ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳ ಪ್ರಯಾಣ ದರ ಹೆಚ್ಚಳ ವಿರೋಧಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ಬುಧವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಜೆಡಿಎಸ್ ಜಿಲ್ಲಾ ಕಾರ್ಯಾಲಯದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಸಿ ಆಕ್ರೋಶ ಹೊರ ಹಾಕಿದರು. ಅವೈಜ್ಞಾನಿಕವಾಗಿ ಶೇ.15ರಷ್ಟು ಬಸ್ ಪ್ರಯಾಣದರ ಹೆಚ್ಚಳ ವಾಪಾಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನಸಾಮಾನ್ಯರ ಮೇಲೆ ದರ ಹೆಚ್ಚಳದ ಹೊರೆ ಹೊರಿಸಿದೆ. ಸುಭದ್ರವಾಗಿದ್ದ ಕರ್ನಾಟಕದ ಆರ್ಥಿಕತೆಯನ್ನು ಹದಗೆಡೆಸಿರುವ ಸರ್ಕಾರ, ಸಾರಿಗೆ ಪ್ರಯಾಣ ದರವನ್ನು ಶೇ.15 ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಅನಗತ್ಯವಾಗಿ ಬೆಲೆ ಏರಿಕೆಯ ಬರೆ ಹಾಕುತ್ತಿದೆ ಎಂದು ದೂರಿದರು.ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆ ದಿವಾಳಿಯಾಗಿದ್ದು, ಈಗಾಗಲೇ ರಾಜ್ಯ ಸಾರಿಗೆ ಸಂಸ್ಥೆಗೆ 2,000 ಕೋಟಿ ಸಾಲ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ, ಅದರ ನಷ್ಟವನ್ನು ಸರಿದೂಗಿಸಲು ದರ ಹೆಚ್ಚಿಸಿ ಪುರುಷ ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತಿದೆ. ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದು ಕೊಳ್ಳುತ್ತಿದೆ ಎಂದು ಆಪಾದಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದು ಸರ್ಕಾರಿ ನೌಕರರಿಗೆ ವೇತನ ಒದಗಿಸಲು ಸರ್ಕಾರ ಪೇಚಾಡುತ್ತಿದೆ. ಯಾವುದೇ ಹೊಸ ಯೋಜನೆಗಳ ಘೋಷಣೆಯಾಗಿಲ್ಲ. ಗ್ಯಾರಂಟಿಗಳ ನಿರ್ವಹಣೆಯಲ್ಲಿ ಕಾಲ ನೂಕಲಾಗುತ್ತಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ನಲ್ಲಿ ಅಧಿಕಾರದ ಬೇಗುದಿ ಶುರುವಾಗಿದೆ ಒಗಳಗಳು ನಿತ್ಯವೂ ಪ್ರತಿಧ್ವನಿಸುತ್ತಿವೆ. ಅಭಿವೃದ್ದಿ ದೂರ ಸರಿದಿದೆ ಎಂದರು.ರಾಜ್ಯ ಸರ್ಕಾರದ ಈ ತೀರ್ಮಾನ ಜನ ಮತ್ತು ಬಡವರ ವಿರೋಧಿ ಕ್ರಮವಾಗಿದೆ. ಬಸ್ ದರ ಏರಿಕೆಯನ್ನು ಜನತಾದಳ ಪಕ್ಷವು ಖಂಡಿಸುತ್ತದೆ. ಈ ಕೂಡಲೇ ರಾಜ್ಯ ಸರ್ಕಾರ ಅವೈಜ್ಞಾನಿಕ ಬಸ್ ಪ್ರಯಾಣ ದರ ಏರಿಕೆಯನು ವಾಪಾಸ್ ಪಡೆಯಬೇಕು. ಶ್ರೀಸಾಮಾನ್ಯ ಮೇಲಿನ ಹೊರೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ನಗರಸಭೆ ಸದಸ್ಯ ನಸರುಲ್ಲಾ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಸಣ್ಣ ತಿಮ್ಮಣ್ಣ, ಹೂಸದುರ್ಗ ಅಧ್ಯಕ್ಷ ಗಣೇಶ್‍ಮೂರ್ತಿ, ಹಿರಿಯೂರು ಅಧ್ಯಕ್ಷ ಹನುಮಂತರಾಯಪ್ಪ, ಮೊಳಕಾಲ್ಮೂರು ಅಧ್ಯಕ್ಷ ಕರಿಬಸಪ್ಪ, ವೀರಭದ್ರಪ್ಪ, ಲಿಂಗರಾಜು ಮಠದಹಟ್ಟಿ ವೀರಣ್ಣ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಗೀತಮ್ಮ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಬು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.