ಸಾರಾಂಶ
ಬಸವನ ಬಾಗೇವಾಡಿ : ನೀರಾವರಿ ಯೋಜನೆ ಜಾರಿಯಾಗಬೇಕೆಂಬ ಸದುದ್ದೇಶದೊಂದಿಗೆ ಪಕ್ಷದ ವರಿಷ್ಠರು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ವಿನಃ ವಿಲೀನಗೊಳಿಸಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ ಅವರನ್ನು ಬಹುಮತದಿಂದ ಆಯ್ಕೆ ಮಾಡಲು ಪಕ್ಷದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕರೆ ನೀಡಿದರು.
ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ಮಾದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದೇವರಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾನು ಪಕ್ಷದ ಸಿದ್ಧಾಂತದೊಂದಿಗೆ ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಈ ವಿಷಯ ತಿಳಿಸುವ ಉದ್ದೇಶದಿಂದ ಈ ಪೂರ್ವಭಾವಿ ಸಭೆ ಕರೆಯಲಾಗಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಜಂಟಿಯಾಗಿ ಸಭೆ ಆಯೋಜನೆ ಮಾಡಲಿದೆ ಎಂದು ಹೇಳಿದರು.
ಮಾಜಿ ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಎಲ್ಲರನ್ನು ಸಮಾಧಾನ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಶಾಸಕರ ಹೆಸರು ಕೆಡಿಸಲು ವಿರೋಧ ಪಕ್ಷದವರು ಏನೇ ಹೇಳಿದರೂ ಅದನ್ನು ಲೆಕ್ಕಿಸದೆ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದರು. ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ ಎಲಿಗಾರ ಮಾತನಾಡಿದರು.ಮಡುಸಾವುಕಾರ ಬಿರಾದಾರ, ಬಸನಗೌಡ ಬಿರಾದಾರ, ಬಾಬು ನದಾಫ, ಎ.ಡಿ.ಮುಲ್ಲಾ ಮಾತನಾಡಿದರು. ವೇದಿಕೆಯಲ್ಲಿ ಸಚಿನಗೌಡ ಪಾಟೀಲ, ವಿಶ್ವನಾಥ ನಾಡಗೌಡ, ಗುರುನಗೌಡ ಪಾಟೀಲ,ಅನಿಲ ಪಾಟೀಲ, ಪಾವೆಡಪ್ಪ ಹವಾಲ್ದಾರ, ಕೇಶು ರಾಠೋಡ, ಸಂಗಮೇಶ ಹಳ್ಳೂರ, ಕಾಶೀಂ ನಾಯ್ಕೋಡಿ ಇತರರು ಇದ್ದರು. ಸಾಯಬಣ್ಣ ಬಾಗೇವಾಡಿ ಪ್ರಾಸ್ತವಿಕವಾಗಿ ಮಾತನಾಡಿದರು. ಬಸವರಾಜ ಬಾಗೇವಾಡಿ ನಿರೂಪಿಸಿ, ವಂದಿಸಿದರು.
ಟಿಕೆಟ್ ಕೊಡದಿದ್ದಕ್ಕೆ ಜಿಲ್ಲಾಧ್ಯಕ್ಷರ ಬೇಸರ
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸುನೀತಾ ಚವ್ಹಾಣ ಅವರಿಗೆ ಟಿಕೆಟ್ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಕೊನೆ ಗಳಿಗೆಯಲ್ಲಿ ಇದು ಕೈ ತಪ್ಪಿದೆ. ಈ ಕುರಿತು ಎಲ್ಲರಿಗೂ ನೋವಿದೆ. ಪಕ್ಷದ ಸಿದ್ಧಾಂತಕ್ಕೆ ಎಲ್ಲರೂ ತಲೆಬಾಗಲೇಬೇಕು. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸುನೀತಾ ಚವ್ಹಾಣ ಸ್ಪರ್ಧೆ ಮಾಡಿದ್ದರು. ಆಗ, ಕಾಂಗ್ರೆಸ್ ಕುತಂತ್ರದಿಂದ ಪರಾಭವಗೊಂಡರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.