ರಾಮನಗರ: ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿರುವ ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಅದೊಂದು ಜಾತಿ ವ್ಯಾಧಿ ಪಕ್ಷವಾಗಿ ರೂಪುಗೊಂಡಿದೆ. ಹೀಗಾಗಿಯೇ ಶ್ರೀ ರೇವಣಸಿದ್ದೇಶ್ವರಸ್ವಾಮಿ ರಥೋತ್ಸವ ವೇಳೆ ಸಂಭವಿಸಿದ ಆಕಸ್ಮಿಕ ಘಟನೆಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ರಾಜಕಾರಣ ಮಾಡಲು ಹೊರಟಿದೆ ಎಂದು ಜೆಡಿಎಸ್ ಮುಖಂಡರ ವಿರುದ್ಧ ಹುಲಿಕೆರೆ-ಗುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ ವಾಗ್ದಾಳಿ ನಡೆಸಿದರು

ರಾಮನಗರ: ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿರುವ ಜೆಡಿಎಸ್ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಅದೊಂದು ಜಾತಿ ವ್ಯಾಧಿ ಪಕ್ಷವಾಗಿ ರೂಪುಗೊಂಡಿದೆ. ಹೀಗಾಗಿಯೇ ಶ್ರೀ ರೇವಣಸಿದ್ದೇಶ್ವರಸ್ವಾಮಿ ರಥೋತ್ಸವ ವೇಳೆ ಸಂಭವಿಸಿದ ಆಕಸ್ಮಿಕ ಘಟನೆಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ರಾಜಕಾರಣ ಮಾಡಲು ಹೊರಟಿದೆ ಎಂದು ಜೆಡಿಎಸ್ ಮುಖಂಡರ ವಿರುದ್ಧ ಹುಲಿಕೆರೆ-ಗುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ ವಾಗ್ದಾಳಿ ನಡೆಸಿದರು.

ಶ್ರೀ ರೇವಣಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಇಕ್ಬಾಲ್ ಹುಸೇನ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾದರು ಒಂದು ವರ್ಗಕ್ಕೆ ಸೀಮಿತರಾಗಿ ನಡೆದುಕೊಂಡಿಲ್ಲ. ಎಲ್ಲ ಜಾತಿ ಧರ್ಮಗಳು ಮತ್ತು ಜನರನ್ನು ಗೌರವಿಸುವ ಅವರು ಸರ್ವ ಧರ್ಮಗಳ ಸಮನ್ವಯ ನಾಯಕರಾಗಿದ್ದಾರೆ ಎಂದರು.

ಶ್ರೀ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಹಿಂದೂ ಪಂಚಾಂಗ ಪ್ರಕಾರ ಮಧ್ಯಾಹ್ನ 12.45ರಿಂದ 1.30ರವರೆಗೆ ರಥೋತ್ಸವಕ್ಕೆ ಮುಹೂರ್ತ ನಿಗದಿಯಾಗಿತ್ತು. ಈ ವಿಚಾರ ತಿಳಿದಿದ್ದ ಶಾಸಕರು ತಾವು ಬರುವುದು ತಡವಾಗಬಹುದು. ನಿಗದಿತ ಸಮಯಕ್ಕೆ ರಥೋತ್ಸವ ನೆರವೇರಿಸುವಂತೆ ಹೇಳಿದ್ದರು. 10 ನಿಮಿಷ ತಡವಾದರು ಸರಿ ಶಾಸಕರು ಬರಲೆಂದು ಸ್ಥಳೀಯರು ಒತ್ತಾಯಿಸಿದ್ದರು. 10ರಿಂದ 15 ನಿಮಿಷ ತಡವಾಗಿ ಆಗಮಿಸಿದ ಶಾಸಕರು ಆ ದಿನವೇ ತಡವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ಆದರೆ, ನಿರುದ್ಯೋಗಿಗಳಾಗಿರುವ ಜೆಡಿಎಸ್ ಮುಖಂಡರು ಇದನ್ನೇ ದೊಡ್ಡ ಅಪರಾಧ ಎನ್ನುವಂತೆ ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕ ಇಕ್ಬಾಲ್ ಹುಸೇನ್ ಶೂ ಧರಿಸಿಕೊಂಡೇ ಶುಭ ಮುಹೂರ್ತ ಮೀರಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದ್ದೆ ವಿಘ್ನಗಳು ಸಂಭವಿಸಲು ಕಾರಣವೆಂದು ಜೆಡಿಎಸ್ ನವರು ಆರೋಪಿಸಿದ್ದಾರೆ. ಶಾಸಕರು ಶೂ ಕಳಚಿ ರಥ ಎಳೆದಿರುವುದಕ್ಕೆ ಜನರೇ ಸಾಕ್ಷಿಯಾಗಿದ್ದಾರೆ. ಇನ್ನು ಜೆಡಿಎಸ್ ಶಾಸಕರಿದ್ದ ಅವಧಿಯಲ್ಲಿ 2003-04ರಲ್ಲಿ ರಥಕ್ಕೆ ಸಿಲುಕುತ್ತಿದ್ದ ಇಬ್ಬರನ್ನು ಪಾರು ಮಾಡಲಾಗಿತ್ತು. ಆದರೂ 2 ಬೈಕ್, 1 ಕಾರು ಜಖಂಗೊಂಡಿತ್ತು. 2009-10ರಲ್ಲಿ ರಥದ ಈರ್ಚಿ ಮುರಿಯಿತು. 2012-13ರಲ್ಲಿ ಚಿಕ್ಕೋನಯ್ಯನ ಕಾಲಿನ ಪಾದ ಕತ್ತರಿಸಿತು. 2018ರಲ್ಲಿ ಅರ್ಚಕರು ಕೊಂಡಕ್ಕೆ ಬಿದ್ದು ಗಾಯಗೊಂಡರು. ಈ ಅವಘಡಗಳಿಗೆಲ್ಲ ಜೆಡಿಎಸ್ ಶಾಸಕರಲ್ಲದೆ ಮತ್ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.

ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ನೀರಿಲ್ಲದ ಕಾರಣ ಭಕ್ತರಿಗೆ ತೊಂದರೆಯಾಗುತ್ತಿತ್ತು. ಈ ವಿಚಾರ ತಿಳಿದ ಶಾಸಕರು ಒಂದೇ ದಿನದಲ್ಲಿ ಬೋರ್‌ವೆಲ್ ಕೊರೆಸಿ ನೀರಿನ ವ್ಯವಸ್ಥೆ ಕಲ್ಪಿಸಿದರು. ಶಾಸಕರ ನಿಧಿಯಿಂದ 4.50 ಕೋಟಿ ವೆಚ್ಚದಲ್ಲಿ ಲಿಫ್ಟ್ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಇದು ಶಾಸಕ ಇಕ್ಬಾಲ್ ಹುಸೇನ್ ಈ ಕ್ಷೇತ್ರದ ಮೇಲೆ ಹೊಂದಿರುವ ಭಕ್ತಿ ತೋರಿಸುತ್ತದೆ ಎಂದರು.

ಈಗ ಕ್ಷೇತ್ರದಲ್ಲಿ ಒಂದೂವರೆ ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 20-25 ವರ್ಷಗಳಿಂದ ಆಗದಿರುವ ಕೆಲಸಗಳಿಗೂ ಚಾಲನೆ ಸಿಕ್ಕಿವೆ. ವಾರದಲ್ಲಿ 5 ದಿನ ಕ್ಷೇತ್ರದಲ್ಲಿರುತ್ತಾರೆ. ಶಾಸಕರ ಕಚೇರಿಯಲ್ಲಿ ಪ್ರತಿ ದಿನ ನೂರಾರು ಜನರನ್ನು ಭೇಟಿ ಮಾಡಿ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಶಾಸಕರ ಜನಪ್ರಿಯತೆ ಸಹಿಸದ ಜೆಡಿಎಸ್‌ನವರು ಧಾರ್ಮಿಕ ವಿಚಾರದಲ್ಲಿ ರಾಜಕೀಯ ಬೆರೆಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಾಗೇಂದ್ರ ಟೀಕಿಸಿದರು.

ದೇಗುಲಗಳಿಗೆ ಧನ ಸಹಾಯ ಮಾಡಿದವರು ಹಿಂದೂ ವಿರೋಧಿಯೇ:

ಯುವ ಕಾಂಗ್ರೆಸ್ ಮುಖಂಡ ಎನ್.ಹರ್ಷನಂದನ್ ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ಜಿಪಂ ಅಧ್ಯಕ್ಷರಾಗಿದ್ದ ದಿನದಿಂದ ಇಲ್ಲಿವರೆಗೆ ನೂರಾರು ದೇವಾಲಯಗಳ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದಾರೆ.

