ಬೀಜ, ಗೊಬ್ಬರ ಮಾರಾಟ ಮಳಿಗೆಗೆ ಜೆಡಿ ಭೇಟಿ, ಪರಿಶೀಲನೆ

| Published : May 29 2024, 12:49 AM IST

ಸಾರಾಂಶ

ದೇವರಹಿಪ್ಪರಗಿ:ಪಟ್ಟಣದ ಕೃಷಿ ಕೇಂದ್ರ ಹಾಗೂ ವಿವಿಧ ರಸಗೊಬ್ಬರ, ಕೀಟನಾಶಕ ಮತ್ತು ಪರಿಕರ ಮಾರಾಟ ಮಳಿಗೆಗಳಿಗೆ ಮಂಗಳವಾರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿಲಿಯಂ.ಡಿ.ರಾಜಶೇಖರ ಭೇಟಿ ನೀಡಿ ರಸಗೊಬ್ಬರ, ಕೀಟನಾಶಕ ಮಾರಾಟ, ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ, ನಿಯಮಗಳನ್ನು ಪಾಲಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಮುಂಗಾರು ಬಿತ್ತನೆಗೆ ಪೂರಕವಾದ ಬೀಜ ರಸಗೊಬ್ಬರಗಳ ಪರಿಶೀಲನೆ ನಡೆಸಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾರಾಟಗಾರರು ರೈತರಿಗೆ ಉತ್ತಮ ಸಲಹೆಯೊಂದಿಗೆ ಗುಣಮಟ್ಟದ ಪರಿಕರಗಳನ್ನು ಒದಗಿಸಿ ಕಡ್ಡಾಯವಾಗಿ ರಶೀದಿ ನೀಡಬೇಕು. ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಇದನ್ನೇ ಬಂಡವಾಳವಾಗಿಸಿಕೊಳ್ಳುವ ನಿಟ್ಟಿನಲ್ಲಿ ಗೊಬ್ಬರ ದಾಸ್ತಾನು ಮಾಡಿಕೊಳ್ಳುವುದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಅಂಗಡಿಗಳಲ್ಲಿ ರಸಗೊಬ್ಬರ, ಬೀಜ, ಕೀಟನಾಶಕ ದಾಸ್ತಾನು, ಮಾರಾಟ ದರದ ಫಲಕ ಕಡ್ಡಾಯವಾಗಿ ಹಾಕಬೇಕು. ನಿಷೇಧಿತ ಮತ್ತು ಅವಧಿ ಮೀರಿದ ಬೀಜ, ಕೀಟನಾಶಕ ಮಾರಾಟ ಮಾಡಬಾರದು. ರೈತರಿಗೆ ಬಿಲ್‌ ನೀಡಬೇಕು. ಹೆಚ್ಚಿನ ಲಾಭದ ಆಸೆಗೆ ಇಲಾಖೆಯ ನಿಯಮಾವಳಿ ಮೀರಿದ್ದು ಕಂಡು ಬಂದರೆ ಮಾರಾಟಗಾರರ ಲೈಸನ್ಸ್‌ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಪವಾರ, ಜಾಗೃತ ದಳದ ಸಹಾಯಕ ಕೃಷಿ ನಿರ್ದೇಶಕರಾದ ಎ.ಪಿ.ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೆಗೋಳ, ಕೃಷಿ ಅಧಿಕಾರಿಗಳಾದ ಸೋಮನಗೌಡ ಬಿರಾದಾರ, ರೈತ ಮುಖಂಡರಾದ ವೀರೇಶ ಕುದುರಿ, ಅಜೀಜ ಯಲಗಾರ ಸೇರಿದಂತೆ ಅಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.