ಎಡಿಜಿಪಿ ಚಂದ್ರಶೇಖರ್ ಅನರ್ಹಗೊಳಿಸಲು ಜೆಡಿಎಸ್‌ ಆಗ್ರಹ

| Published : Oct 04 2024, 01:09 AM IST

ಎಡಿಜಿಪಿ ಚಂದ್ರಶೇಖರ್ ಅನರ್ಹಗೊಳಿಸಲು ಜೆಡಿಎಸ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹಾಗೂ ಕೀಳು ಮಟ್ಟದ ಪದ ಬಳಿಸಿರುವ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾದ್ಯಂತ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹಾಗೂ ಕೀಳು ಮಟ್ಟದ ಪದ ಬಳಿಸಿರುವ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎಡಿಜಿಪಿ ಚಂದ್ರಶೇಖರ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಏಕವಚನ ಹಾಗೂ ಕೆಟ್ಟ ಪದಗಳನ್ನು ಬಳಸಿ ಪತ್ರ ಬರೆದು ದರ್ಪ ತೋರಿಸಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ಜಿಲ್ಲಾ ಜೆಡಿಎಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.

ಚಂದ್ರಶೇಖರ್ ಅವರ ವಿರುದ್ಧ ಹಲವು ದೂರು ದಾಖಲಾಗಿವೆ. ಭ್ರಷ್ಟಾಚಾರದ ಆರೋಪಗಳೂ ಇವೆ. ಪತ್ನಿಯ ಹೆಸರಲ್ಲಿ ರಾಜಕಾಲುವೆ ಮೇಲೆ ಬಹುಮಹಡಿ ವಾಣಿಜ್ಯ ಕಟ್ಟಡ ಕಟ್ಟಿದ್ದಾರೆ. ಭೂ ವ್ಯವಹಾರವೊಂದರಲ್ಲಿ 20 ಕೋಟಿ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರ ವಿರುದ್ಧವೂ ತನಿಖೆಯಾಗಬೇಕು. ಕೂಡಲೇ ಲೋಕಾಯುಕ್ತ ವಿಶೇಷ ತನಿಖಾ ದಳದಿಂದ ಅವರನ್ನು ಅನರ್ಹಗೊಳಿಸಬೇಕು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಾ. ಕಡಿದಾಳ್ ಗೋಪಾಲ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಗೀತಾ ಸತೀಶ್, ರಾಕೇಶ್ ಡಿಸೋಜ, ರಾಮಕೃಷ್ಣ, ನಿಖಿಲ್, ದಾದಾಪೀರ್, ದಾನೇಶಪ್ಪ, ಮಧುಕುಮಾರ್, ಓಂಕಾರಪ್ಪ ಕೆ.ಪಿ.ಸೇರಿದಂತೆ ಹಲವರಿದ್ದರು.ತೀರ್ಥಹಳ್ಳಿಯಲ್ಲೂ ಜಾತ್ಯಾತೀತ ಜನತಾದಳದಿಂದ ಪ್ರತಿಭಟನೆ:

ತೀರ್ಥಹಳ್ಳಿ: ಕೇಂದ್ರ ಸಂಪುಟ ದರ್ಜೆಯ ಭಾರಿ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಏಕವಚನ ಬಳಸಿ ನಿಂದಿಸಿರುವ ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಾಲೂಕು ಜಾತ್ಯಾತೀತ ಜನತಾದಳ ಆಗ್ರಹಿಸಿದೆ.ಗುರುವಾರ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅಧ್ಯಕ್ಷ ಕುಣಜೆ ಕಿರಣ್ ಪ್ರಭಾಕರ್, ತಾನೊಬ್ಬ ಐಪಿಎಸ್ ಅಧಿಕಾರಿ ಎಂಬ ದರ್ಪದಿಂದ ಕೇಂದ್ರ ಸರ್ಕಾರದ ಭಾರಿ ಕೈಗಾರಿಕೆ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಕೀಳು ಮಟ್ಟದ ಪದ ಬಳಸಿ ಅವಹೇಳನಕಾರಿಯಾಗಿ ಪತ್ರ ಬರೆದಿರುವುದು ಖಂಡನೀಯವಾಗಿದೆ ಎಂದು ದೂರಿದರು.

ಪಕ್ಷದ ಕಾರ್ಯದರ್ಶಿ ಕುಡುವಳ್ಳಿ ಗುರುದತ್ತ ಕುಮಾರ್, ತಾಲೂಕು ಯುವ ಜಾತ್ಯಾತೀತ ಜನತಾದಳದ ಅಧ್ಯಕ್ಷ ತಲುಬಿ ರಾಘವೇಂದ್ರ, ಮಹಿಳಾ ಘಟಕದ ಅಧ್ಯಕ್ಷೆ ಶೈಲಾ, ಮೇಧೊಳಿಗೆ ರಾಮಸ್ವಾಮಿ, ಡಾಕಪ್ಪ, ಪಕ್ಷದ ಪರಿಶಿಷ್ಟ ವಿಭಾಗದ ಅಧ್ಯಕ್ಷ್ಷ ಆನಂದ್ ಮುಂತಾದವರು ಇದ್ದರು.ಎಚ್‌ಡಿಕೆ ಅವಹೇಳನಕ್ಕೆ ಕಾರ್ಯಕರ್ತರು ಕಿಡಿ

ಶಿಕಾರಿಪುರ: ಐಪಿಎಸ್ ಅಧಿಕಾರಿ ಚಂದ್ರಶೇಖರ್ ಕೇಂದ್ರ ಸಂಪುಟ ದರ್ಜೆಯ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೀಳುಮಟ್ಟದ ಪದಗಳಿಂದ ಅವಹೇಳನ ಮಾಡಿದ್ದು, ಈ ಕೂಡಲೇ ಅಧಿಕಾರಿ ವಜಾಗೊಳಿಸಿ ಅವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ತಾಲೂಕು ಉಸ್ತುವಾರಿ ಎಚ್.ಎಂಸಂಗಯ್ಯ ಆಗ್ರಹಿಸಿದರು.ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಲೂಕು ಜೆಡಿಎಸ್‌ ವತಿಯಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ನಿಂದಿಸಿದ ಲೊಆಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ಕುಮಾರಸ್ವಾಮಿ ರವರು ಕೇಂದ್ರ ಸರ್ಕಾರದ ಸಚಿವರು ಎಂಬ ಕನಿಷ್ಠ ಗೌರವ ನೀಡದ ಐಪಿಎಸ್ ಅಧಿಕಾರಿ ವರ್ತನೆ ಎಲ್ಲ ಜನಪ್ರತಿನಿಧಿಗಳಿಗೆ ಅಪಮಾನ ಉಂಟು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚಂದ್ರಶೇಖರ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಈ ವೇಲೇ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಯೋಗೀಶ್ ಬೆಂಕಿ, ರಾಜ್ಯ ಕಾರ್ಯದರ್ಶಿ ಈರಾನಾಯ್ಕ ಬಿಳಕಿ, ಜಿಲ್ಲಾ ಉಪಾಧ್ಯಕ್ಷ ಆರ್.ಜಯಣ್ಣ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ, ಸರೋಜಮ್ಮ, ಮಂಜುನಾಥ್, ಕಾರ್ತಿಕ್, ನಗೀನಾ ಭಾನು, ವಿಮಲಾ, ಭರತ್, ಬೂದ್ಯಪ್ಪಗೌಡ, ಜರೀನಾ ಮತ್ತಿತರರಿದ್ದರು.