ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಎಳವೆಯಲ್ಲೇ ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟರು.ನಗರದ ಪೂರ್ಣ ಚೇತನ ಶಾಲೆಯ ಮಕ್ಕಳೇ ಬರೆದು, ಸಂಪಾದಿಸಿರುವ ಪಾಠ ಶಾಲಾ ಜೀವನ ಯಾತ್ರಾ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಶಾಲೆಯ ನಾಲ್ಕರಿಂದ ಹತ್ತನೇ ತರಗತಿಯವರೆಗಿನ 104 ವಿದ್ಯಾರ್ಥಿಗಳು ತಮ್ಮ ಬದುಕಿನ ಸಣ್ಣ ಸಣ್ಣ ಅನುಭವಗಳು, ಪ್ರವಾಸ, ಸೃಜನಶೀಲ ಆಲೋಚನೆಗಳು, ತಮ್ಮನ್ನು ಪ್ರಭಾವಿಸಿದ ಸಂಗತಿಗಳು-ವ್ಯಕ್ತಿಗಳ ಬಗ್ಗೆ ಬರೆದಿರುವ 189 ಲೇಖನಗಳ ಗುಚ್ಛ ಈ ಪುಸ್ತಕ. ಕೌಟುಂಬಿಕ ಬಾಂಧವ್ಯದ ಬೆಚ್ಚನೆಯ ಅನುಭವ, ಕೌತುಕಕಾರಿ ಜೀವ ವೈವಿಧ್ಯ, ಅಜ್ಜ ಕಟ್ಟಿಕೊಟ್ಟ ಅನುಭವದ ಬುತ್ತಿ, ಹೆತ್ತವರೇ ನಮ್ಮ ಮೊದಲ ಗುರುಗಳು, ಗೆಳೆತನವೆಂಬ ನಿಜ ಉಡುಗೊರೆ, ವಿಜ್ಞಾನ ಲೋಕ, ನನ್ನ ಅಪ್ಪ- ನನ್ನ ಹೀರೋ, ಮೌಲ್ಯಯುತ ಶಿಕ್ಷಣದ ಪ್ರಾಮುಖ್ಯತೆ, ಶಾಲೆಯಲ್ಲಿ ಕಲಿತ ಜೀವನ ಪಾಠಗಳು, ಪಠ್ಯಪುಸ್ತಕದಾಚೆಗಿನ ವಿಶಿಷ್ಟ ಲೋಕ, ಅಮ್ಮನ ನಿಸ್ವಾರ್ಥದ ಲೋಕ, ಆಟೋಟ ಕೂಟಗಳು ಕಲಿಸುವ ಪಾಠ, ಪ್ರಕೃತಿಯ ಪಾಠಗಳು, ಶಾಲೆ ರೂಪಿಸಿದ ನನ್ನ ವ್ಯಕ್ತಿತ್ವ, ಗುರುಗಳು ತೋರುವ ಆದರ್ಶದ ಹಾದಿ, ಹೀಗೆ, ಶಾಲೆಯ ವಿದ್ಯಾರ್ಥಿಗಳು, ತಮ್ಮ ಮುಗ್ಧ ಭಾವನೆ-ಅನುಭವಗಳಿಗೆ ಈ ಪುಸ್ತಕದಲ್ಲಿ ಅಕ್ಷರ ರೂಪ ನೀಡಿದ್ದಾರೆ ಎಂದರು. ಶಾಲಾ ಸಿಇಒ ಬಿ. ದರ್ಶನ್ ರಾಜ್, ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿದರು. ಪ್ರಾಂಶುಪಾಲೆ ಬಿ. ಪ್ರಿಯಾಂಕಾ ಇದ್ದರು.