ಸಾರಾಂಶ
- ಜ್ವಾಲಾಮಾಲಿನಿ ಜೇಸಿ ಸಂಸ್ಥೆ 36 ನೇ ಜೇಸಿ ಸಪ್ತಾಹ ಸ್ನೇಹ ಮಿಲನ ಸಮಾರೋಪ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ110 ವರ್ಷದ ಹಿಂದೆ ಪ್ರಾರಂಭವಾದ ಜೆಸಿಐ ಈಗ ಪ್ರಪಂಚದ 136 ದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಜೆಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವೀನ್ ಲಾಯ್ಡ್ ಮಿಸ್ಕಿತ್ ತಿಳಿಸಿದರು.
ಭಾನುವಾರ ಸಂಜೆ ಪಟ್ಟಣದ ಕನ್ಯಾಕುಮಾರಿ ಕಂಪರ್ಟ್ ಹಾಲ್ ನಲ್ಲಿ ನಡೆದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ 36 ನೇ ಜೇಸಿ ಸಪ್ತಾಹ ಸ್ನೇಹ ಮಿಲನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯದಲ್ಲಿ 68 ಸಾವಿರ ಸದಸ್ಯರಿದ್ದಾರೆ. ಜೇಸಿ ವಲಯ 14 ರಲ್ಲಿ 3800 ಸದಸ್ಯರಿದ್ದಾರೆ. ವಲಯ 14 ರಲ್ಲೇ ಎನ್.ಆರ್.ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅತ್ಯಂತ ಹಿರಿಯ ಸಂಸ್ಥೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರ ನೀಡುತ್ತಿದ್ದು ಸಂಸ್ಕೃತಿ, ಶಿಸ್ತು ಕಲಿಸುತ್ತಿಲ್ಲ. ಮಕ್ಕಳನ್ನು ಕೇವಲ ಯಂತ್ರವನ್ನಾಗಿ ಮಾಡುತ್ತಿದ್ದೇವೆ. ಇದು ಬದಲಾಗಿ ಮಕ್ಕಳನ್ನು ಒಳ್ಳೆಯ ಮನುಷ್ಯರಾಗಿ ಬೆಳೆಸಬೇಕು ಎಂದು ಕರೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಜೇಸಿ ಸಂಸ್ಥೆ ನಾಯಕತ್ವ ಗುಣ ಕಲಿಸುತ್ತದೆ. ಜೇಸಿ ಸಂಸ್ಥೆ ಸದಸ್ಯರ ವ್ಯಕ್ತಿತ್ವ ಬೆಳೆಯುತ್ತದೆ. ಜೇಸಿ ಸಂಸ್ಥೆ ಸದಸ್ಯರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ತಂದೆ,ತಾಯಿ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಮಾನವೀಯತೆ ಗುಣ ಬೆಳೆಸಬೇಕು. ಯಾವುದೇ ವ್ಯಕ್ತಿ ಒಮ್ಮೆ ಜೀವನದಲ್ಲಿ ಸೋತರೂ ಎದೆ ಗುಂದದೆ ಮತ್ತೆ ಪ್ರಯತ್ನ ಪಟ್ಟರೆ ಜೀವನದಲ್ಲಿ ಜಯಗಳಿಸಬಹುದು ಎಂದರು.
