ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಭ್ರಷ್ಟಾಚಾರ ರಹಿತ, ನೈತಿಕ ರಾಜಕಾರಣ ನಂಬಿಕೊಂಡಿರುವ ಜೆಡಿ(ಯು),ಮುಂಬರುವ 2026 ರಲ್ಲಿ ನಡೆಯಲಿರುವ ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದ ಸಂಯುಕ್ತ ಜನತಾದಳದ ಅಭ್ಯರ್ಥಿಯಾಗಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಕೆ.ನಾಗರಾಜ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಮೊದಲು ನಾವು ಅಭ್ಯರ್ಥಿಯನ್ನು ಘೋಷಣೆ ಮಾಡಿರುವ ಉದ್ದೇಶ, ಪ್ರತಿ ಮತದಾರರನ್ನು ಅಭ್ಯರ್ಥಿ ಭೇಟಿಯಾಗಿ, ಮತಯಾಚಿಸಲಿ, ಹಣ, ಹೆಂಡ, ಇನ್ನಿತರ ಆಮಿಷಗಳ ಹೊರತಾಗಿಯೂ ಜನರು ವ್ಯಕ್ತಿ ನೋಡಿ ಮತ ಹಾಕುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ಆಗಿದೆ ಎಂದರು.ನಮ್ಮ ತಂದೆಯವರಾದ ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ ಸೇರಿದಂತೆ ಅನೇಕರು ರಾಜಕಾರಣವೆಂದರೆ ಕೇವಲ ಅಧಿಕಾರ ಎಂದು ಭಾವಿಸಿರಲಿಲ್ಲ. ಕೃಷಿ,ಪರಿಸರ, ಶಿಕ್ಷಣ, ಆಡಳಿತ, ಆರೋಗ್ಯ ಇವುಗಳೆಲ್ಲಾ ಉತ್ತಮವಾಗಿರಬೇಕು ಎಂದು ಬಯಸಿದ್ದರು. ಕರ್ನಾಟಕದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಸರ್ವೋದಯ ಎಂಬ ಪರಿಕಲ್ಪನೆಯಲ್ಲಿ ಹೊಸ ತಂಡವೊಂದನ್ನು ಕಟ್ಟಿ ಇಡೀ ಕರ್ನಾಟಕದಾದ್ಯಂತ ಪ್ರವಾಸ ಮಾಡಿ, ಪಕ್ಷ ಸಂಘಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ನುಡಿದರು. ಸರ್ವೋದಯ ಕರ್ನಾಟಕದ ಮೊದಲ ಪ್ರವಾಸ ಆಗ್ನೇಯ ಪದವಿಧರ ಕ್ಷೇತ್ರದ ವ್ಯಾಪ್ತಿಗೆ ಒಳಗೊಂಡಂತೆ ನಡೆಯಲಿದೆ. ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಪ್ರಾರಂಭಗೊಂಡಿದೆ. ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ವಿದ್ಯಾವಂತ ಪದವಿಧರರಿಗೆ ಪಕ್ಷದ ಸಿದ್ದಾಂತ ತಿಳಿಸುವ ಜೊತೆಗೆ, ಮುಂದಿನ ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆಗೆ ಮತದಾರರ ನೊಂದಣಿ ಆರಂಭಿಸುವುದು, ಹಾಗೆಯೇ ಸರ್ವೋದಯ ಪರಿಕಲ್ಪನೆಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಡಾ.ಕೆ.ನಾಗರಾಜ ಅವರನ್ನು ಬೆಂಬಲಿಸುವಂತೆ ಮನವಿ ಮಾಡಲಾಗುವುದು ಎಂದರು.ಆಗ್ನೇಯ ಪದವಿಧರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜ ಮಾತನಾಡಿ, ವೃತ್ತಿಯಲ್ಲಿ ವೈದ್ಯನಾಗಿದ್ದು, ವಿದ್ಯಾವಂತ ಯುವಜನತೆ ತಮ್ಮ ಗ್ರಾಮದ ಹತ್ತಿರದಲ್ಲಿಯೇ ತಾವು ಕಲಿತ ವಿದ್ಯೆಯ ಮೂಲಕ ದುಡಿಮೆ ಮಾಡಿ ಬದುಕಬೇಕೆಂಬ ಆಶಯದೊಂದಿಗೆ ಕುಂಬಾರರು, ಕಮ್ಮಾರರು ಸೇರಿದಂತೆ ವಿವಿಧ ಕಸುಬುಗಳ ಜನರನ್ನು ಒಗ್ಗೂಡಿಸಿ ಒಂದು ಕ್ಲಸ್ಟರ್ ಮಾಡಿ, ಸುಮಾರು 300 ಜನರಿಗೆ ಉದ್ಯೋಗ ನೀಡಲಾಗಿದೆ ಎಂದರು.ಆಗ್ನೇಯ ಪದವಿಧರ ಕ್ಷೇತ್ರಕ್ಕೆ 2017ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದೆ, ಈ ಬಾರಿ ಜೆಡಿಯು ಸಹಕಾರದಿಂದ ಚುನಾವಣೆ ಗೆಲ್ಲಲ್ಲು ಪ್ರವಾಸ ಕೈಗೊಂಡಿದ್ದು,ಭ್ರಷ್ಟಾಚಾರ ರಹಿತ ಚುನಾವಣೆ ನಡೆಸಬೇಕೆಂಬು ಆಶಯ ನನ್ನದಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್., ಉಪಾಧ್ಯಕ್ಷರಾದ ಯಶೋಧ, ರೈತ ಘಟಕದ ಶ್ರೀನಿವಾಸಗೌಡ, ಮುಖಂಡರಾದ ಶಾಂತಕುಮಾರಿ, ಯುವ ಜನತಾದಳ (ಸಂಯುಕ್ತ)ದ ಬಿ.ಎಂ.ಪ್ರಭು, ಮೈನಾವತಿ, ಚಂದ್ರಶೇಖರ ಗಂಗು, ಕಲ್ಪನಾಗೌಡ ಮತ್ತಿತರರು ಉಪಸ್ಥಿತರಿದ್ದರು.