ಜೆಡಿಎಸ್ ನಾಡಿನ ನೆಲ, ಜಲ, ಭಾಷೆ ಸೇರಿದಂತೆ ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದೆ: ಸಾ.ರಾ. ಮಹೇಶ್

| Published : Nov 22 2025, 01:15 AM IST

ಜೆಡಿಎಸ್ ನಾಡಿನ ನೆಲ, ಜಲ, ಭಾಷೆ ಸೇರಿದಂತೆ ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದೆ: ಸಾ.ರಾ. ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರಿಗೂ ದೇಶವೇ ಮುಖ್ಯವಾಗಿದ್ದು, ಅದರ ಉಳಿವಿಗಾಗಿ ಎಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕೆಂದ ಮಾಜಿ ಸಚಿವರು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನಾಡಿನ ಹಿತಕ್ಕಾಗಿಯೇ ಹೊರತು ಅಧಿಕಾರ ದಾಹದಿಂದಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಕಳೆದ 25 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಜೆಡಿಎಸ್ ನಾಡಿನ ನೆಲ, ಜಲ, ಭಾಷೆ ಸೇರಿದಂತೆ ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಜೆಡಿಎಸ್ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಆರಂಭದಿಂದ ಈವರೆಗೆ ಪಕ್ಷವನ್ನು ಮುನ್ನಡೆಸಿ ನಮಗೆಲ್ಲಾ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.

ಪಸ್ತುತ ದಿನ ಮಾನಗಳಲ್ಲಿ ದೇಶದ ಏಳಿಗೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ನಾಯಕತ್ವ ಮತ್ತು ಎಚ್.ಡಿ. ದೇವೇಗೌಡರ ಮಾರ್ಗದರ್ಶನ ಅವಶ್ಯಕವಾಗಿದ್ದು, ನಾವೆಲ್ಲರೂ ಅವರ ದಾರಿಯಲ್ಲಿ ನಡೆಯಬೇಕು ಎಂದು ತಿಳಿಸಿದರು.

ಬಿವೈವಿ, ನಿಖಿಲ್‌ ಆದರ್ಶ ರಾಜಕಾರಣಿಗಳಾಗುವರು:

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲವೆಂದು ಭರವಸೆ ವ್ಯಕ್ತಪಡಿಸಿದ ಅವರು, ರಾಜ್ಯದ ಯುವನಾಯಕರಾದ ಬಿ.ವೈ. ವಿಜಯೇಂದ್ರ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರು ಎಲ್ಲರಿಗೂ ಆದರ್ಶ ರಾಜಕಾರಣಿಗಳಾಗಲಿದ್ದಾರೆ ಎಂದು ಹೇಳಿದರು.

ನಾಡಿನ ಹಿತಕ್ಕಾಗಿಯೇ ಮೈತ್ರಿ:

ಪ್ರತಿಯೊಬ್ಬರಿಗೂ ದೇಶವೇ ಮುಖ್ಯವಾಗಿದ್ದು, ಅದರ ಉಳಿವಿಗಾಗಿ ಎಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಬೇಕೆಂದ ಮಾಜಿ ಸಚಿವರು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ನಾಡಿನ ಹಿತಕ್ಕಾಗಿಯೇ ಹೊರತು ಅಧಿಕಾರ ದಾಹದಿಂದಲ್ಲ ಎಂದ ಸ್ಪಷ್ಟಪಡಿಸಿದರು.

ನಾವು ಬೆನ್ನೆಲುಬಾಗಿ ನಿಲ್ಲಬೇಕು:

ಪ್ರಧಾನಮಂತ್ರಿ ನರೇಂದ್ರ್ರಮೋದಿ ಅವರು ಪ್ರತೀ ಕ್ಷಣವೂ ದೇಶದ ಜನತೆಯ ಹಿತಕ್ಕಾಗಿ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ. ದೇವೇಗೌಡರು ಮತ್ತು ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಕೈಜೋಡಿಸಿದ್ದು, ನಾವು ಇವರಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಕೋರಿಕೊಂಡರು.

ರಾಜಕಾರಣದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಕಳೆದ ಮೂರು ಅವಧಿಗೆ ಕ್ಷೇತ್ರದ ಜನರು ನನ್ನನ್ನು ಶಾಶಕನನ್ನಾಗಿ ಆಯ್ಕೆ ಮಾಡಿ ಜನಸೇವೆಗೆ ಅವಕಾಶ ಮಾಡಿಕೊಟ್ಟಿದ್ದು, ಅವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲವೆಂದು ಭಾವುಕರಾದರು.

ಜೆಡಿಎಸ್ ಪಕ್ಷಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆ ಪಕ್ಷದ ಕಚೇರಿಯಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡುವುದರ ಜತೆಗೆ ಪಕ್ಷದ ನಾಯಕರ ಪರವಾಗಿ ಜಯಕಾರದ ಘೋಷಣೆಗಳನ್ನು ಮೊಳಗಿಸಲಾಯಿತು.

ಆನಂತರ ಸಾ.ರಾ. ಮಹೇಶ್ ಮತ್ತು ಪಕ್ಷದ ಮುಖಂಡರು ಕಚೇರಿಯಿಂದ ಹೊರಟು ಹಾಸನ-ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಬಾಬುಜಗಜೀವನರಾಮ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಅಧ್ಯಕ್ಷ ಎಚ್.ಸಿ.ಕುಮಾರ್, ಯುವ ಜೆಡಿಎಸ್ ಅಧ್ಯಕ್ಷ ಡಿ.ಎಸ್. ಯೋಗೇಶ್, ತಾಲೂಕು ವಕ್ತಾರ ಕೆ.ಎಲ್. ರಮೇಶ್, ಜಿಲ್ಲಾ ಉಪಾಧ್ಯಕ್ಷ ಕೆ.ಜೆ.ಕುಚೇಲ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಅರ್ಜುನಹಳ್ಳಿಗಣೇಶ್, ಪುರಸಭೆ ಸದಸ್ಯರಾದ ಉಮೇಶ್, ಸಂತೋಷ್‌ಗೌಡ, ಸರೋಜಮಹದೇವ್, ಕೆ.ಎಲ್.ಜಗದೀಶ್, ಮಂಜುಳಚಿಕ್ಕವೀರು, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಎಂ.ಡಿ. ದ್ರಾಕ್ಷಾಯಿಣಿ, ತಾಲೂಕು ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ಜೆಡಿಎಸ್ ಮುಖಂಡರಾದ ಬಾಲಾಜಿ ಗಣೇಶ್, ಶಂಕರ್, ಗಣೇಶ್‌ ನಾಯಕ, ಶಂಭು, ಮೂಲೆಪೆಟ್ಲುಸಿದ್ದಪ್ಪ, ಎಚ್.ಪಿ. ಶಿವಣ್ಣ, ಮರೀಗೌಡ, ಸಾ.ರಾ. ಸ್ನೇಹ ಬಳಗದ ಕಾರ್ಯದರ್ಶಿ ಸಿ.ಜೆ. ಆನಂದ್ ಇದ್ದರು.