ಧರ್ಮಸ್ಥಳ ವಿರೋಧಿ ಅಪಪ್ರಚಾರಕ್ಕೆ ಜೆಡಿಎಸ್‌ ತಿರುಗೇಟು

| Published : Aug 31 2025, 01:08 AM IST

ಸಾರಾಂಶ

ಧರ್ಮಸ್ಥಳವು ಶತಮಾನಗಳಿಂದ ಹಿಂದೂ ಸಮುದಾಯದ ಶ್ರದ್ಧಾ ಕೇಂದ್ರವಾಗಿದ್ದು, ಇಲ್ಲಿಂದ ಅಣ್ಣದಾಸೋಹ, ಶಿಕ್ಷಣ, ವೈದ್ಯಕೀಯ, ಗ್ರಾಮೀಣಾಭಿವೃದ್ಧಿ, ಸಹಸ್ರಾರು ದೇವಾಲಯಗಳ ಪುನರ್‌ಸ್ಥಾಪನೆ ಸೇರಿದಂತೆ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಕ್ಷೇತ್ರಕ್ಕೆ ಅಪಪ್ರಚಾರ ಮಾಡುವ ಪ್ರಯತ್ನ ದುರಾಸೆಯಾಗಿದೆ ಎಂದು ಲಿಂಗೇಶ್ ಖಂಡಿಸಿದರು. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕಾರ್ಯಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದಲೂ ಈ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ಪ್ರಚಾರವನ್ನು ಖಂಡಿಸಲು, ಜಾತ್ಯತೀತ ಜನತಾದಳ (ಜೆಡಿಎಸ್) ವತಿಯಿಂದ ಆಗಸ್ಟ್ ೩೧ರಂದು ಧರ್ಮಸ್ಥಳ ಸತ್ಯಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್ ತಿಳಿಸಿದರು.ನಗರದ ಕಂದಲಿಯ ಯಗಚಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಂದಲಿಯ ಯಗಚಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಮ್ಮ ನಾಯಕರು ಎಚ್.ಡಿ. ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ಡಾ. ರೇವಣ್ಣ, ಸುರೇಶ್ ಬಾಬು ಮಾರ್ಗದರ್ಶನದಲ್ಲಿ, ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ. ಹಾಸನದಿಂದ ಮಾತ್ರ ೬ರಿಂದ ೭ ಸಾವಿರ ಮಂದಿ ಕಾರ್ಯಕರ್ತರು ವಾಹನಗಳಲ್ಲಿ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ಬೇಲೂರು ಹಾಗೂ ಸಕಲೇಶಪುರ ತಾಲೂಕುಗಳಿಂದ ನೇರವಾಗಿ ಸಾವಿರಾರು ಕಾರ್ಯಕರ್ತರು ಧರ್ಮಸ್ಥಳದಲ್ಲಿ ಯಾತ್ರೆಯೊಂದಿಗೆ ಸೇರ್ಪಡೆಯಾಗಲಿದ್ದಾರೆ ಎಂದರು.

ಧರ್ಮಸ್ಥಳವು ಶತಮಾನಗಳಿಂದ ಹಿಂದೂ ಸಮುದಾಯದ ಶ್ರದ್ಧಾ ಕೇಂದ್ರವಾಗಿದ್ದು, ಇಲ್ಲಿಂದ ಅಣ್ಣದಾಸೋಹ, ಶಿಕ್ಷಣ, ವೈದ್ಯಕೀಯ, ಗ್ರಾಮೀಣಾಭಿವೃದ್ಧಿ, ಸಹಸ್ರಾರು ದೇವಾಲಯಗಳ ಪುನರ್‌ಸ್ಥಾಪನೆ ಸೇರಿದಂತೆ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಕ್ಷೇತ್ರಕ್ಕೆ ಅಪಪ್ರಚಾರ ಮಾಡುವ ಪ್ರಯತ್ನ ದುರಾಸೆಯಾಗಿದೆ ಎಂದು ಲಿಂಗೇಶ್ ಖಂಡಿಸಿದರು. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಬದ್ಧತೆಯಿಂದ ಧರ್ಮಸ್ಥಳವು ಇಡೀ ರಾಷ್ಟ್ರದಲ್ಲಿ ಮಾದರಿಯಾದ ಸಂಸ್ಥೆಯಾಗಿದೆ. ಅವರ ಕಾರ್ಯಕ್ಕೆ ಬೆಂಬಲ ಸೂಚಿಸುವ ಉದ್ದೇಶದಿಂದಲೂ ಈ ಯಾತ್ರೆ ಹಮ್ಮಿಕೊಂಡಿದ್ದೇವೆ. ಧರ್ಮಸ್ಥಳದ ವಿರುದ್ಧ ಸುಳ್ಳುಪ್ರಚಾರ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಸತ್ಯ ಹೊರಬರುವಂತೆ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.ಈ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಭಾನುವಾರ ಬೆಳಗ್ಗೆ ೭.೩೦ಕ್ಕೆ ಸಾವಿರಾರು ಮಂದಿ ಕಾರ್ಯಕರ್ತರು ಮತ್ತು ಮುಖಂಡರು ಹಾಸನದ ಯಗಚಿ ಶಾಲಾ ಆವರಣದಲ್ಲಿ ಕೂಡಲಿದ್ದಾರೆ. ಅವರಿಗೆ ಉಪಹಾರದ ವ್ಯವಸ್ಥೆಯೂ ಮಾಡಲಾಗಿದೆ. ನಂತರ ವಾಹನಗಳಲ್ಲಿ ಧರ್ಮಸ್ಥಳ ತಲುಪಿದ ಕಾರ್ಯಕರ್ತರು, ನೇತ್ರಾವತಿ ನದಿಯ ಬಳಿ ವಾಹನ ನಿಲುಗಡೆ ಮಾಡಿ ಕಾಲ್ನಡಿಗೆಯಲ್ಲಿ ದೇವಸ್ಥಾನ ತಲುಪಲಿದ್ದಾರೆ. ಅಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ, ಶ್ರೀ ಮಂಜುನಾಥನ ದರ್ಶನ ಪಡೆದ ನಂತರ ಪ್ರಸಾದ ಸ್ವೀಕರಿಸಿ ಹಾಸನಕ್ಕೆ ಹಿಂದಿರುಗಲಾಗುತ್ತದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಮುಖಂಡರಾದ ಶೇಷಾದ್ರಿ, ಮಂಜುನಾಥ್ ಇತರರು ಉಪಸ್ಥಿತರಿದ್ದರು.