ಇಒ, ಪಿಡಿಒ ಅಮಾನತಿಗೆ ಆಗ್ರಹಿಸಿ ಜೆಡಿಎಸ್, ಬಿಜೆಪಿ ಪ್ರತಿಭಟನೆ

| Published : Nov 11 2025, 01:15 AM IST

ಇಒ, ಪಿಡಿಒ ಅಮಾನತಿಗೆ ಆಗ್ರಹಿಸಿ ಜೆಡಿಎಸ್, ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟಿಸಿದ ಕನಕಪುರ ಭಾಗದ ಜೆಡಿಎಸ್ - ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಭಾವಚಿತ್ರ ಅಳವಡಿಸದೆ ಉದ್ದೇಶ ಪೂರ್ವಕವಾಗಿ ಅಗೌರವ ತೋರಲಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಕನಕಪುರ ತಾಲೂಕು ಕಸಬಾ ಹೋಬಳಿಯ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರ ಪಾಲನೆ ಮಾಡದೆ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಅಗೌರವ ತೋರಿರುವ ಪಿಡಿಒ ಅವರನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಪ್ರತಿಭಟಿಸಿದ ಕನಕಪುರ ಭಾಗದ ಜೆಡಿಎಸ್ - ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಭಾವಚಿತ್ರ ಅಳವಡಿಸದೆ ಉದ್ದೇಶ ಪೂರ್ವಕವಾಗಿ ಅಗೌರವ ತೋರಲಾಗಿದೆ. ಈ ಕೂಡಲೇ ಬೇಕುಪ್ಪೆ ಗ್ರಾಪಂ ಪಿಡಿಒ ಅವರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಟಿ.ಬೇಕುಪ್ಪೆ ಗ್ರಾಪಂನ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನರಿಗೆ ಹಂಚಲು ಪ್ರಕಟಣೆ ಮಾಡಿಸಿದ್ದ ಕರಪತ್ರಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಭಾವಚಿತ್ರಗಳನ್ನು ಹಾಕಲಾಗಿದೆ. ಆದರೆ, ಪ್ರಸ್ತುತ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಭಾವಚಿತ್ರವನ್ನು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, ಪುಟ್ಟಣ್ಣ, ರಾಮೋಜಿಗೌಡ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಅಪಮಾನ ಮಾಡಿರುವ ಟಿ.ಬೇಕುಪ್ಪೆ ಗ್ರಾಪಂ ಪಿಡಿಒ ಮತ್ತು ಕನಕಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸರ್ಕಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.

ಈ ಕೂಡಲೇ ಬೇಕುಪ್ಪೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕನಕಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸರ್ಕಾರಿ ಕೆಲಸದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಕನಕಪುರ ತಾಲೂಕು ಜೆಡಿಎಸ್ ಅಧ್ಯಕ್ಷ ನಾಗರಾಜು, ಜಿಪಂ ದಿಶಾ ಸದಸ್ಯ ರಾಜೇಶ್, ಶೋಭಾ, ನರಸಿಂಹಮೂರ್ತಿ, ನಗರಸಭಾ ಸದಸ್ಯರಾದ ಸ್ಟುಡಿಯೋ ಚಂದ್ರು, ಲೋಕೇಶ್, ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷೆ ಪವಿತ್ರ, ಬಿಜೆಪಿ ಮಹಿಳಾ ಘಟಕ ಅಧ್ಯಕ್ಷೆ ಮಮತಾ, ಮುಖಂಡ ಕೆ.ಪಿ.ಕುಮಾರ್, ಕಬ್ಬಾಳೇಗೌಡ, ಮಂಜುನಾಥ್, ಕಾಳೇಗೌಡ, ಜಯರಾಂ, ಮರಿಗೌಡ ಮತ್ತಿತರರು ಭಾಗವಹಿಸಿದ್ದರು.

10ಕೆಆರ್ ಎಂಎನ್ 3.ಜೆಪಿಜಿ

ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಜೆಡಿಎಸ್ - ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.