ಭಾರತ ತಂಡ ಗೆಲ್ಲಿಸಿದ ಜೆಮಿಮಾ ಕರಾವಳಿಯ ಕುವರಿ

| Published : Nov 02 2025, 03:45 AM IST

ಸಾರಾಂಶ

ಜೆಮಿಮಾ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಅವರಿಗೆ ಕರಾವಳಿಯ ನಂಟು ಇದೆ. ಅವರ ತಂದೆ ಇವಾನ್ ರೋಡ್ರಿಗಸ್ ಮಂಗಳೂರಿನವರು, ತಾಯಿ ಲ್ಯಾವಿಟಾ ರೋಡ್ರಿಗಸ್ ಉಡುಪಿಯವರು. ಕೇವಲ ನಾಲ್ಕು ವರ್ಷ ಪ್ರಾಯದಲ್ಲಿ ಕ್ರಿಕೆಟ್ ಬ್ಯಾಟ್‌ ಹಿಡಿದಿದ್ದ ಜೆಮಿಮಾ, ಬಾಲ್ಯದಲ್ಲಿಯೇ ಅಣ್ಣಂದಿರಿಗೆ ಬೌಲಿಂಗ್ ಮಾಡುವುದರ ಮೂಲಕ ಅಭ್ಯಾಸ ಬೆಳೆಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಐದು ವಿಕೆಟ್‌ಗಳ ಗೆಲುವು ಸಾಧಿಸಿ, ಮಹಿಳಾ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಈ ಮಹತ್ವದ ಗೆಲುವಿನಲ್ಲಿ ಮಿಂಚಿದ ಬ್ಯಾಟಿಂಗ್ ತಾರೆ ಜೆಮಿಮಾ ರಾಡ್ರಿಗಸ್ ಮೂಲತಃ ಮಂಗಳೂರಿನವರು ಎಂಬುದು ಕರಾವಳಿಗೆ ಹೆಮ್ಮೆಯ ಸಂಗತಿ. ಜೆಮಿಮಾ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಅವರಿಗೆ ಕರಾವಳಿಯ ನಂಟು ಇದೆ. ಅವರ ತಂದೆ ಇವಾನ್ ರೋಡ್ರಿಗಸ್ ಮಂಗಳೂರಿನವರು, ತಾಯಿ ಲ್ಯಾವಿಟಾ ರೋಡ್ರಿಗಸ್ ಉಡುಪಿಯವರು. ಕೇವಲ ನಾಲ್ಕು ವರ್ಷ ಪ್ರಾಯದಲ್ಲಿ ಕ್ರಿಕೆಟ್ ಬ್ಯಾಟ್‌ ಹಿಡಿದಿದ್ದ ಜೆಮಿಮಾ, ಬಾಲ್ಯದಲ್ಲಿಯೇ ಅಣ್ಣಂದಿರಿಗೆ ಬೌಲಿಂಗ್ ಮಾಡುವುದರ ಮೂಲಕ ಅಭ್ಯಾಸ ಬೆಳೆಸಿಕೊಂಡಿದ್ದರು.ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೆಮಿಮಾ, ಕ್ರೀಸ್‌ನಲ್ಲಿ ಬೇರೂರಿ ನಿಂತು ಆಸೀಸ್ ಬೌಲರ್‌ಗಳನ್ನು ತತ್ತರಗೊಳಿಸಿದರು. ಶತಕ ಬಾರಿಸಿದರೂ ಸಂಭ್ರಮಿಸದೆ, ತಂಡವನ್ನು ಗೆಲುವಿನ ದಡ ಸೇರಿಸುವುದು ಅವರ ಪ್ರಧಾನ ಗುರಿಯಾಗಿತ್ತು. ತಂಡ ಜಯ ಸಾಧಿಸಿದ ಕ್ಷಣದಲ್ಲಿ ಭಾವುಕರಾದ ಜೆಮಿಮಾ ಮೈದಾನದಲ್ಲೇ ಸಂತಸ ಕಣ್ಣೀರು ಸುರಿಸಿದರು.೧೩೪ ಎಸೆತ ಎದುರಿಸಿದ ಜೆಮಿಮಾ ೧೪ ಬೌಂಡರಿಗಳ ನೆರವಿನಿಂದ ಅಜೇಯ ೧೨೭ ರನ್‌ಗಳು ಬಾರಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ ೧೬೭ ರನ್‌ಗಳ ದಾಖಲೆಯ ಜೊತೆಯಾಟ ನಡೆಸಿದರು. ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಚೇಸ್ ಆಗಿ ದಾಖಲಾಗಿದೆ.ಹುಡುಗಿಯರು ಕ್ರಿಕೆಟ್ ಆಡುತ್ತಾರೆಯೇ ಎಂದು ಪ್ರಶ್ನೆ ಕೇಳುತ್ತಿದ್ದ ಕಾಲದಲ್ಲಿ, ೫೦೦ ಹುಡುಗರ ಮಧ್ಯೆ ಏಕೈಕ ಹುಡುಗಿಯಾಗಿ ಮೈದಾನಕ್ಕಿಳಿಯುತ್ತಿದ್ದಳು. ಹನ್ನೆರಡೂವರೆ ವಯಸ್ಸಿನಲ್ಲೇ ಮಹಾರಾಷ್ಟ್ರ ಅಂಡರ್-೧೯ ತಂಡದಲ್ಲಿ ಸ್ಥಾನ ಪಡೆದಿದ್ದಳು. ಸೌರಾಷ್ಟ್ರ ವಿರುದ್ಧ ಅಜೇಯ ೨೦೨ ರನ್, ಗುಜರಾತ್ ವಿರುದ್ಧ ೧೭೮ ರನ್ ಬಾರಿಸಿದ ಆಕೆಯ ಪ್ರದರ್ಶನ ಆಯ್ಕೆಗಾರರ ಗಮನ ಸೆಳೆದಿತ್ತು. ಶಾಲಾ ದಿನಗಳಲ್ಲಿ ಹಾಕಿಯಲ್ಲಿಯೂ ಚುರುಕಾಗಿದ್ದ ಜೆಮಿಮಾ, ಅಂತಿಮವಾಗಿ ಕ್ರಿಕೆಟ್ ಆಯ್ಕೆ ಮಾಡಿಕೊಂಡು ಇದೀಗ ಭಾರತ ತಂಡದ ಪ್ರಮುಖ ಕ್ರಿಕೆಟ್‌ ತಾರೆ ಆಗಿದ್ದಾಳೆ.

-----------