ಸಾರಾಂಶ
ಗಣೇಶನಿಗೆ ಹಾರ ಹಾಕುವ ಹುಚ್ಚು ಸಾಹಸದ ಯುವಕನಿಂದ ಅಮಾಯಕರಿಗೆ ಸಂಕಷ್ಟಕನ್ನಡಪ್ರಭ ವಾರ್ತೆ ದಾವಣಗೆರೆ
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ವಿಭಿನ್ನವಾಗಿ ಭಕ್ತಿ ಸಮರ್ಪಿಸಲೆಂದು ಜೆಸಿಬಿ ಸಮೇತ ಮೆರವಣಿಗೆ ಮಧ್ಯೆ ಬಂದ ಯುವಕನ ಬೇಜವಾಬ್ದಾರಿಯಿಂದ ಮಹಿಳೆಯೊಬ್ಬರ ಹೊಟ್ಟೆ ಮೇಲೆ ಜೆಸಿಬಿ ಸಾಗಿ ಗಂಭೀರವಾಗಿ ಗಾಯಗೊಂಡರೆ, ಮಕ್ಕಳು ಸೇರಿದಂತೆ 6 ಜನರು ಕೈ-ಕಾಲಿಗೆ ಪೆಟ್ಟಾದ ಘಟನೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.ಮಲೆಬೆನ್ನೂರು ಸಮೀಪದ ಕುಂಬಳೂರು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಮೇಶ ಮೂರ್ತಿ ವಿಸರ್ಜನೆಗೆ ಗ್ರಾಮದ ಮಕ್ಕಳು, ಮಹಿಳೆಯರು, ಹಿರಿಯರೆಲ್ಲರೂ ಸೇರಿದ್ದರು. ಅದೇ ವೇಳೆ ಗ್ರಾಮದ ಯುವಕನೊಬ್ಬ ತನ್ನದೇ ಜೆಸಿಬಿ ಯಂತ್ರದ ಸಮೇತ ಮೆರವಣಿಗೆ ಸ್ಥಳಕ್ಕೆ ಧಾವಿಸಿದ್ದಾನೆ. ಇಡೀ ಅರ್ಧ ಊರಿನಲ್ಲಿ ಮೆರವಣಿಗೆಯಾಗಿದ್ದು, ಅದೇ ವೇಳೆ ಜೆಸಿಬಿ ಸರಿಯಾಗಿ ಚಾಲನೆ ಮಾಡಲಾಗದ ಇವನ್ಯಾಕೆ ತಂದಿದ್ದಾನೋ ಎಂಬುದಾಗಿ ಗ್ರಾಮದ ಜನರು ಮಾತನಾಡುವಷ್ಟರಲ್ಲೇ ದುರಂತ ಸಂಭವಿಸಿದೆ ಎನ್ನಲಾಗಿದೆ.
ಮೆರವಣಿಗೆಯಲ್ಲಿ ಮಕ್ಕಳು ಸೇರಿದಂತೆ ಯುವಕರು ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಅದೇ ವೇಳೆ ತಮ್ಮ ಊರಿನಲ್ಲಿ ತನ್ನ ಜೆಸಿಬಿಯಿಂದ ಗಣೇಶನಿಗೆ ಹಾರ ಹಾಕುವ ಲೆಕ್ಕಾಚಾರದಲ್ಲಿ ಸರಿಯಾಗಿ ಚಾಲನೆ ಬರದಿದ್ದರೂ, ಜೆಸಿಬಿ ಯಂತ್ರದ ಸಮೇತ ಧಾವಿಸಿದ ಯುವಕನನ್ನು ಕಂಡ ಗ್ರಾಮಸ್ಥರು ಸ್ವಲ್ಪ ಜಾಗೃತರಾಗಿದ್ದಾರೆ. ಜನರ ಮಧ್ಯೆ ಬಂದ ಯುವಕ ಜೆಸಿಬಿ ಯಂತ್ರದ ಬ್ರೇಕ್ ಹಾಕುವ ಬದರು ಎಕ್ಸ್‌ಲೇಟರ್ ಒತ್ತಿದ್ದರಿಂದ ಅದು ಗುಂಪಿನಲ್ಲಿದ್ದವರತ್ತ ತಿರುಗಿದೆ. ಗಾಬರಿಯಾದ ಆತ ಏನೋ ಮಾಡಲು ಹೋಗಿ, ಏನೋ ಮಾಡಿಕೊಂಡಂತಾಗಿದ್ದರಿಂದ ಆತಂಕಗೊಂಡಿದ್ದಾನೆ.