ಕನ್ನಡಪ್ರಭ ವಾರ್ತೆ ಬೆಂಗಳೂರು
ಅಂಚೆ ಮತಗಳ ಮರು ಎಣಿಕೆಯಲ್ಲಿ ಗೆಲುವು ಸಾಧಿಸಿದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ರಾಜ್ಯಪಾಲರ ಮೊರೆ ಹೋದ ಬಳಿಕ ಬುಧವಾರ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.ವಿಧಾನಸೌಧದ ವಿಧಾನ ಮಂಡಲ ಕೊಠಡಿಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರ ಸಮ್ಮುಖದಲ್ಲಿ ಶೃಂಗೇರಿ ಶಾರದಾಂಬೆ ಮತ್ತು ಭಗವಂತನ ಹೆಸರಿನಲ್ಲಿ ಜೀವರಾಜ್ ಪ್ರಮಾಣವಚನ ಸ್ವೀಕರಿಸಿದರು.
ಈ ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಜೀವರಾಜ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.ಇದಕ್ಕೂ ಮೊದಲು ಜೀವರಾಜ್ ಅವರು ವಿಧಾನಸೌಧದ ಕೆಂಗಲ್ ದ್ವಾರದಲ್ಲಿ ಚಪ್ಪಲಿ ಬಿಟ್ಟು ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಬಳಿಕ ವಿಧಾನಸೌಧ ಪ್ರವೇಶಿಸಿದರು.
ಕೋರ್ಟ್ ನ್ಯಾಯ ಕೊಟ್ಟಿದೆ- ಜೀವರಾಜ್:
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೀವರಾಜ್, ನಾಲ್ಕನೇ ಬಾರಿಗೆ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ನನಗೆ ಅತ್ಯಂತ ಸಂತೋಷವಾಗಿದೆ. ಸತತ ಮೂರು ವರ್ಷಗಳ ಹೋರಾಟದ ಬಳಿಕ ನ್ಯಾಯಾಲಯ ನ್ಯಾಯ ಕೊಟ್ಟಿದೆ. ಮೂರು ವರ್ಷಗಳ ಮಧ್ಯದಲ್ಲಿ ಶಾಸಕನಾಗಿದ್ದೇನೆ. ಈ ಅವಧಿಯಲ್ಲಿ ವ್ಯವಸ್ಥೆಯಲ್ಲಿ ಏನೆಲ್ಲಾ ನಡೆದಿದೆ ಎಂಬುದನ್ನು ನೋಡುವುದು ಕಷ್ಟ. ಆದರೆ, ನನಗೆ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇದೆ. ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿದ ಅನುಭವದ ಆಧಾರದ ಮೇಲೆ ಶೃಂಗೇರಿ ಕ್ಷೇತ್ರದ ಸೇವಕನಾಗಿ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಪ್ರಮಾಣ ವಚನ ವಿಳಂಬವಿಲ್ಲ,ಯಾರ ಒತ್ತಡವೂ ಇಲ್ಲ: ಸ್ಪೀಕರ್
ಪ್ರಮಾಣ ವಚನ ಬೋಧನೆ ವಿಳಂಬವಾಗಿಲ್ಲ. ಇದೊಂದು ವಿಶೇಷ ಪ್ರಕರಣವಾದ್ದರಿಂದ ಕಾನೂನು ತಜ್ಞರ ಅಭಿಪ್ರಾಯ ಪಡೆದು ವಿಳಂಬ ಮಾಡದೆ ಪ್ರಮಾಣವಚನ ಬೋಧಿಸಿದ್ದೇವೆ ಎಂದು ಸ್ಪೀಕರ್ ಖಾದರ್ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ 11.30ಕ್ಕೆ ನಮ್ಮ ಕಚೇರಿಗೆ ಮನವಿ ಕೊಟ್ಟು ಬಳಿಕ ಸಂಜೆ ರಾಜ್ಯಪಾಲರಿಗೆ ಮನವಿ ಕೊಟಿದ್ದರು. ಏಕೆ ಕೊಟ್ಟರೋ ಗೊತ್ತಿಲ್ಲ. ಸ್ಪೀಕರ್ ಪೀಠದ ಬಗ್ಗೆ ಅನಾವಶ್ಯಕ ಚರ್ಚೆಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಕೆಲಸಗಳನ್ನು ಬದಿಗೊತ್ತಿ ಇವತ್ತು ಸಂವಿಧಾನ ನಿಯಮಗಳಿಗೆ ಬದ್ಧವಾಗಿ ಪ್ರಮಾಣವಚನ ಬೋಧಿಸಿದ್ದೇವೆ. ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆ ಬಲಿಷ್ಠವಾಗಬೇಕಾದರೆ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಪರಸ್ಪರ ವಿಶ್ವಾಸದಿಂದ ಕೆಲಸ ಮಾಡಬೇಕು. ಇದರ ಹಿಂದೆ ರಾಜ್ಯಪಾಲರ ನಿರ್ದೇಶನ ಅಥವಾ ಬೇರೆಯವರ ಒತ್ತಡ ಏನೂ ಇಲ್ಲ ಎಂದು ತಿಳಿಸಿದರು.