ಸ್ಥಳಕ್ಕೆ ಆಗಮಿಸಿದ ಸಹಕಾರ ನಿಬಂಧಕಿ ಶೀಲಾ ಅವರು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಹೈಕೋರ್ಟ್ ತೀರ್ಪಿನ ಸಂಬಂಧ ಸರ್ಕಾರಿ ವಕೀಲರೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ವಹಿಸುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಸ್ಥಳದಿಂದ ನಿರ್ಗಮಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬನ್ನಹಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಫಲಿತಾಂಶವನ್ನು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಪ್ರಕಟಿಸಿರುವುದನ್ನು ವಿರೋಧಿಸಿ ಜೆಡಿಎಸ್ ಮುಖಂಡರು- ಕಾರ್ಯಕರ್ತರು ಇಲ್ಲಿನ ಸುಭಾಷ್‌ನಗರದ ಸಹಕಾರ ಉಪ ನಿಬಂಧಕರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ನಿರ್ದೇಶಕ ಎಂ.ಎಸ್.ರಘುನಂದನ್ ನೇತೃತ್ವದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಸಹಾಯಕ ನಿಬಂಧಕರ ಕಚೇರಿ ಸೂಪರಿಂಟೆಂಡೆಂಟ್ ಮುತ್ತುರಾಜು ಎಂಬುವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಂ.ಎಸ್.ರಘುನಂದನ್ ಮಾತನಾಡಿ, ಬನ್ನಹಟ್ಟಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ೨೩ ಮೇ ೨೦೨೫ರಲ್ಲಿ ನಡೆದಿತ್ತು. ಈ ಸಂಬಂಧ ಕೆಲವು ಅನರ್ಹ ಮತದಾರರು ಹೈಕೋರ್ಟ್‌ನಿಂದ ಮಧ್ಯಂತರ ಆದೇಶ ತಂದು ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಹೈಕೋರ್ಟ್ ಚುನಾವಣೆ ಸಂಬಂಧ ಅಂತಿಮ ಆದೇಶವೇ ಅಂತಿಮ ಎಂದು ಹೇಳಿತ್ತು. ೨೯ ಅಕ್ಟೋಬರ್ ೨೦೨೫ರಂದು ಹೈಕೋರ್ಟ್ ಅಂತಿಮ ಆದೇಶ ಹೊರಡಿಸಿ ೧೨ ಮಂದಿ ಸದಸ್ಯರನ್ನು ಅನರ್ಹಗೊಳಿಸಿತ್ತು. ಇದರ ನಡುವೆ ನ.೨೮ರಂದು ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಘೋಷಿಸಿದಾಗ ಹೈಕೋರ್ಟ್ ಚುನಾವಣೆಯನ್ನು ಮಾತ್ರ ನಡೆಸಿ ಫಲಿತಾಂಶ ಪ್ರಕಟಿಸದಂತೆ ಅಂತಿಮ ಆದೇಶದಲ್ಲಿ ತಿಳಿಸಿತ್ತು ಎಂದು ಹೇಳಿದರು.ನ್ಯಾಯಾಲಯದ ಆದೇಶ ಪ್ರತಿಯಲ್ಲಿ ಮುದ್ರಣ ದೋಷವಾಗಿದ್ದರಿಂದ ಅದನ್ನು ಸರಿಪಡಿಸಿಕೊಡಲು ಅರ್ಜಿ ಹಾಕಲಾಗಿತ್ತು. ಈ ವಿಷಯವನ್ನು ದೂರವಾಣಿ ಮೂಲಕ ಸೂಪರಿಂಟೆಂಡೆಂಟ್ ಮುತ್ತುರಾಜು ಅವರಿಗೆ ತಿಳಿಸಲಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷದವರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ಮುತ್ತುರಾಜು ಕಾಂಗ್ರೆಸ್ ಏಜೆಂಟರಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವಷ್ಟರ ಮಟ್ಟಿಗೆ ಅಧಿಕಾರಿಗಳು ಭಂಡತನ ಪ್ರದರ್ಶಿಸಿದ್ದಾರೆ. ನ್ಯಾಯಾಲಯದಲ್ಲಿ ಇದೀಗ ೧೨ ಮಂದಿ ಮತದಾರರನ್ನು ಅನರ್ಹರೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಹೊಸದಾಗಿ ಮತ ಎಣಿಕೆ ಮಾಡುವಂತೆ ಆಗ್ರಹಿಸಿ ಕಚೇರಿ ಎದುರು ಮುತ್ತುರಾಜು ವಿರುದ್ಧ ಘೋಷಣೆ ಕೂಗಿದರು.ಇದೇ ವೇಳೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿಯ ಕೊನ್ನಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಸಂಬಂಧ ಇದೇ ಮಾದರಿಯ ಪ್ರಕರಣ ಹೈಕೋರ್ಟ್‌ನಲ್ಲಿ ದಾಖಲಿಸಲಾಗಿತ್ತು. ಸರ್ಕಾರದ ವಕೀಲರ ಮೂಲಕ ಚುನಾವಣಾಧಿಕಾರಿಗೆ ನಿರ್ದೇಶನ ನೀಡಿ ಚುನಾವಣೆ ನಡೆಯದಂತೆ ತಡೆಹಿಡಿಯಲಾಗಿತ್ತು ಎಂದು ಹೇಳಿದರು.
ಸಹಕಾರ ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಇವರು ಮಾಡುವ ತಪ್ಪುಗಳನ್ನೆಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಸರಿಪಡಿಸಲಾಗುವುದಿಲ್ಲ. ಅಷ್ಟೊಂದು ಆರ್ಥಿಕ ಶಕ್ತಿ ಸದಸ್ಯರಲ್ಲಿ ಇಲ್ಲ. ಇದೇ ಕಾರಣಕ್ಕೆ ಅಧಿಕಾರಿಗಳು ಹಣದ ಆಮಿಷಕ್ಕೆ ಬಲಿಯಾಗಿ ಕಾನೂನುಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಟೀಕಿಸಿದರು.ಸ್ಥಳಕ್ಕೆ ಆಗಮಿಸಿದ ಸಹಕಾರ ನಿಬಂಧಕಿ ಶೀಲಾ ಅವರು ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದರು. ಹೈಕೋರ್ಟ್ ತೀರ್ಪಿನ ಸಂಬಂಧ ಸರ್ಕಾರಿ ವಕೀಲರೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ವಹಿಸುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಸ್ಥಳದಿಂದ ನಿರ್ಗಮಿಸಿದರು.
ಪ್ರತಿಭಟನೆಯಲ್ಲಿ ಬೂದನೂರು ಸ್ವಾಮಿ, ಮಹೇಶ್, ಸುರೇಶ್, ಬಸವೇಗೌಡ, ವೆಂಕಟೇಶ್, ರಘು, ರಾಜು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.