ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಅಧ್ಯಕ್ಷ ಮತ್ತು ಉಪಾಧ್ಯಕ್ಷ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವರು ಮೈತ್ರಿ ಧರ್ಮವನ್ನು ಪಾಲನೆ ಮಾಡಿಲ್ಲ ಎಂದು ಮಾಜಿ ಶಾಸಕ ಪ್ರೀತಂ ಗೌಡರು ಹೇಳಿಕೆ ನೀಡಿದ್ದು, ನಾವು ಮೈತ್ರಿ ಧರ್ಮವನ್ನು ಪಾಲನೆ ಮಾಡಿದ್ದು, ಬಿಜೆಪಿಯವರಿಗೆ ಮೈತ್ರಿ ಧರ್ಮ ಏನೆಂದು ಗೊತ್ತಿಲ್ಲ ಎಂದು ಬಿಜೆಪಿ ಹೇಳಿಕೆಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡರು ತಿರುಗೇಟು ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣನವರು ಸಂಸದರ ಸ್ಥಾನಕ್ಕೆ ಸ್ಪರ್ಧೆ ಮಾಡಿದಾಗ ಬಿಜೆಪಿಯವರು ಮೈತ್ರಿ ಧರ್ಮವನ್ನು ಪಾಲಿಸದೇ ನನಗೆ ಮೈಸೂರು ಉಸ್ತುವಾರಿ ಕೊಟ್ಟಿದ್ದು, ಅಲ್ಲಿ ಪ್ರಚಾರ ಮಾಡಬೇಕೆಂದು ಹೇಳಿ ಅಲ್ಲಿಯೇ ಠಿಕಾಣಿ ಹಾಕಿದರು. ಪಕ್ಷದಿಂದ ಸಲಹೆ ಸೂಚನೆ ಕೊಟ್ಟರೂ ಸಹ ಪ್ರೀತಂಗೌಡರು ಮೈತ್ರಿ ಧರ್ಮವನ್ನು ಪಾಲಿಸಲಿಲ್ಲ ಎಂದು ದೂರಿದರು. ಇಂತಹವರಿಂದ ನಮ್ಮ ಪಕ್ಷದ ಹೇಳಿಸಿಕೊಳ್ಳುವುದು ನಮ್ಮ ಪಕ್ಷಕ್ಕೆ ಬಂದಿಲ್ಲ. ಬಿಜೆಪಿಯವರು ಮೈತ್ರಿ ಧರ್ಮ ಪಾಲಿಸದೇ ಪ್ರೀತಂಗೌಡರ ಹಿಂಬಾಲಕರು ಕಾಂಗ್ರೆಸ್ ಪಕ್ಷಕ್ಕೆ ಮತ ಹಕುವಂತೆ ನೇರವಾಗಿ ಪ್ರಚಾರ ಮಾಡಿದ್ದಾರೆ. ಹಾಸನದಲ್ಲಿ ಏನಾದರೂ ಅಭಿವೃದ್ಧಿ ಆಗಬೇಕಾದರೇ ಸಂಸದ ಶ್ರೇಯಸ್ ಪಟೇಲ್ ಅವರು ಪ್ರೀತಂಗೌಡರನ್ನು ಕೇಳಿಯೇ ಮಾಡುತ್ತಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರೆ ಮಾತನಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪ್ರೀತಂಗೌಡ ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಮೈತ್ರಿಧರ್ಮ ಪಾಲನೆ ಮಾಡಲಿಲ್ಲ. ಕಾಂಗ್ರೆಸ್‌ಗೆ ಮತ ಹಾಕಿ ಎಂದು ಅವರು ನೇರವಾಗಿಯೇ ತಮ್ಮ ಬೆಂಬಲಿಗರಿಗೆ ಹೇಳಿದ್ದರು. ಅವರ ಬೆಂಬಲಿಗರು ಕಾಂಗ್ರೆಸ್ ಪರವಾಗಿಯೇ ಪ್ರಚಾರ ನಡೆಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಹಾಸನ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವುದಾದರೂ ಸಂಸದ ಶ್ರೇಯಸ್ ಪಟೇಲ್ ಕಾಂಗ್ರೆಸ್ ನಾಯಕರ ಬದಲು ಪ್ರೀತಂಗೌಡ ಅವರ ಸಲಹೆ ಪಾಲಿಸುತ್ತಾರೆ ಎಂದು ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ. ಅವರಿಂದ ನಾವು ಮೈತ್ರಿ ಧರ್ಮ ಅವರಿಂದ ಕಲಿಯಬೇಕಿಲ್ಲ. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ನಾವು ಮೈತ್ರಿಧರ್ಮ ಪಾಲಿಸಿದ್ದೇವೆ. ಬಿಜೆಪಿಯಿಂದ ಆಯ್ಕೆಯಾಗಿರುವ ಸದಸ್ಯೆ ಲತಾದೇವಿ ಅವರನ್ನು ಉಪಾಧ್ಯಕ್ಷರಾಗಿ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ ಮಾತನಾಡಿ, ಹಾಸನ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಅವರು ಸಾಂದರ್ಭಿಕ ಶಾಸಕರೆಂದು ಮಾಜಿ ಶಾಸಕ ಪ್ರೀತಂಗೌಡರು ಆರೋಪ ಮಾಡಲಾಗುತ್ತಿದ್ದು, ಸ್ವರೂಪ್ ಅವರ ತಂದೆ ದಿವಂಗತ ಎಚ್.ಎಸ್. ಪ್ರಕಾಶ್ ಅವರು ಹಿಂದೆ ನಾಲ್ಕು ಬಾರಿ ಶಾಸಕರಾದವರು. ಸ್ವರೂಪ್ ಪ್ರಕಾಶ್ ಅವರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಈಗ ಶಾಸಕರಾಗಿದ್ದಾರೆ. ೨೦೧೯ರಲ್ಲಿ ಪ್ರೀತಂ ಗೌಡರು ಆಕಸ್ಮಿಕ ಶಾಸಕರಾಗಿದ್ದವರು. ಪ್ರೀತಂ ಗೌಡರು ಶಾಸಕರಾಗಿದ್ದಾಗ ಯಾವ ಗುರುತರ ಅಭಿವೃದ್ಧಿ ಕೆಲಸ ಮಾಡದೇ ಊರು ತುಂಬ ಬಾರ್‌ಗಳನ್ನು ಮಾಡಿದರು ಎಂದು ವ್ಯಂಗ್ಯವಾಗಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು, ನಗರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಅಕ್ಬರ್, ಬಿದರಿಕೆರೆ ಜಯರಾಂ ಇತರರು ಉಪಸ್ಥಿತರಿದ್ದರು.