ಪ್ರಜ್ವಲ್‌ ಹುಡುಕಿ ಕೊಟ್ಟವರಿಗೆ ₹ 1 ಲಕ್ಷ: ಜನತಾ ಪಕ್ಷ

| Published : May 12 2024, 01:23 AM IST / Updated: May 12 2024, 09:08 AM IST

ಸಾರಾಂಶ

ಲೈಂಗಿಕ ಹಗರಣ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಹುಡುಕಿ ಕೊಟ್ಟವರಿಗೆ ₹1 ಲಕ್ಷ ಬಹುಮಾನ ನೀಡುವುದಾಗಿ ಜನತಾ ಪಕ್ಷದ ಕಾರ್ಯಕರ್ತರು ಪೋಸ್ಟರ್‌ ಅಂಟಿಸಿ ಶನಿವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.

 ಬೆಂಗಳೂರು :  ಲೈಂಗಿಕ ಹಗರಣ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಹುಡುಕಿ ಕೊಟ್ಟವರಿಗೆ ₹1 ಲಕ್ಷ ಬಹುಮಾನ ನೀಡುವುದಾಗಿ ಜನತಾ ಪಕ್ಷದ ಕಾರ್ಯಕರ್ತರು ಪೋಸ್ಟರ್‌ ಅಂಟಿಸಿ ಶನಿವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.

ಪ್ರತಿಭಟನಾಕಾರರು ಶಿವಾನಂದ ವೃತ್ತ ಸೇರಿದಂತೆ ನಗರದ ವಿವಿಧೆಡೆ ಈ ಪೋಸ್ಟರ್‌ ಅಂಟಿಸಿದರು. ಸಂಸದ ಪ್ರಜ್ವಲ್‌ ರೇವಣ್ಣನ ಭಾವಚಿತ್ರವಿರುವ ಪೋಸ್ಟರ್‌ ಹಿಡಿದು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ ಡ್ರೈವ್‌ ಹಗರಣದ ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಈ ಆರೋಪಿಯನ್ನು ಹುಡುಕಿ ಕೊಟ್ಟ ಸಾರ್ವಜನಿಕರಿಗೆ ಜನತಾ ಪಕ್ಷದಿಂದ ₹1 ಲಕ್ಷ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಘೋಷಣೆ ಕೂಗಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗೇಶ್‌, ಈ ಲೈಂಗಿಕ ದೌರ್ಜನ್ಯ ಹಗರಣದ ಆರೋಪಿ ಪ್ರಜ್ವಲ್‌ ರೇವಣ್ಣನನ್ನು ಹುಡುಕುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ಆರೋಪಿಯನ್ನು ಹುಡುಕಿ ಕೊಟ್ಟವರಿಗೆ ಪಕ್ಷದ ವತಿಯಿಂದ ₹1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದರು.

ಈ ವೇಳೆ ಸ್ಥಳಕ್ಕೆ ಬಂದ ಹೈಗ್ರೌಂಡ್ಸ್‌ ಠಾಣೆ ಪೊಲೀಸರು, ನಾಗೇಶ್‌ ಸೇರಿದಂತೆ ಕೆಲವು ಕಾರ್ಯಕರ್ತರನ್ನು ವಶಕ್ಕೆ ಪಡೆದು ಕೊರೆದೊಯ್ದರು. ಶಿವಾನಂದ ವೃತ್ತದಲ್ಲಿ ಅಂಟಿಸಲಾಗಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸಿದರು.ಚಿತ್ರ ಶೀರ್ಷಿಕೆ:

ಲೈಂಗಿಕ ಹಗರಣ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಹುಡುಕಿ ಕೊಟ್ಟವರಿಗೆ 1 ಲಕ್ಷ ರು. ಬಹುಮಾನ ನೀಡುವುದಾಗಿ ಜನತಾ ಪಕ್ಷದ ಕಾರ್ಯಕರ್ತರು ಪೋಸ್ಟರ್‌ ಅಂಟಿಸಿ ಶನಿವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.ಕೆಆರ್‌ಎಸ್‌ ಪಕ್ಷದಿಂದ ನಾಳೆ ಹಾಸನ ಚಲೋ

 ಬೆಂಗಳೂರು :   ಹಾಸನ ಜಿಲ್ಲೆಯ ಲೈಂಗಿಕ ಹಗರಣವನ್ನು ಖಂಡಿಸಿ ಕನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್‌) ಪಕ್ಷದಿಂದ ‘ಅಬಲೆಯರನ್ನು ಗೌರವಿಸೋಣ-ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ’ ಶೀರ್ಷಿಕೆಯಡಿ ಮೇ 13ರಂದು ಹಾಸನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಆರ್‌ಎಸ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಎಸ್‌.ಮಂಜುನಾಥ, ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಸಂಬಂಧ ಪ್ರಥಮವಾಗಿ ಕೆಆರ್‌ಎಸ್‌ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್‌.ಎಚ್‌.ಲಿಂಗೇಗೌಡ ಏ.27ರಂದು ಹೊಳೆನರಸೀಪುರ ಪೊಲೀಸ್‌ ಠಾಣೆ ಮತ್ತು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ನಮ್ಮ ದೂರಿನ ಮೇರೆಗೆ ಕ್ರಮ ಕೈಗೊಂಡಿದ್ದರೆ ಪ್ರಜ್ವಲ್‌ ರೇವಣ್ಣ ತಪ್ಪಿಸಿಕೊಳ್ಳುವುದನ್ನು ತಡೆಯಬಹುದಿತ್ತು ಎಂದರು.

ರಾಜ್ಯದ ಪ್ರಮುಖ ಮೂರೂ ಪಕ್ಷಗಳು ಕೇವಲ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಹಾಗೂ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಅತ್ಯಾಚಾರಿ ಮತ್ತು ಈ ಕೃತ್ಯಗಳಲ್ಲಿ ಸಹಕರಿಸಿದವರು ಹಾಗೂ ಈ ವಿಡಿಯೊಗಳನ್ನು ಹರಿಬಿಟ್ಟವರನ್ನೂ ಒಳಗೊಂಡಂತೆ ತನಿಖೆಗೆ ಒಳಪಡಿಸಬೇಕು. ಸರ್ಕಾರದ ತನಿಖೆ ಬಗ್ಗೆ ಸಂದೇಹ ಇರುವುದರಿಂದ ಪ್ರಕರಣದ ತನಿಖೆಯನ್ನು ನ್ಯಾಯಾಂಗದ ಉಸ್ತುವಾರಿ ನಡೆಸಬೇಕು ಎಂದು ಒತ್ತಾಯಿಸಿದರು. ಕೆಆರ್‌ಎಸ್‌ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್‌.ಜೀವನ್, ಯುವ ಘಟಕದ ರಾಜ್ಯ ಉಪಾಧ್ಯಕ್ಷ ಜನನಿ ವತ್ಸಲಾ ಇದ್ದರು.