ರೋಟರಿ ಸಂಸ್ಥೆ ಅಧ್ಯಕ್ಷ ಕಣಿವೆ ವಿನಯ ಮಾತನಾಡಿ, ಪ್ರತಿ ಮಕ್ಕಳನ್ನೂ ಪ್ರೀತಿಯಿಂದ ಬೆಳೆಸಿ ಉತ್ತಮ ಸಂಸ್ಕಾರ ನೀಡಬೇಕು. ಕೇವಲ ಶಿಕ್ಷಣ ನೀಡಿದರೆ ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳುವುದಿಲ್ಲ. ತಂದೆ, ತಾಯಿಗಳು ಮಕ್ಕಳು ಎಂಜಿನಿಯರ್ , ಡಾಕ್ಟರ್ ಆಗಬೇಕು ಎಂದು ಹಾರೈಸುತ್ತಾರೆ. ಆದರೆ, ಒಳ್ಳೆಯ ಮನುಷ್ಯನಾಗು ಎಂದು ಹೇಳುವುದಿಲ್ಲ. ವಿದ್ಯಾವಂತರ ಸಂಖ್ಯೆ ಹೆಚ್ಚಾಗಿ ಸಂಸ್ಕಾರವಂತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದಲೇ ದುರ್ಬಲ ಸಮಾಜ ನಿರ್ಮಾಣ ವಾಗುತ್ತಿದೆ. ಸೇವಾ ಸಂಸ್ಥೆಗಳು ರಾಷ್ಟ್ರೀಯತೆ ಕಲಿಸುತ್ತಿದೆ ಎಂದರು.ಸಭೆ ಅಧ್ಯಕ್ಷತೆಯನ್ನು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ ಗೌಡ ವಹಿಸಿದ್ದರು. ಸಭೆಯಲ್ಲಿ ವಲಯ 14 ರ ಉಪಾಧ್ಯಕ್ಷ ಜಿ.ಎನ್.ಪ್ರಶಾಂತಕುಮಾರ್, ಕನ್ಯಾಕುಮಾರಿ ಕಂಪರ್ಟ್ಸ್ ಮಾಲೀಕ ಡಿ.ರಮೇಶ್, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಕಾರ್ಯದರ್ಶಿ ಮಿಥುನ್ ಗೌಡ, ನಿಕಟ ಪೂರ್ವ ಅಧ್ಯಕ್ಷ ಮನು ಎಂ.ಪಿ., ಜೇಸಿ ಸಪ್ತಾಪದ ಪ್ರಧಾನ ನಿರ್ದೇಶಕ ಜೋಯಿ ಬ್ರೋ, ಜೇಸಿ ರೆಟ್ ವಿಂಗ್ ಅಧ್ಯಕ್ಷೆ ದಿಶಾಗೌಡ, ಜೂನಿಯರ್ ಜೇಸಿ ಅಧ್ಯಕ್ಷೆ ನಾಗವಂಶಿಗೌಡ ಇದ್ದರು.
ಇದೇ ಸಂದರ್ಭದಲ್ಲಿ ಸೆಲ್ಯೂಟ್ ದ ಸೈಲಂಟ್ ವರ್ಕರ್ ಕಾರ್ಯಕ್ರಮದಡಿ ನಾಟೀ ವೈದ್ಯ ಶೆಟ್ಟಿಕೊಪ್ಪ ಬಾಲರಾಜ್ ಅವರನ್ನು ಸನ್ಮಾನಿಸಲಾಯಿತು. ಪಿ.ಆರ್.ಸದಾಶಿವ,ಕಣಿವೆ ವಿನಯ, ಡಿ.ರಮೇಶ್, ಡಾ.ನವೀನ್ ಲಾಯ್ಡ್ ಮಿಸ್ಕಿತ್, ಪ್ರಶಾಂತ ಕುಮಾರ್, ಯಡಗೆರೆ ಮಂಜುನಾಥ್, ಎಂ.ಸಿ.ಗುರುಶಾಂತಪ್ಪ, ಅಂಕಿತ ಪ್ರಜ್ವಲ್ ಅವರನ್ನು ಗೌರವಿಸಲಾಯಿತು. ಜೋಯಿ ಬ್ರೋ ವರದಿ ವಾಚಿಸಿದರು. ರಜಿತ್ ಜೇಸಿ ವಾಣಿ ವಾಚಿಸಿದರು. ಆದರ್ಶ ಕಾರ್ಯಕ್ರಮ ನಿರೂಪಿಸಿದರು.ಮಿಥುನ್ ಗೌಡ ವಂದಿಸಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಇದಕ್ಕೂ ಮೊದಲು ರಾಗ ಮಯೂರಿ ಅಕಾಡೆಮಿ ವಿದ್ಯಾರ್ಥಿಗಳಿಗೆ ಭರತ ನಾಟ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.