ಜೆಡಿಎಸ್‌ ಈಗ ಬಿಜೆಪಿ ಬಿ ಟೀಂ ಅಲ್ಲ ಒರಿಜಿನಲ್‌ ಟೀಂ: ಮಧು ಬಂಗಾರಪ್ಪ

| Published : Mar 22 2024, 01:00 AM IST

ಸಾರಾಂಶ

ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್‌ನ ಜಂಟಿ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ವಿರೋದ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಕುಂದಾಪುರ

ನಾನು ಹಿಂದೆ ಜೆಡಿಎಸ್‌ನಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದೆ. ಆಗ ಜೆಡಿಎಸ್ ಪಕ್ಷವನ್ನು ಬಿ ಟೀಂ ಎಂದು ಕರೆಯುತ್ತಿದ್ದರು. ಆದರೆ ಈಗ ಜೆಡಿಎಸ್ ಒರಿಜಿನಲ್ ಬಿಜೆಪಿ ಟೀಂ ಆಗಿದೆ. ಜಾತ್ಯತೀತ ಸಿದ್ಧಾಂತದ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಆದರೆ ಕಾಂಗ್ರೆಸ್ ಪಕ್ಷದಿಂದ ನನಗೆ ಒಳ್ಳೆಯ ಸ್ಥಾನಮಾನ ಸಿಕ್ಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಗುರುವಾರ ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್‌ನ ಜಂಟಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ತಂದೆ ಬಂಗಾರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ತಂದಿದ್ದು, ಈಗಲೂ ಜನರು ಅವರು ನೀಡಿರುವ ಕಾರ್ಯಕ್ರಮಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಅವರ ಮಗಳಾಗಿ ಅವರಂತೆಯೇ ನಾನು ಕೆಲಸ ಮಾಡುತ್ತೇನೆ. ಕಳೆದ ಬಾರಿ ಜೆಡಿಎಸ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನಗೆ ಹೆಚ್ಚು ದಿನಗಳು ಸಿಗಲಿಲ್ಲ. ಆದರೆ ಈಗ ನಿಮ್ಮೆಲ್ಲರೊಂದಿಗೆ ಬೆರೆಯಲು ಸಮಯ ಸಿಕ್ಕಿದೆ. ನಿಮ್ಮೆಲ್ಲರ ಪ್ರತಿನಿಧಿಯಾಗಿ ನಿಮ್ಮ ಕಷ್ಟಗಳಿಗೆ ಹೆಗಲು ಕೊಡುವೆ ಎಂದರು.ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಮಾತನಾಡಿ, ಹಿಂದೆ ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್ ಮುಖಂಡರನ್ನು ಹೇಗೆ ಬಿಜೆಪಿಗೆ ಕರೆತಂದಿದ್ದೇನೋ ಹಾಗೆಯೇ ಈಗ ಬಿಜೆಪಿಯನ್ನು ಖಾಲಿ ಮಾಡಿ ಕಾಂಗ್ರೆಸ್‌ಗೆ ತರುತ್ತೇನೆ. ಹಿಂದೆ ಯಡಿಯೂರಪ್ಪನವರು ಲೋಕಸಭೆಗೆ ನಿಂತಾಗ ನಾನೇ ಕೊಲ್ಲೂರಿಗೆ ಕರೆಸಿ ಪೂಜೆ ಮಾಡಿ ಕಳುಹಿಸಿದ್ದೆ. ಈಗ ಗೀತಾ ಶಿವರಾಜ್ ಕುಮಾರ್ ಅವರನ್ನು ಕೊಲ್ಲೂರಿಗೆ ಕರೆಸಿ ದರ್ಶನ ಮಾಡಿಸಿದ್ದೇನೆ. ಖಂಡಿತವಾಗಿಯೂ ಗೀತಕ್ಕ ಅವರಿಗೆ ಮೂಕಾಂಬಿಕೆ ಅನುಗ್ರಹಿಸುತ್ತಾಳೆ ಎಂದರು.ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಶಾಸಕ ಬೇಳೂರು ಗೋಪಾಲ ಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿದರು.ಮಾಜಿ ಸಚಿವ ಅಭಯಚಂದ್ರ ಜೈನ್, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಪರಿಷತ್ ಸದಸ್ಯ ಹರೀಶ್ ಕುಮಾರ್, ಕೆಪಿಸಿಸಿಯ ಜಿ.ಎ. ಬಾವಾ, ಎಂ.ಎ. ಗಫೂರ್, ಪ್ರಕಾಶ್ಚಂದ್ರ ಶೆಟ್ಟಿ, ವಕ್ತಾರ ಅನಿಲ್, ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಎಸ್. ರಾಜು ಪೂಜಾರಿ, ಬಾಬು ಹೆಗ್ಡೆ, ಸಂಪಿಗೇಡಿ ಸಂಜೀವ ಶೆಟ್ಟಿ, ಶಂಕರ ಪೂಜಾರಿ, ಮಂಜುಳಾ ದೇವಾಡಿಗ, ಹರೀಶ ತೋಳಾರ್ ಮತ್ತಿತರ ಪ್ರಮುಖ ನಾಯಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು ಸ್ವಾಗತಿಸಿದರು. ಬೈಂದೂರು ಬ್ಲಾಕ್‌ ಅಧ್ಯಕ್ಷ ಅರವಿಂದ ಪೂಜಾರಿ ವಂದಿಸಿದರು. ಉದಯ ಕುಮಾರ್ ಶೆಟ್ಟಿ ವಂಡ್ಸೆ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ನಿರೂಪಿಸಿದರು.

* ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆ:ಹಿಂದೂ ಸಂಘಟನೆಯ ಕಾರ್ಯಕರ್ತ ವೇದನಾಥ್‌ ಶೆಟ್ಟಿ ಹಾಗೂ ಬಿಜೆಪಿಯ ತಾ.ಪಂ. ಮಾಜಿ ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಪ್ರಮುಖರು, ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಬಾಕ್ಸ್ ಐಟಂ:ಕೋಟ ಹೇಳುವುದೆಲ್ಲಾ ಹಸಿ ಸುಳ್ಳು: ಗೋಪಾಲ ಪೂಜಾರಿ ಗುಡುಗುಕೋಟ ಶ್ರೀನಿವಾಸ ಪೂಜಾರಿ ಹೇಳುವುದೆಲ್ಲ ಹಸಿ ಸುಳ್ಳು. ಕೊಚ್ಚಕ್ಕಿ ಕೊಡುತ್ತೇನೆಂದು ಡಂಗೂರ ಹೊಡೆಸಿ ತಿರುಗಾಡಿದ್ದು ಬಿಟ್ಟರೆ ಇಂದಿಗೂ ಕೊಚ್ಚಕ್ಕಿ ಕೊಡಲು ಸಾಧ್ಯವಾಗಿಲ್ಲ. ಅಧಿಕಾರ ಇದ್ದಾಗ ಬಿಲ್ಲವರ ನೆನಪಾಗಲಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೊಟ್ಟಿಲ್ಲ. ಪಾರ್ಲಿಮೆಂಟಿಗೆ ಹೋಗಿ ಜಿಲ್ಲೆಯ ಜನರ ಕೆಲಸ ಮಾಡಬೇಕಿದ್ದರೆ ಭಾಷೆಯ ಮೇಲೆ ಹಿಡಿತವಿರಬೇಕು. ಆದರೆ ಇವರಿಗೆ ಏನಿದೆ? ಸುನಿಲ್ ಕುಮಾರ್, ರಘುಪತಿ ಭಟ್ ಮುಂತಾದವರಿಗೆ ಚಾಡಿ ಹೇಳಿ ಅವರ ಮಧ್ಯೆಯೇ ಹಿಡಿಸಿ ಕೊಟ್ಟು ಆರೆಸ್ಸೆಸ್ ಮುಂದೆ ಹೋಗಿ ಶಹಬ್ಬಾಸ್ ಗಿರಿ ಪಡೆದು ಸುಳ್ಳಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ವಿರುದ್ದ ಗುಡುಗಿದರು.