ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ಪಕ್ಷದ ವತಿಯಿಂದ ಜನವರಿ ೧೦ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತಾಡಿದ ಅವರು, ರಾಜ್ಯ ಸರ್ಕಾರವು ಶೇಕಡ ೧೫ರಷ್ಟು ದರ ಏರಿಕೆ ಮಾಡಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಖಂಡಿಸಿ ಹಮ್ಮಿಕೊಂಡಿರುವ ಪ್ರತಿಭಟನೆಯು ಶುಕ್ರವಾರ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾದಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ. ತಮ್ಮ ಘೋಷಣೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಸಾಮಾನ್ಯ ಜನರ ಮೇಲೆ ಆರ್ಥಿಕ ಹೊರೆಯನ್ನು ಕಾಂಗ್ರೆಸ್ ಸರ್ಕಾರ ಹೆಚ್ಚು ಮಾಡುತ್ತಿದೆ. ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಬಸ್ ಪ್ರಯಾಣದ ಹೆಚ್ಚಿಸಿರುವುದು ಬಡ ಹಾಗೂ ಸಾಮಾನ್ಯ ವರ್ಗದ ಜನರಿಗೆ ಆರ್ಥಿಕ ಹೊರೆಯಾಗಿದೆ ಎಂದರು.ಒಂದೆಡೆ ಹೆಣ್ಣು ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಗಂಡಸರಿಗೆ ಶೇ. ೧೫ರಷ್ಟು ಸಾರಿಗೆ ವೆಚ್ಚವನ್ನು ಹೆಚ್ಚಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ದಿನನಿತ್ಯ ಜನರು ಬಳಸುವ ಅಗತ್ಯ ವಸ್ತುಗಳ ಬೆಲೆಯೂ ಕೂಡ ಹಂತಹಂತವಾಗಿ ಏರಿಕೆಯಾಗುತ್ತಿವೆ. ಇದಲ್ಲದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಕೇವಲ ಐದು ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುವ ಸಲುವಾಗಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ. ಅಲ್ಲದೆ ಕೆಲವು ಯೋಜನೆಗಳು ಸಮರ್ಪಕವಾಗಿ ಇನ್ನೂ ಜನರಿಗೆ ತಲುಪುತ್ತಿಲ್ಲ. ಶಾಸಕರಿಗೆ ಬರುವ ಅನುದಾನವು ಸರಿಯಾಗಿ ಬರುತ್ತಿಲ್ಲ, ಹೀಗಿದ್ದಾಗ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕೂಡಲೇ ಬಸ್ ದರ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಮಾಧ್ಯಮ ವಕ್ತಾರ ಹೊಂಗೆರೆ ರಘು, ಯೋಗೇಶ್, ಭಾನು, ಇತರರು ಉಪಸ್ಥಿತರಿದ್ದರು.