ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುವಶಕ್ತಿಯ ಪಾತ್ರ ಬಹಳ ಮುಖ್ಯವಾಗಿದೆ. ಇಂದಿನಿಂದಲೇ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಎಲ್ಲರೂ ತೊಡಗಬೇಕು.
ಶಿರಹಟ್ಟಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಪರಾಭವಗೊಳ್ಳಲು ಕಾರಣವೇನು ಎಂಬುದನ್ನು ಮನಗಂಡು ಕಾರ್ಯಕರ್ತರು ಪಕ್ಷ ಸಂಘಟನೆಗೆ ದುಡಿಯಬೇಕು. ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದನ್ನು ಪರಿಗಣಿಸಿ ನಿಷ್ಠಾವಂತರಿಗೆ ಟಿಕೆಟ್ ನೀಡಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವೈ. ಮುಧೋಳ ತಿಳಿಸಿದರು.ಗುರುವಾರ ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯುವಶಕ್ತಿಯ ಪಾತ್ರ ಬಹಳ ಮುಖ್ಯವಾಗಿದೆ. ಇಂದಿನಿಂದಲೇ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಎಲ್ಲರೂ ತೊಡಗಬೇಕು. ರಾಜ್ಯದಲ್ಲಿ ಈ ಹಿಂದೆ ಕುಮಾರಸ್ವಾಮಿಯವರು ಸಿಎಂ ಅಗಿದ್ದ ಅವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿ ಜನಪ್ರಿಯತೆ ಗಳಿಸಿದ್ದಾರೆ. ಅವರ ಅಧಿಯಲ್ಲಿಯ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.ತಾಲೂಕಿನ ಸುಗ್ನಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯ ಮಾಡಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಈ ಕ್ಷೇತ್ರದಲ್ಲಿ ಮಾಡಿದ್ದಾರೆ. ಅನೇಕ ರೈತರ ಸಾಲಮನ್ನಾ ಕೂಡ ಈ ಭಾಗದಲ್ಲಿ ಆಗಿವೆ. ಮುಂದಿನ ದಿನಗಳಲ್ಲಿ ಈ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪಕ್ಷವನ್ನು ಸಂಘಟನೆ ಮಾಡಲು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಮುಂದಾಗಬೆಕು ಎಂದರು.ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಪಕ್ಷದ ಅಧ್ಯಕ್ಷ ಶಂಕ್ರಣ್ಣ ಬಾಳಿಕಾಯಿ ಮಾತನಾಡಿ, ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ ಪಕ್ಷ ಹಿಂದಿನಿಂದಲೂ ಬಲಿಷ್ಠವಾಗಿದೆ. ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಯಾವ ರೀತಿ ಬೆಂಬಲ ನೀಡಿದ್ದಿರೋ ಅದೇ ರೀತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬೆಂಬಲ ನೀಡಿ. ವಿರೋಧಿಗಳ ಮಾತಿಗೆ ಕಿವಿಗೊಡಬೇಡಿ. ಪಕ್ಷದ ಬಲವರ್ಧನೆ, ಸಂಘಟನೆಗೆ ಎಲ್ಲರೂ ಮುಂದಾಗೋಣ ಎಂದರು.
ಮೈತ್ರಿಯಿಲ್ಲ: ಜೆಡಿಎಸ್ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಸಿಲುಕಿಕೊಳ್ಳಬಾರದು. ಸ್ಥಳೀಯ ಜಿಪಂ, ತಾಪಂ, ಪುರಸಭೆ, ಪಪಂ, ಗ್ರಾಮ ಪಂಚಾಯಿತಿ ಸೇರಿದಂತೆ ಬಿಜೆಪಿಯೊಂದಿಗೆ ಹೊಂದಾಣಿಕೆ ಇಲ್ಲ. ನಾವೂ ಸ್ಥಳೀಯ ಸಂಸ್ಥೆಯಲ್ಲಿ ಸ್ವತಂತ್ರರು. ಸ್ಥಳೀಯ ಸಂಸ್ಥೆ ಚುನಾವಣೆ ಆಕಾಂಕ್ಷಿಗಳು ಈಗಿಂದಲೇ ತಯಾರಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಲಾಕ್ ಸಮಿತಿ ರಚನೆ ಮಾಡಿ ಆಯ್ಕೆ ಮಾಡುತ್ತೇವೆ ಎಂದರು.ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಶರಣಪ್ಪ ಹೂಗಾರ, ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಕಲ್ಲಪ್ಪನವರ, ಜಾಕೀರಹುಸೇನ್ ಹವಾಲ್ದಾರ್, ಫಕ್ಕೀರಪ್ಪ ತುಳಿ, ಹನುಮಂತಪ್ಪ ಮರಿಗೌಡ್ರ, ಜಯರಾಜ ವಾಲಿ, ರಾಯಸಾಬ ಢಾಲಾಯತ, ವಿನಾಯಕ ಪರಬತ, ಮಾಬೂಸಾಬ ಕನಕವಾಡ, ಇಸಾಕ್ ಬೈರೆಕ್‌ದಾರ, ಶಿವು ಪಾಟೀಲ, ವೀರೇಶ ಬಣಕಾರ, ಬಸವರಾಜ ಕಲ್ಲಪ್ಪನವರ, ಶಿವಜೋಗಿ ತುಳಿ, ಮಲ್ಲೇಶ ಮಾಗಡಿ ಸೇರಿದಂತೆ ಅನೇಕರು ಇದ್ದರು. ಈ ವೇಳೆ 15ಕ್ಕೂ ಅಧಿಕ ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು.