ಸಾರಾಂಶ
ಅರಣ್ಯ ತೆರವಿಗೆ ಬಂದಿದ್ದ ಜೆಸಿಬಿ, ಕಾರು ಅರಣ್ಯ ಇಲಾಖೆ ವಶಕ್ಕೆ
ಕನ್ನಡ ಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಕಡಬ ಹೋಬಳಿ ಬಿಳೆನಂದಿ ಅರಣ್ಯ ವಲಯದಲ್ಲಿ ಸೋಮವಾರ ಬೆಳಗಿನ ಜಾವ ಅಕ್ರಮವಾಗಿ ಗಿಡ ಮರಗಳನ್ನು ತೆರವುಗೊಳಿಸಲು ತೆರಳಿದ್ದ ಜೆಸಿಬಿ ಹಾಗೂ ಅವರಿಗೆ ಬೆಂಬಲವಾಗಿ ಬಂದಿದ್ದ ಕಾರನ್ನು ಸುತ್ತಮುತ್ತಲಿನ ಗ್ರಾಮಸ್ಥರು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕಾರಿನಲ್ಲಿದ್ದವರು ಹಾಗೂ ಜೆಸಿಬಿ ಚಾಲಕ ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಪ್ರದೇಶದ ಮರಗಿಡಗಳನ್ನು ತೆರವುಗೊಳಿಸಿ ಕೃಷಿ ಭೂಮಿಯನ್ನಾಗಿಸಿ ಕೊಳ್ಳುವ ಉದ್ದೇಶದಿಂದ ಕೆಲವು ಭೂ ಮಾಫಿಯಾ ದವರು ಈ ಕೃತ್ಯವನ್ನು ನಿರಂತರವಾಗಿ ಎಸೆಗುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.ಸ್ಥಳದಲ್ಲಿದ್ದ ಜೆಸಿಬಿ ಯಂತ್ರ ಹಾಗೂ ಕಾರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಕಾನೂನು ಕ್ರಮ ಮುಂದಾಗಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.