ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಶ್ವವಿಖ್ಯಾತ ಹಂಪಿಯಲ್ಲೀಗ ಜೆಸಿಬಿಗಳದ್ದೇ ಸದ್ದು. ಯಾವುದೇ ಕಾಮಗಾರಿಗಳಿರಲಿ, ಕ್ರೇನ್, ಜೆಸಿಬಿ ಯಂತ್ರಗಳನ್ನು ಬಳಸಿ ಮಾಡಲಾಗುತ್ತಿದೆ. ಇದು ಪುರಾತತ್ವ ಇಲಾಖೆಯ ನಿಯಮದ ಸ್ಪಷ್ಟ ಉಲ್ಲಂಘನೆಯಾದರೂ ಅಧಿಕಾರಿಗಳೇ ಈ ಕೆಲಸ ಮಾಡುತ್ತಿರುವುದು ಸ್ಮಾರಕಪ್ರಿಯರ ಆಕ್ಷೇಪಕ್ಕೂ ಎಡೆಮಾಡಿದೆ.ಹಂಪಿಯ ರಾಣಿ ಸ್ನಾನಗೃಹದ ಬಳಿ ಈಗ ಗೇಟ್‌ಗಳ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ. ಈ ಗೇಟ್‌ಗಳನ್ನು ನಿಲ್ಲಿಸಲು ಕೂಡ ಜೆಸಿಬಿಯಿಂದ ಅಗೆಸಲಾಗುತ್ತಿದೆ. ಬರೀ 2ರಿಂದ 3 ಅಡಿ ಆಳ ಅಗೆಯಲು ಕೂಡ ಜೆಸಿಬಿ ಬಳಕೆ ಮಾಡಲಾಗುತ್ತಿದೆ. ಹಂಪಿಯಂಥ ಸೂಕ್ಷ್ಮ ಪ್ರದೇಶದಲ್ಲಿ ಭಾರಿ ಯಂತ್ರಗಳನ್ನು ಬಳಕೆ ಮಾಡುವಂತಿಲ್ಲ. ಆದರೆ, ಈಗ ನಿಯಮ ರೂಪಿಸಿರುವ ಪುರಾತತ್ವ ಇಲಾಖೆಯೇ ಉಲ್ಲಂಘನೆ ಮಾಡುತ್ತಿದೆ. ಹಂಪಿಯಲ್ಲಿ ಉತ್ಖನನ ಮಾಡುವಾಗ ಕೈಗೊಳ್ಳುವ ಸೂಕ್ಷ್ಮತೆ ಆಧರಿಸಿಯೇ ತಗ್ಗು ತೋಡಬೇಕು. ಆದರೆ, ಪುರಾತತ್ವ ಇಲಾಖೆ ಇದೆಲ್ಲವನ್ನು ಮೀರಿ ಕಾರ್ಯ ಮಾಡುತ್ತಿರುವುದು ಭಾರೀ ಚರ್ಚೆಗೀಡು ಮಾಡಿದೆ.
ಹಂಪಿಯಲ್ಲಿ ಭಾರೀ ಯಂತ್ರಗಳನ್ನು ಬಳಕೆ ಮಾಡದೇ ಜೀರ್ಣೋದ್ಧಾರ ಸೇರಿದಂತೆ ಇತರೆ ಕಾರ್ಯಗಳನ್ನು ಮಾಡಬೇಕಿದೆ. ಪುರಾತತ್ವ ಇಲಾಖೆ ಇತ್ತೀಚೆಗೆ ಭಾರಿ ಯಂತ್ರಗಳನ್ನು ಬಳಸಿಯೇ ಕೆಲಸ ಮಾಡಲಾರಂಭಿಸಿದೆ. ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಕಾಪಾಡಲು ಭಾರೀ ಯಂತ್ರಗಳನ್ನು ಬಳಕೆ ಮಾಡದೇ ಕಾರ್ಮಿಕರನ್ನು ಬಳಸಿ ಕೆಲಸ ಮಾಡಬೇಕು ಎಂಬುದು ಸ್ಮಾರಕಪ್ರಿಯರ ಒತ್ತಾಯವಾಗಿದೆ.ಡಿಸಿ ಭರವಸೆ:
ಹಂಪಿ ರಾಣಿ ಸ್ನಾನಗೃಹದ ಬಳಿ ನಡೆಯುತ್ತಿರುವ ಕಾಮಗಾರಿಗೆ ಜೆಸಿಬಿ ಯಂತ್ರ ಬಳಕೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಈ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚಿಸುವೆ ಎಂದು ಡಿಸಿ ಎಂ.ಎಸ್. ದಿವಾಕರ್ ತಿಳಿಸಿದರು.ಕ್ರಮಕ್ಕೆ ಆಗ್ರಹ:ಹಂಪಿ ರಾಣಿ ಸ್ನಾನಗೃಹದ ಬಳಿ ನಡೆಯುತ್ತಿರುವ ಕಾಮಗಾರಿಯಲ್ಲಿ ಜೆಸಿಬಿ ಯಂತ್ರ ಬಳಕೆ ಮಾಡಿರುವುದು ಸರಿಯಲ್ಲ. ಇತ್ತೀಚೆಗೆ ಅಧಿಕಾರಿಗಳಾದ ನಿಹಿಲ್ ದಾಸ್, ರವೀಂದ್ರ ಅವರು ಬಂದ ಬಳಿಕ ಬರೀ ಭಾರೀ ಯಂತ್ರಗಳನ್ನೇ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಪುರಾತತ್ವ ಇಲಾಖೆಯ ಮೇಲಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆಯ ಅಧ್ಯಕ್ಷ ಡಾ. ವಿಶ್ವನಾಥ ಮಾಳಗಿ ತಿಳಿಸಿದರು.