುರುಷೋತ್ತಮ, ಜೋಯಿ ಬ್ರೋ, ನವೀನ್, ನಿತಿನ್, ಸದಸ್ಯ ಮನು ಇದ್ದರು.

ನಂತರ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ದೃತಿ ಪ್ರಥಮ, ಮಂದಾರ ದ್ವಿತೀಯ, ಸೌಜನ್ಯ ತೃತೀಯ ಬಹುಮಾನ ಪಡೆದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜ್ವಾಲಾ ಮಾಲಿನಿ ಶಾಲೆ ವಿದ್ಯಾರ್ಥಿನಿ ಶಿಫಾಕೌಸರ್ ಅವರನ್ನು ಸನ್ಮಾನಿಸಲಾಯಿತು. ಜೇಸಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಚ್.ಆರ್.ದಿನೇಶ್ ಅವರನ್ನು ಅಭಿನಂದಿಸಲಾಯಿತು. ಪುರುಶೋತ್ತಮ್ ಸ್ವಾಗತಿಸಿದರು.ರಜಿತ್ ವಗ್ಗಡೆ ವಂದಿಸಿದರು.