ಭ್ರಷ್ಟರನ್ನು ಸೋಲಿಸಲು ಜೆಡಿಎಸ್-ಬಿಜೆಪಿ ಮೈತ್ರಿ: ಮಂಜುನಾಥ್‌

| Published : Mar 27 2024, 01:02 AM IST

ಸಾರಾಂಶ

ಹಾರೋಹಳ್ಳಿ: ಭ್ರಷ್ಟರು ಮತ್ತು ದುರಾಡಳಿತ ಮಾಡುತ್ತಿರುವವರನ್ನು ಸೋಲುಣಿಸಲೇಬೇಕು ಎಂಬ ದೃಢ ನಿರ್ಧಾರದಿಂದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಹಾರೋಹಳ್ಳಿ: ಭ್ರಷ್ಟರು ಮತ್ತು ದುರಾಡಳಿತ ಮಾಡುತ್ತಿರುವವರನ್ನು ಸೋಲುಣಿಸಲೇಬೇಕು ಎಂಬ ದೃಢ ನಿರ್ಧಾರದಿಂದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಹಾರೋಹಳ್ಳಿ ಚೆನ್ನಮ್ಮಮಾದಯ್ಯ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು - ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಮಾತನಾಡಿದ ಅವರು, ಆ ನಾಯಕರು ಎಂದೂ ಕೂಡ ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿ ಅಥವಾ ಕ್ಷೇತ್ರದ ಅಭಿವೃದ್ಧಿಯ ಹೆಸರಿನಲ್ಲಿ ಜನರ ಆಶೀರ್ವಾದದಿಂದ ಚುನಾವಣೆ ಗೆದ್ದಿರುವುದಿಲ್ಲ, ಯಾವಾಗಲೂ ಆಸೆ ಆಮಿಷಗಳನ್ನು ತೋರಿಸಿ ಚುನಾವಣೆಗಳನ್ನು ಗೆದ್ದಿರುವ ಪ್ರತ್ಯಕ್ಷ ಉದಾಹರಣೆಗಳು ಕಣ್ಣ ಮುಂದಿದೆ ಎಂದು ಹೇಳಿದರು.

ಎನ್ ಡಿಎ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರು ರಾಜಕಾರಣ ಮಾಡಲು ಬಂದಿಲ್ಲ. ರಾಜಕಾರಣದ ಹಿನ್ನೆಲೆ ಇಲ್ಲದೆ ದೇಶಕ್ಕೆ ಒಬ್ಬ ನಾಯಕನಾಗಿ ಜನಸೇವೆ ಮಾಡಬೇಕೆಂಬ ಆಶಯದಿಂದ ಅವರು ಸ್ಪರ್ಧಿಸುತ್ತಿದ್ದಾರೆ. ಸೇವಾ ಮನೋಭಾವ ಇಟ್ಟುಕೊಂಡು ಸತತ 35 ವರ್ಷಗಳ ಕಾಲ ಜನರ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಈ ಹಿಂದೆ ಕಾಂಗ್ರೆಸ್ ಪಕ್ಷವು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳಿಗೆ ತಮ್ಮನ್ನು ಎದುರಿಸಲು ಅಭ್ಯರ್ಥಿಗಳೇ ಇಲ್ಲವೆಂದು ಲೇವಡಿ ಮಾಡುತ್ತಿದ್ದರು. ಅವರಿಗೆ ನಾವು ಏನೆಂದು ತೋರಿಸಲೆಂದೇ ಡಾ. ಮಂಜುನಾಥ್ ಅವರನ್ನು ನಿಲ್ಲಿಸಿದ್ದೇವೆ. ಈಗ ಕಾಂಗ್ರೆಸ್ ನಲ್ಲಿ ಸೋಲಿನ ನಡುಕ ಶುರುವಾಗಿದೆ ಎಂದು ಮಂಜುನಾಥ್ ಹೇಳಿದರು.

ಎನ್.ಡಿ.ಎ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಒಂದಾಗಿರುವುದರಿಂದ ಆನೆ ಬಲ ಬಂದಿದೆ ಎಂಬ ನಂಬಿಕೆ ನನಗೆ ಇದೆ. ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಇದು. ಸೋಲಲಿ ಅಥವಾ ಗೆಲ್ಲಲಿ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕು. ಯಾವುದೇ ನಿರೀಕ್ಷೆ ಇಲ್ಲದೆ ಸಹಾಯ ಮಾಡುವುದೇ ನಿಜವಾದ ಸೇವೆ. ಟೀಕೆಗಳು ಸಾಯುತ್ತವೆ ಆದರೆ ಸಾಧನೆಗಳು ಅಜರಾಮರವಾಗಿರುತ್ತದೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್, ಅ.ದೇವೇಗೌಡ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ ಚಂದ್ರು, ಮುಖಂಡರಾದ ರಾಮ ಲಕ್ಷ್ಮಣ, ಮೇಡಮಾರನಹಳ್ಳಿ ಕುಮಾರ್, ಡಿ.ಕೆ.ರಮೇಶ್, ಕೋಟೆ ರಾಜು, ಪ್ರದೀಪ್ ಮತ್ತಿತರರು ಹಾಜರಿದ್ದರು.

26ಕೆಆರ್ ಎಂಎನ್ 1.ಜೆಪಿಜಿ

ಹಾರೋಹಳ್ಳಿ ಚೆನ್ನಮ್ಮಮಾದಯ್ಯ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು - ಕಾರ್ಯಕರ್ತರ ಸಮ್ಮಿಲನ ಸಭೆಯನ್ನು ಮಾಜಿ ಶಾಸಕ ಮಂಜುನಾಥ್ ಉದ್ಘಾಟಿಸಿದರು.