ಸಾರಾಂಶ
ಹಾವೇರಿ: ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಕಾರಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಸಾಗಿದರು. ಈ ವೇಳೆ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಎಸ್. ಗೌಡಶಿವಣ್ಣನವರ ಮಾತನಾಡಿ, ಅವೈಜ್ಞಾನಿವಾಗಿ ಶೇ.15ರಷ್ಟು ಬಸ್ ದರ ಏರಿಕೆ ಮಾಡಿರುವುದು ಖಂಡನೀಯ. ಗ್ಯಾರಂಟಿ ಯೋಜನೆಗಳಿಗಾಗಿ ಹಣಕಾಸು ಹೊಂದಿಸಲಾಗದೇ ಹೀಗೆ ಜನಸಾಮಾನ್ಯರ ಮೇಲೆ ದರ ಹೆಚ್ಚಳದ ಹೊರೆ ಹಾಕುವುದು ಸರಿಯಲ್ಲ. ಸುಭದ್ರವಾಗಿದ್ದ ರಾಜ್ಯದ ಆರ್ಥಿಕತೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹದಗೆಡಿಸಿದೆ. ಇದನ್ನು ಸರಿಪಡಿಸಲು ಜನರ ಮೇಲೆ ಬರೆ ಎಳೆಯುವ ಕೆಲಸಕ್ಕೆ ಕೈಹಾಕಿದೆ ಎಂದು ಆರೋಪಿಸಿದರು. ಗ್ಯಾರಂಟಿ ಯೋಜನೆಗಳಿಂದಾಗಿ ಸಾರಿಗೆ ಸಂಸ್ಥೆ ದಿವಾಳಿಯಾಗಿದೆ. ರಾಜ್ಯ ಸಾರಿಗೆ ಸಂಸ್ಥೆಗೆ 2 ಸಾವಿರ ಕೋಟಿ ರು. ಸಾಲ ಪಡೆಯಲು ಸಚಿವ ಸಂಪುಟದ ಅನುಮೋದನೆ ಪಡೆದಿದೆ. ಮಹಿಳೆಯರಿಗೆ ಉಚಿತವಾಗಿ ನೀಡಿ, ಪುರುಷರಿಂದ ಆ ಹಣ ವಸೂಲಿ ಮಾಡುವ ಮೂಲಕ ಸರ್ಕಾರ ಏನು ಸಾಧಿಸಲು ಹೊರಟಿದೆ. ಇಂತಹ ಜನವಿರೋಧಿ ನೀತಿ ಕೈಬಿಟ್ಟು, ಕೂಡಲೇ ಬಸ್ ದರ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಕಚೇರಿ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು. ರಾಜ್ಯ ವಕ್ತಾರ ಮಹೇಶಗೌಡ, ಜಿಲ್ಲಾ ಉಪಾಧ್ಯಕ್ಷ ಮೂಕಪ್ಪ ಪಡಿಯಪ್ಪನವರ, ತಾಲೂಕು ಅಧ್ಯಕ್ಷ ರವೀಂದರ, ರಾಣಿಬೆನ್ನೂರ ತಾಲೂಕು ಅಧ್ಯಕ್ಷ ಚಂದ್ರಗೌಡ ಭರಮಗೌಡರ, ಹಾನಗಲ್ಲ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ, ಶಿಗ್ಗಾಂವಿ ವೀರಣ್ಣ ನವಲಗುಂದ, ಸವಣೂರ ಮೋಮಿನಸಾಬ ಹಣಗಿ, ಎಸ್.ಎಲ್. ಕಾಡದೇವರಮಠ, ಮೌನೇಶ ಬಡಿಗೇರ, ವಿಠ್ಠಲ ಸುಣಗಾರ, ರಮೇಶ ಮಾಕನೂರ, ಶಂಕರಗೌಡ ಹಾವೇರಿ ಮತ್ತಿತರರು ಪಾಲ್ಗೊಂಡಿದ್ದರು.