ಶ್ರೀ ರೇವಣ ಸಿದ್ದೇಶ್ವರಸ್ವಾಮಿ ಮಠಕ್ಕೆ ಲಕ್ಷಾಂತರ ರುಪಾಯಿಗಳ ಗ್ರಾನೈಟ್ ಕೊಟ್ಟಿದ್ದಾರೆ. ಜಾತಿ ಧರ್ಮ ನೋಡದೆ ಕಷ್ಟ ಹೇಳಿಕೊಂಡು ಬಂದವರಿಗೆ ಕೈಲಾದ ಸಹಾಯ ಮಾಡಿದ್ದಾರೆ. ಜೆಡಿಎಸ್ ಶಾಸಕರಾಗಿದ್ದವರು ಎಷ್ಟು ದೇವಾಲಯಗಳಿಗೆ ಧನ ಸಹಾಯ ಮಾಡಿದ್ದಾರೆಂದು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ರಾಮನಗರ ಕ್ಷೇತ್ರದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದವರೇ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದರು. ಅವರ್ಯಾರಿಗೂ ಶ್ರೀರಾಮ ನೆನಪಿಗೆ ಬರಲೇ ಇಲ್ಲ. ಆದರೆ, ಇಕ್ಬಾಲ್ ಹುಸೇನ್ ಶ್ರೀರಾಮೋತ್ಸವ

ಆಚರಿಸಿ ಇತಿಹಾಸ ಸೃಷ್ಟಿಸಿದರು. ಅಲ್ಲದೆ, ಕ್ಷೇತ್ರದಲ್ಲಿನ ಗ್ರಾಮಗಳ ದೇವ ದೇವತೆಗಳ ಅದ್ಧೂರಿ ಮೆರವಣಿಗೆ ನಡೆಸಿ ಭಕ್ತಿ ಪ್ರದರ್ಶಿಸಿದರು. ಇಷ್ಟೆಲ್ಲ ಮಾಡಿದ ಶಾಸಕ ಇಕ್ಬಾಲ್ ಹುಸೇನ್ ಹಿಂದೂ ವಿರೋಧಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಎನ್.ರಮೇಶ್, ಮುಖಂಡರಾದ ಕುಮಾರ್, ಕುರುಬಳ್ಳಿ ದೊಡ್ಡಿ ಪ್ರಕಾಶ್, ಕೆ.ಜಿ.ಹೊಸಳ್ಳಿ ಅರುಣ್, ಕೋಟಳ್ಳಿ ಲಿಂಗರಾಜು, ದೇವರದೊಡ್ಡಿ ಚಂದ್ರನಾಯ್ಕ, ಸಂದೀಪ್, ಚೇತನ್, ಲೋಕೇಶ್, ಕಿರಣ್, ನೆಲಮನೆ ಸಿದ್ದರಾಜು ಇದ್ದರು.

ಕೋಟ್ .................

ಶ್ರೀರೇವಣಸಿದ್ದೇಶ್ವರ ರಥೋತ್ಸವ ವೇಳೆ ಆಕಸ್ಮಿಕ ಘಟನೆಗಳು ಸಂಭವಿಸುತ್ತಲೇ ಬಂದಿವೆ. ಅದಕ್ಕೆ ಶಾಸಕರನ್ನು ಹೊಣೆಗಾರರನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ. ರಥೋತ್ಸವ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಿವರುದ್ರ ಕೋಟಹಳ್ಳಿ ಅವರನ್ನು ಶಾಸಕರು ಭೇಟಿಯಾಗಿ ಸಾಂತ್ವನ ಹೇಳಿ ಧನ ಸಹಾಯ ಮಾಡಿದ್ದಾರೆ. ಅಲ್ಲದೆ, ಸಿಎಂ ಪರಿಹಾರ ನಿಧಿಯಿಂದಲೂ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಜೆಡಿಎಸ್ ಮುಖಂಡರಿಗೆ ನೈತಿಕತೆ ಇದ್ದರೆ ಚಿಕಿತ್ಸಾ ವೆಚ್ಚದಲ್ಲಿ ಸಂಸದರಿಂದ ರಿಯಾಯಿತಿ ಕೊಡಿಸಲಿ.

- ಮಹದೇವಯ್ಯ, ಸದಸ್ಯರು, ಹುಲಿಕೆರೆ ಗುನ್ನೂರು ಗ್ರಾಪಂ

7ಕೆಆರ್ ಎಂಎನ್ 1.ಜೆಪಿಜಿ

ಹುಲಿಕೆರೆ - ಗುನ್ನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿದರು.