ಲೀಡ್ ಕೊಡಿಸುವಲ್ಲಿ ಗೆದ್ದ ದಳ - ಕಮಲ, ಸೋತ ಕೈ ಪಡೆ

| Published : Jun 06 2024, 12:34 AM IST

ಸಾರಾಂಶ

ಡಾ.ಸಿ.ಎನ್ .ಮಂಜುನಾಥ್ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕಾರಣ ಉಭಯ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಕಾರ್ಯ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದರು.

ಕನ್ನಡಪ್ರಭ ವಾರ್ತೆ ರಾಮನಗರ

ಹೈವೋಲ್ಟೇಜ್ ಕಣವಾಗಿ ರೂಪುಗೊಂಡಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಲೀಡ್ ಕೊಡಿಸುವ ಅಗ್ನಿ ಪರೀಕ್ಷೆಯಲ್ಲಿ ಬಿಜೆಪಿ - ಜೆಡಿಎಸ್ ಶಾಸಕರು, ಪರಾಜಿತರು ಗೆದ್ದರೆ, ಕಾಂಗ್ರೆಸ್ ಶಾಸಕರು ಹೀನಾಯ ಸೋಲು ಅನುಭವಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ಕೆ.ಸುರೇಶ್ ಅವರಿಗೆ ಪಕ್ಷದ ಶಾಸಕರಿರುವ ಕನಕಪುರ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಅಲ್ಪ ಮತಗಳ ಮುನ್ನಡೆ ಸಿಕ್ಕಿದೆ. ಆದರೆ, ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರಿಗೆ ಬಿಜೆಪಿ -2, ಜೆಡಿಎಸ್ - 1 ಮಾತ್ರವಲ್ಲದೆ ಕಾಂಗ್ರೆಸ್ ನ 3 ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಧಿಕ ಮತಗಳು ಲಭಿಸಿವೆ.

ಬೆಂಗಳೂರು ನಗರ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಎಂ.ಕೃಷ್ಣಪ್ಪ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮುನಿರತ್ನ, ರಾಮನಗರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ರಾಮನಗರ ಕ್ಷೇತ್ರದಲ್ಲಿ ಇಕ್ಬಾಲ್ ಹುಸೇನ್ , ಮಾಗಡಿ ಕ್ಷೇತ್ರದಲ್ಲಿ ಎಚ್ .ಸಿ.ಬಾಲಕೃಷ್ಣ, ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ , ಜೆಡಿಎಸ್ ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್ .ಡಿ.ಕುಮಾರಸ್ವಾಮಿ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ರಂಗನಾಥ್ ಅವರನ್ನು ಹೊಂದಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಮೂರು ಪಕ್ಷಗಳ ಶಾಸಕರು ಹಾಗೂ ಪರಾಭವಗೊಂಡ ಅಭ್ಯರ್ಥಿಗಳಿಗೆ ತಾವು ಪಡೆದ ಮತಗಳನ್ನು ತಮ್ಮ ಅಭ್ಯರ್ಥಿಗಳಿಗೆ ವರ್ಗಾಯಿಸುವುದು ಸವಾಲಾಗಿ ಪರಿಣಮಿಸಿತ್ತು. ಈ ಕಾರ್ಯದಲ್ಲಿ ಬಿಜೆಪಿ - ಜೆಡಿಎಸ್ ಶಾಸಕರು, ಪರಾಜಿತರು ಯಶಸ್ವಿಯಾದರೆ, ಕಾಂಗ್ರೆಸ್ ಶಾಸಕರು, ಪರಾಜಿತರು ವಿಫಲರಾಗಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.

ಮೈತ್ರಿ ಅಭ್ಯರ್ಥಿ ಮಂಜುನಾಥ್ ಅವರಿಗೆ ಬಿಜೆಪಿ ಶಾಸಕರಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 98,997, ಬೆಂಗಳೂರು ದಕ್ಷಿಣದಲ್ಲಿ 97,129, ಜೆಡಿಎಸ್ ಶಾಸಕರಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ 21,614 ಅಧಿಕ ಮತಗಳು ಲಭಿಸಿದರೆ, ಕಾಂಗ್ರೆಸ್ ಶಾಸಕರಿದ್ದ ಕುಣಿಗಲ್ ಕ್ಷೇತ್ರದಲ್ಲಿ 23,838, ಆನೇಕಲ್ ಕ್ಷೇತ್ರದಲ್ಲಿ 22,365, ಮಾಗಡಿ ಕ್ಷೇತ್ರದಲ್ಲಿ 29,973 ಹೆಚ್ಚಿನ ಮತಗಳ ಲೀಡ್ ದೊರಕಿದೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಕಾಂಗ್ರೆಸ್ ಶಾಸಕರಿದ್ದ ಕನಕಪುರ ಕ್ಷೇತ್ರದಲ್ಲಿ 25,577, ರಾಮನಗರ ಕ್ಷೇತ್ರದಲ್ಲಿ ಕೇವಲ 145 ಅಧಿಕ ಮತಗಳಷ್ಟೇ ಸಿಕ್ಕಿದೆ.

ಬಿಜೆಪಿ - ಜೆಡಿಎಸ್ ನಾಯಕರ ಒಗ್ಗಟ್ಟು ಪ್ರದರ್ಶನ:

ಡಾ.ಸಿ.ಎನ್ .ಮಂಜುನಾಥ್ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣದಲ್ಲಿದ್ದ ಕಾರಣ ಉಭಯ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಕಾರ್ಯ ನಡೆಸಿ ಒಗ್ಗಟ್ಟು ಪ್ರದರ್ಶಿಸಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ, ಜೆಡಿಎಸ್ ಶಾಸಕರು ಹಾಗೂ ಪರಾಭವಗೊಂಡ ಅಭ್ಯರ್ಥಿಗಳು ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತಗಳನ್ನು ಕೊಡಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಮತ್ತು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಜೆಡಿಎಸ್ ನಾಯಕರು ಸಾಥ್ ನೀಡಿದ್ದರು.

ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿಯ ಗೌತಮ್ ಗೌಡ, ಮಾಗಡಿ ಕ್ಷೇತ್ರದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ , ಬಿಜೆಪಿಯ ಪ್ರಸಾದ್ ಗೌಡ, ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರಿಗೆ ಉಭಯ ಪಕ್ಷಗಳ ನಾಯಕರು ಸಹಕಾರ ನೀಡಿದ್ದರಿಂದಲೇ ಹೆಚ್ಚು ಮತಗಳು ಲಭಿಸಲು ಕಾರಣವಾಗಿದೆ.

ಕನಕಪುರ ಕ್ಷೇತ್ರದಲ್ಲಿಯೂ ಉಭಯ ಪಕ್ಷಗಳ ಸ್ಥಳೀಯ ಮುಖಂಡರು ಒಂದಾಗಿದ್ದರೆ, ಕುಣಿಗಲ್ ಕ್ಷೇತ್ರದಲ್ಲಿ ಬಿಜೆಪಿಯ ಡಿ.ಕೃಷ್ಣ ಕುಮಾರ್ ಅವರಿಗೆ ಜೆಡಿಎಸ್ ನ ಡಾ.ರವಿ ನಾಗರಾಜಯ್ಯ ಜೊತೆಗೂಡಿ ಚುನಾವಣಾ ಪ್ರಚಾರದಲ್ಲಿ ನಡೆಸಿ ಮೈತ್ರಿ ಅಭ್ಯರ್ಥಿ ಮಂಜುನಾಥ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

-----------------------------------ಬಾಕ್ಸ್..........

ನಿಗಮ ಮಂಡಳಿ, ಪ್ರಾಧಿಕಾರ ಅಧ್ಯಕ್ಷರ ವೈಫಲ್ಯ

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತ್ರವಲ್ಲದೆ ನಿಗಮ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರಿಗೆ ಮತ ತಂದುಕೊಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಕಾಂಗ್ರೆಸ್ ನ ಪ್ರಮುಖ ನಾಯಕರಿಗೆ ನಿಗಮ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಪದಾಧಿಕಾರಿಗಳ ಸ್ಥಾನ ಕಲ್ಪಿಸಲಾಗಿತ್ತು. ಅಧ್ಯಕ್ಷ ಸ್ಥಾನಗಳನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದವರನ್ನೇ ನೇಮಕ ಮಾಡಲಾಗಿತ್ತು. ಅಧಿಕಾರ ಹಂಚಿಕೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಆಗುತ್ತಿಲ್ಲ ಎಂಬ ಅಪಸ್ವರಗಳು ಪಕ್ಷದೊಳಗೆ ಕೇಳಿ ಬಂದಿತ್ತು. ಇದ್ಯಾವುದನ್ನು ಡಿಕೆ ಸಹೋದರರು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಅಷ್ಟಕ್ಕೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ನಾಯಕರು ನಡೆಸಿದಷ್ಟು ಹೋರಾಟವನ್ನು ಡಿ.ಕೆ.ಸುರೇಶ್ ರವರಿಗೆ ಮತಗಳನ್ನು ತಂದುಕೊಡಲು ಮಾಡಲಿಲ್ಲ ಎಂಬುದು ಆ ಪಕ್ಷದ ನಾಯಕರ ಆರೋಪವಾಗಿದೆ. ಇದೀಗ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವ ಸವಾಲು ಆ ನಾಯಕರ ಮುಂದಿದೆ

ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಡಿ.ಕೆ.ಶಿವಕುಮಾರ್ ರವರು ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರೆ, ಮಾಗಡಿ ಕ್ಷೇತ್ರದ ಶಾಸಕ ಎಚ್ .ಸಿ.ಬಾಲಕೃಷ್ಣರವರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿದ್ದು, ಅವರು ಸಂಪುಟ ದರ್ಜೆ ಹೊಂದಿದ್ದಾರೆ. ಅಲ್ಲದೆ, ಬೆಂಗಳೂರು - ಮೈಸೂರು ಇನ್ಪ್ರಾಸ್ಟ್ರಾಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರ ಅಧ್ಯಕ್ಷರಾಗಿ ರಘುನಂದನ್ ರಾಮಣ್ಣ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಗಾಣಕಲ್ ನಟರಾಜು, ಕನಕಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಆರ್ .ಕೃಷ್ಣಮೂರ್ತಿ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಆರ್ .ಪ್ರಮೋದ್ , ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಂಚೇಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎ.ಬಿ.ಚೇತನ್ ಕುಮಾರ್ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾಗಿ ಮಾಜಿ ಶಾಸಕ ಕೆ.ರಾಜು ನೇಮಕಗೊಂಡಿದ್ದಾರೆ. ಇವರೆಲ್ಲರು ಕಾಂಗ್ರೆಸ್ ನ ಪ್ರಮುಖ ನಾಯಕರುಗಳೇ ಆಗಿದ್ದಾರೆ. ಇವರೆಲ್ಲರು ನಿರೀಕ್ಷೆಯಂತೆ ಮತ ತಂದುಕೊಡುವಲ್ಲಿ ಎಡವಿದ್ದಾರೆ.

--------------------------

ವಿಧಾನಸಭಾ ಚುನಾವಣೆಯಲ್ಲಿ ಮೂರು ಪಕ್ಷಗಳು ಪಡೆದ ಮತಗಳ ವಿವರ

ಕ್ಷೇತ್ರ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ,ಕುಣಿಗಲ್, 74,724, 46,974, 48,151,ಆರ್ ಆರ್ ನಗರ, 1,16,138, 7795, 1,27,980ಬೆ. ದಕ್ಷಿಣ, 1,46,521, 24,612, 1,96,220,ಆನೇಕಲ್, 1,34,797, 6,415, 1,03,472ಮಾಗಡಿ, 94,650, 82,811, 20,197ರಾಮನಗರ, 87,690, 76,975, 12,912ಕನಕಪುರ, 1,43,023, 20,631, 19,753ಚನ್ನಪಟ್ಟಣ 15,374, 96,592, 80677,----------------------------------------------- ಒಟ್ಟು, 8,12,917, 3,62,805, 6,09,362------------------------------------------------ ಬೆಂಗಳೂರು ಗ್ರಾಮಾಂತರ ಕ್ಷೇತ್ರ : ವಿಧಾನಸಭಾ ಕ್ಷೇತ್ರವಾರು ಮತ ಗಳಿಕೆಯ ವಿವರಕ್ಷೇತ್ರ, ಡಾ.ಸಿ.ಎನ್.ಮಂಜುನಾಥ್, ಡಿ.ಕೆ. ಸುರೇಶ್, ಅಂತರಕುಣಿಗಲ್, 97,248, 73,410, 23,838(ಬಿಜೆಪಿ ಲೀಡ್)ರಾಜರಾಜೇಶ್ವರಿನಗರ, 1,88,726, 89,729, 98,997(ಬಿಜೆಪಿ ಲೀಡ್)ಬೆಂಗಳೂರು ದಕ್ಷಿಣ, 2,55,756, 1,58,627, 97,129(ಬಿಜೆಪಿ ಲೀಡ್)ಆನೇಕಲ್, 1,37,693, 1,15,328, 22,365(ಬಿಜೆಪಿ ಲೀಡ್)ಮಾಗಡಿ, 1,13,911, 83,938, 29,973(ಬಿಜೆಪಿ ಲೀಡ್)ಚನ್ನಪಟ್ಟಣ, 1,06,971, 85,357, 21,614(ಬಿಜೆಪಿ ಲೀಡ್)ರಾಮನಗರ, 91,945, 92,090, 145(ಕಾಂಗ್ರೆಸ್ ಲೀಡ್)ಕನಕಪುರ, 83,303, 1,08,980, 25,677(ಕಾಂಗ್ರೆಸ್ ಲೀಡ್)ಅಂಚೆ ಮತಗಳು, 3449, 1896, 1,553(ಬಿಜೆಪಿ ಲೀಡ್)----------------------------------------------------------------------ಒಟ್ಟು, 10,79,002, 8,09,355, 2,69,647(ಬಿಜೆಪಿ ಲೀಡ್)