ಜೆಸಿಬಿ ತಿರುಗಿಸುವ ಭರದಲ್ಲಿ ಗಾಡಿಯ ಚಕ್ರವು ಬಸಮ್ಮ ಎಂಬ ಮಹಿಳೆಯ ಹೊಟ್ಟೆಯ ಮೇಲೆ ಹರಿದಿದೆ. ಅಲ್ಲದೇ, ಸಮೀಪವೇ ಇದ್ದ ಗ್ರಾಮದ ದೇವಸ್ಥಾನದ ಹಳೆಯ ಗೋಡೆಗೆ ಬಡಿದ್ದರಿಂದ ಗೋಡೆ ಬಿದ್ದು 8 ವರ್ಷದ ಬಾಲಕಿ ಸಿರಿ ಸೇರಿದಂತೆ ಐದಾರು ಜನರಿಗೆ ತೀವ್ರ ಗಾಯವಾಗಿದೆ. ಅಲ್ಲಿಯೇ ಇದ್ದ ದೊಡ್ಡ ಸಿಮೆಂಟ್ ತೊಟ್ಟಿಯೊಂದು ಸುಮಾರು 3 ಅಡಿಯಷ್ಟು ಸರಿದು ಹೋಗಿದೆ. ಏನೇನೋ ಹರಸಾಹಸ ಮಾಡಿ, ಜೆಸಿಬಿ ನಿಲ್ಲುತ್ತಿದ್ದಂತೆ ಗ್ರಾಮಸ್ಥರು ಅದನ್ನು ಚಾಲನೆ ಮಾಡುತ್ತಿದ್ದ ಯುವಕನಿಗೆ ಥಳಿಸಲು ಮುಂದಾಗಿದ್ದಾರೆ.
ಚಕ್ರಕ್ಕೆ ಸಿಲುಕಿದ್ದ ಬಸಮ್ಮನಿಗೆ ತಕ್ಷಣವೇ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ ಗ್ರಾಮಸ್ಥರು ಮಲೆಬೆನ್ನೂರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಬಸಮ್ಮನಿಗೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಬಾಲಕಿ ಸಿರಿ ಸೇರಿದಂತೆ ಆರೇಳು ಜನರ ಪೈಕಿ ಒಂದಿಬ್ಬರಿಗೆ ಕೈ-ಕಾಲು ಮುರಿದಿದ್ದು, ಉಳಿದವರಿಗೆ ಸಣ್ಣಪುಟ್ಟ ಪೆಟ್ಟಾಗಳಾಗಿವೆ.ಜೆಸಿಬಿಯನ್ನು ವಶಕ್ಕೆ ಪಡೆದ ಮಲೆಬೆನ್ನೂರು ಪೊಲೀಸರು ಯುವಕನನ್ನು ಠಾಣೆಗೆ ಕರೆದೊಯ್ದಿದ್ದಾರೆನ್ನಲಾಗಿದೆ. ಪಿಎಸ್ಐ ಪ್ರಭು ಕೆಳಗಿನಮನಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳ ಮಹಜರು ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
---ಪೋಟೋ ಕ್ಯಪ್ಷನ್:15ಕೆಡಿವಿಜಿ26, 27, 28-ಹರಿಹರ ತಾ. ಮಲೆಬೆನ್ನೂರು ಸಮೀಪದ ಕುಂಬಳೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಜೆಸಿಬಿ ಯಂತ್ರ ಚಾಲನೆ ಮಾಡಲಾಗದ ಯುವಕನಿಗೆ ಆದ ಅನಾಹುತದಲ್ಲಿ ಗಾಯಗೊಂಡ ಗ್ರಾಮದ ಮಹಿಳೆಯರು.