ಬಳ್ಳಾರಿ: ನಗರದ ಪ್ರಮುಖ ರಸ್ತೆಗಳ ಪಾದಚಾರಿ ರಸ್ತೆ, ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ಶುರುಗೊಂಡಿದ್ದು ಬೆಳ್ಳಂಬೆಳಿಗ್ಗೆ ಜೆಸಿಬಿ ಯಂತ್ರಗಳು ಬೀದಿಗಿಳಿದು ಘರ್ಜಿಸಲಾರಂಭಿಸಿವೆ.
ಮಹಾನಗರ ಪಾಲಿಕೆ ಫುಟ್‌ಪಾತ್‌ಗಳನ್ನು ತೆರವುಗೊಳಿಸಲು ಮುಂದಾಗಿದ್ದರೆ, ಅತ್ತ ಜಿಲ್ಲಾಡಳಿತ ಎಡಿಸಿ ನೇತೃತ್ವದಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿರುವವರಿಗೆ ಬಿಸಿ ಮುಟ್ಟಿಸಲಾರಂಭಿಸಿದ್ದಾರೆ. ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಮ ಜರುಗಿಸುವ ಸಂಬಂಧ ಜಿಲ್ಲಾಡಳಿತ ಇತ್ತೀಚೆಗಷ್ಟೇ ಸಭೆ ನಡೆಸಿ, ಸಮಿತಿಯೊಂದನ್ನು ರಚಿಸಿದ್ದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ನೇತೃತ್ವದಲ್ಲಿ ಅತಿಕ್ರಮಿತ ಸರ್ಕಾರಿ ಜಾಗವನ್ನು ತೆರವುಗೊಳಿಸುವ ಕೆಲಸ ಆರಂಭಿಸಲಾಗಿದೆ.ರಾಜಕೀಯ ಪ್ರಭಾವದಿಂದ ನಗರದ ನಾನಾ ಕಡೆಗಳಿಂದ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವವರನ್ನು ಪಟ್ಟಿ ಮಾಡಿಕೊಂಡಿರುವ ಜಿಲ್ಲಾಡಳಿತ, ದಾಖಲೆಗಳನ್ನು ಪರಿಶೀಲಿಸಿ ತೆರವು ಕಾರ್ಯಕ್ಕೆ ಮುಂದಾಗಿದೆ. ಸರ್ಕಾರಿ ಜಾಗ ತೆರವು ಮಾಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನಾನಾ ರಾಜಕೀಯ ಒತ್ತಡ ಬಂದಾಗ್ಯೂ ಲೆಕ್ಕಿಸದೆ ಸರ್ಕಾರಿ ಜಾಗ ಉಳಿಸುವ ಕೆಲಸಕ್ಕೆ ಮುಂದಾಗಿರುವ ಜಿಲ್ಲಾಡಳಿತ ಕಾಳಜಿಯ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಬೆಂಗಳೂರು ರಸ್ತೆಯಲ್ಲಿನ ಫುಟ್‌ಪಾತ್ ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು ಗಡಗಿಚನ್ನಪ್ಪ ವೃತ್ತದಿಂದ ಹಳೆಯ ಬ್ರೂಸ್‌ಪೇಟೆ ಠಾಣೆ ವೃತ್ತದವರೆಗಿನ ನೂರಾರು ಅಂಗಡಿಗಳನ್ನು ತೆರವುಗೊಳಿಸಲಾಯಿತು. ಮುಖ್ಯ ರಸ್ತೆಗಳು ಹಾಗೂ ಜನಸಂಚಾರ ಹೆಚ್ಚು ಇರುವ ಪ್ರದೇಶಗಳಲ್ಲಿ ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಬಳಸಿಕೊಂಡು ನಿರ್ಮಿಸಲಾಗಿದ್ದ ತಾತ್ಕಾಲಿಕ ಅಂಗಡಿಗಳು ಮತ್ತು ಶೆಡ್‌ಗಳನ್ನು ಜೆಸಿಬಿಗಳು ತೆರವುಗೊಳಿಸಿದವು. ಒಂದು ತಿಂಗಳು ಕಾಲ ಫುಟ್‌ಪಾತ್ ತೆರವು ಕಾರ್ಯ ಮುಂದುವರಿಯಲಿದೆ. ಬೆಂಗಳೂರು ರಸ್ತೆ ಬಳಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನದಿಂದ ಇನ್‌ಫ್ಯಾಂಟ್ರಿ ರಸ್ತೆ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ಮೋತಿ ವೃತ್ತದಿಂದ ಎಪಿಎಂಸಿ, ಎಂಜಿ ಪೆಟ್ರೋಲ್ ಬಂಕ್‌ವರೆಗೆ ಸೇರಿದಂತೆ ಅತಿಕ್ರಮಿತ ಜಾಗಗಳನ್ನು ತೆರವುಗೊಳಿಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ. ಫುಟ್‌ಪಾತ್ ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಮಹಾನಗರ ಪಾಲಿಕೆ ಸೇರಿ ಸಭೆ ನಡೆಸಲಾಯಿತು. ರಂಜಾನ್ ಹಾಗೂ ಯುಗಾದಿ ಹಬ್ಬದ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆಗೆ ಮುಂದೂಡಲಾಗಿತ್ತು. ಇದೀಗ ಆರಂಭಗೊಂಡಿದ್ದು ಇನ್ನು ಮುಂದೆ ಸತತವಾಗಿ ತೆರವು ಕೆಲಸ ನಡೆಯಲಿದೆ ಎಂದು ಪಾಲಿಕೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.ನಗರದ ಹವಾಂಭಾವಿ ಪ್ರದೇಶದ ಆಂಜಿನೇಯಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಒತ್ತುವರಿ ಮಾಡಿ ತಡೆಗೋಡೆ ನಿರ್ಮಿಸಿದ್ದ ರಸ್ತೆ ಸೇರಿದಂತೆ 22 ಸೆಂಟ್ಸ್ ವಿಸ್ತೀರ್ಣದ ಸರ್ಕಾರಿ ಜಾಗ ಅಧಿಕಾರಿಗಳು ವಶಕ್ಕೆ ಪಡೆದರು. ಬಳಿಕ ತೆರವುಗೊಳಿಸಿದ ಜಾಗದಲ್ಲಿ ‘ಸರ್ಕಾರಿ ಸ್ವತ್ತು'''''''' ಎಂಬ ನಾಮಫಲಕ ಅಳವಡಿಸಲಾಯಿತು.
ನಗರದಲ್ಲಿ ನೂರಾರು ಕೋಟಿ ರು. ಮೌಲ್ಯದ ಸರ್ಕಾರಿ ಜಾಗವನ್ನು ಅನೇಕರು ಅತಿಕ್ರಮಣ ಮಾಡಿಕೊಂಡಿದ್ದಾರೆ. ರಾಜಕೀಯ ಬಲದಿಂದ ಈವರೆಗೆ ಕಟ್ಟಡಗಳನ್ನು ನಿರ್ಮಿಸಿಕೊಂಡು ಭೋಗಿಸುತ್ತಿದ್ದಾರೆ. ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಪಾಲಿಕೆಯ ಸದಸ್ಯರು, ಸಾರ್ವಜನಿಕರು ಹಾಗೂ ಸಮಾಜಮುಖಿ ಹೋರಾಟಗಾರರ ಸಹಕಾರದಿಂದ ನಗರದ ನಾನಾ ಕಡೆ ಅತಿಕ್ರಮಣವಾಗಿರುವ ಸರ್ಕಾರಿ ಜಾಗವನ್ನು ಗುರುತಿಸುವ ಕೆಲಸವಾಗುತ್ತಿದೆ. ಯಾವುದೇ ಮುಲಾಜಿಲ್ಲದೆ ತೆರವು ಕಾರ್ಯಾಚರಣೆ ಮಾಡಲಾಗುವುದು. ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಕುರಿತು ಸಹ ಯೋಚಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.
ಎಡಿಸಿ ಮಹಮ್ಮದ್ ಝುಬೇರ್ ಎನ್., ಎಸಿ ರಾಜೇಶ್ ಎಚ್.ಡಿ., ತಹಶೀಲ್ದಾರ್ ಟಿ.ರೇಖಾ ಪಾಲ್ಗೊಂಡಿದ್ದರು.
ಬಳ್ಳಾರಿ ನಗರದಲ್ಲಿ ಫುಟ್‌ಪಾತ್ ತೆರವು ಕಾರ್ಯಾ ಮುಂದುವರಿಯಲಿದೆ. ಬೀದಿ ವ್ಯಾಪಾರಿಗಳಿಗೆ ತೊಂದರೆಯಾಗಿದ್ದರೆ ಅವರಿಗೆ ದೊಡ್ಡ ಮಾರುಕಟ್ಟೆ ಬಳಿ ಶೆಲ್ಟರ್ ನಿರ್ಮಿಸಲಾಗಿದ್ದು, ಅಲ್ಲಿಯೇ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ.