ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

| Published : Jul 26 2024, 01:34 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಎಂದು ಹೆಸರು ಕಟ್ಟಿಕೊಂಡು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರಿಗೆ ಮೋಸ ಮಾಡಿ ದಲಿತರ ಹಣವನ್ನು ನುಂಗುತ್ತಿರುವ ಅವರಿಗೆ ಅಹಿಂದ ನಾಯಕ ಎಂದು ಹೆಸರೇಳಲು ಯಾವ ನೈತಿಕತೆ ಇದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮುಡಾ ಹಾಗೂ ವಾಲ್ಮೀಕಿ ಸೇರಿದಂತೆ ಹಲವು ಅಭಿವೃದ್ಧಿ ನಿಗಮಗಳಲ್ಲಿ ನಡೆದಿರುವ ಹಗರಣಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸದನದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಹೋರಾಟ ನಡೆಸಲಾಗುತ್ತಿದೆ. ಭ್ರಷ್ಟಾಚಾರ ಮಾಡಿರುವ ರಾಜ್ಯ ಸರ್ಕಾರವನ್ನು ವಜಾ ಮಾಡಲು ರಾಜ್ಯಪಾಲ, ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಎಂದು ಹೆಸರು ಕಟ್ಟಿಕೊಂಡು ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರಿಗೆ ಮೋಸ ಮಾಡಿ ದಲಿತರ ಹಣವನ್ನು ನುಂಗುತ್ತಿರುವ ಅವರಿಗೆ ಅಹಿಂದ ನಾಯಕ ಎಂದು ಹೆಸರೇಳಲು ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರು. ಅಕ್ರಮ ನಡೆದಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಮೀಸಲಿಟ್ಟಿದ್ದ ಹಣವನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ. ಅಲ್ಲದೇ, ಎಸ್‌ಸಿ ಎಸ್‌ಟಿ ಅಭಿವೃದ್ಧಿಗಾಗಿ ಇರುವ ಸಾವಿರಾರು ಕೋಟಿ ಅನುದಾನವನ್ನು ಬೇರೆ ಬೇರೆ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ಸಿದ್ದರಾಮಯ್ಯ ತಾವು ದಲಿತ ವಿರೋಧಿ ಎನ್ನುವುದನ್ನು ತೋರಿಸಿದ್ದಾರೆ ಎಂದು ಕಿಡಿಕಾರಿದರು.

ಮಳವಳ್ಳಿಯಲ್ಲಿ ಸಾವಿರಾರು ಎಕರೆ ಭೂಮಿ ಭ್ರಷ್ಟಚಾರ ನಡೆದೆ ಎಂದು ಹೇಳುವ ಶಾಸಕರು ಅಕ್ರಮ ಆರ್‌ಟಿಸಿ ಮತ್ತು ಖಾತೆಗಳನ್ನು ಎಷ್ಟು ರದ್ದು ಮಾಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಅಕ್ರಮ ಮರಳು ಮತ್ತು ಮಣ್ಣು ಸಾಕಾಣಿಕೆಯಲ್ಲಿ ಪೊಲೀಸರು ಶಾಮೀಲಾಗಿದ್ದಾರೆ. ತಾಲೂಕಿನಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.

ಕ್ಷೇತ್ರದ ಶಾಸಕರು ಪರಿಶಿಷ್ಟ ಜಾತಿ, ಪಂಗಡ ಕಲ್ಯಾಣ ಸಮಿತಿ ಅಧ್ಯಕ್ಷರಾಗಿದ್ದಾರೆ. 50 ವರ್ಷಗಳಿಂದ ದಲಿತರು ಎನ್ನುವ ಪದ ಬಳಸಬೇಡಿ ಎನ್ನುತ್ತಾರೆ. ಅವರಿಗೆ ದಲಿತ ಪರ ಅರ್ಥವೇ ಗೊತ್ತಿಲ್ಲ. ಎಲ್ಲ ವರ್ಗಗಳ ಬಡವರನ್ನು ದಲಿತ ಎಂದು ನಾವೇ ಕರೆದುಕೊಂಡಿದ್ದೇವೆ. ನಾನು ಕನ್ನಡ ಮೇಷ್ಟ್ರು ಆಗಿ ನನಗೆ ಗೊತ್ತಿದೆ ಎಂದರು.

ಎಂಜಿನಿಯರಿಂಗ್ ಮಾಡಿರುವವರಿಗೆ ಎಷ್ಟು ಮರಳು, ಸಿಮೆಂಟ್ ಹಾಕಬೇಕು. ಗುತ್ತಿಗೆ ಕೆಲಸದಲ್ಲಿ ಎಷ್ಟು ಕಮಿಷನ್ ಪಡೆಯಬೇಕು ಎನ್ನುವುದು ಮಾತ್ರ ಅವರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಲೊಕೇಶ್ ಅವರಿಗೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ನೀಡಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಬಿ.ರವಿ ಕಂಸಾಗರ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಪುರಸಭೆ ಸದಸ್ಯ ಟಿ.ನಂದಕುಮಾರ್, ಪಿಎಲ್‌ಡಿ ಬ್ಯಾಂಕ್ ನಿರ್ದೆಶಕ ನಿಂಗಣ್ಣ ಮುಖಂಡರಾದ ಡಿ.ಜಯರಾಮು, ಕಾಂತರಾಜು, ಬೂವಳ್ಳಿ ಸದಾನಂದ, ಪುಟ್ಟರಾಮು, ಸಿದ್ದಾಚಾರಿ, ಪುಟ್ಟಬುದ್ಧಿ, ಕಿಟ್ಟಿ, ಮೆಹಬೂಬ್ ಪಾಷಾ, ಆನಂದ್, ಗುರುಪ್ರಸಾದ್, ಜಯರಾಮು ಸೇರಿದಂತೆ ಇತರರು ಇದ್ದರು.