ಜೀಪ್ ಬೈಕ್‌ಗೆ ಡಿಕ್ಕಿ: ಸವಾರ ಸಾವು, ಇಬ್ಬರು ಗಂಭೀರ

| Published : Apr 18 2024, 02:20 AM IST

ಸಾರಾಂಶ

ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ (48) ಮೃತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಜೀಪೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಪುತ್ತೂರು ಸುಬ್ರಹ್ಮಣ್ಯ ರಸ್ತೆಯಲ್ಲಿನ ನರಿಮೊಗರು ಗ್ರಾಮದ ಪಾಪೆತ್ತಡ್ಕ ಎಂಬಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಡಕ್ಕೋಡಿ ಕಡ್ಯ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ಲಾರಿ ಚಾಲಕರಾಗಿರುವ ಲೋಕೇಶ್ (48) ಮೃತಪಟ್ಟವರು. ಅವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.ಲೋಕೇಶ್ ಅವರು ಮಕ್ಕಳೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಆಗಮಿಸಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಮುಂಭಾಗದಿಂದ ಆಗಮಿಸಿದ ಜೀಪು ಬೈಕ್ ಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಬೈಕ್ ಎರಡು ತುಂಡಾಗಿದೆ. ಸುಮಾರು 50 ಮೀಟರ್ ದೂರದ ತನಕ ಬೈಕನ್ನು ಜೀಪ್‌ ಎಳೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ರಸ್ತೆಗೆ ಎಸೆಯಲ್ಪಟ್ಟ ಲೋಕೇಶ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ದ್ವಿಚಕ್ರ ವಾಹನಕ್ಕೆ ಟ್ಯಾಂಕರ್ ಡಿಕ್ಕಿ; ಮಗು ಸಹಿತ ದಂಪತಿಗೆ ಗಾಯ

ಉಪ್ಪಿನಂಗಡಿ: ಟ್ಯಾಂಕರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಮಗು ಸಹಿತ ದಂಪತಿ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ಬುಧವಾರ ಸಂಭವಿಸಿದೆ.ದ್ವಿಚಕ್ರ ವಾಹನದಲ್ಲಿದ್ದ ಮುಹಮ್ಮದ್ ಶರೀಫ್, ಅವರ ಪತ್ನಿ ಆಯೀಷಾ ತಸ್ಲೀಮಾ ಹಾಗೂ ಮಗು ಮುಹಮ್ಮದ್ ರಫೀ ಗಾಯಗೊಂಡವರು. ಮುಹಮ್ಮದ್ ಶರೀಫ್ ಅವರ ಕಾಲಿಗೆ ಹಾಗೂ ಆಯೀಷಾ ತಸ್ಲೀಮಾ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಮಗು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಸರಳೀಕಟ್ಟೆಯ ಉರ್ಲಡ್ಕ ನಿವಾಸಿಗಳು ಎಂದು ತಿಳಿದುಬಂದಿದೆ.ವಾಹನವೊಂದನ್ನು ಓವರ್‌ಟೇಕ್ ಮಾಡಿಕೊಂಡು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದ ಟ್ಯಾಂಕರ್ ಎದುರಿನಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಟ್ಯಾಂಕರ್‌ನಿಂದ ಇಳಿದು ಓಡಲು ಯತ್ನಿಸಿದ್ದು, ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.