ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಯಲ್ಲಿ ಕಳೆದೊಂದು ವಾರದಿಂದ ಸಂಜೆ, ರಾತ್ರಿ ಬಿರುಗಾಳಿ, ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿಯುತ್ತಿದೆ. ಇನ್ನೂ ಮಿರ್ಗಾನೇ ಮಿಂಚಿಲ್ಲವೆಂದು ಮುಗಿಲು ನೋಡುತ್ತಿದ್ದ ಬಿಸಿಲೂರು ಮಂದಿ ಅಬ್ಬಾ ಇದೇನ್ ಮಳೆಯೋ ಎಂದು ಮೂಗು ಮುರಿಯುತ್ತಿರುವಾಗಲೇ ಬಿರುಗಾಳಿಗೆ ಮರಗಳು ಉರುಳಿ, ತಂತಿಗಳು ಕಡಿದು ಬಿದ್ದು ನಗರಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ಭಾರಿ ಸಮಸ್ಯೆ ಕಾಡುತ್ತಿದೆ.
ತಮ್ಮ ಕಣ್ಣೆದುರಿಗೆ ಮರಗಳು ಉರುಳಿ ಬಿದ್ದು ತಂದರೆ ಕಂಡವರು ಜೆಸ್ಕಾಂಗೆ ದೂರು ನೀಡೋಣ, ಸಮಸ್ಯೆ ಬೇಗ ಪರಿಹಾರ ಕಾಣಲಿ, ಎಡವಟ್ಟುಗಳು ಆಗದು ಬೇಡವೆಂದು 191 ಗೆ ಕರೆ ಮಾಡಿದರೆ ತೀರಿತು... ನೀವು ತಲುಪಲು ಬಯಸುತ್ತಿರುವ ದೂರವಾಣಿ ಸಂಖ್ಯೆ ಕಾರ್ಯ ನಿರತವಾಗಿದೆ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಎಂದು ಸಂಕಷ್ಟದ ಸಮಯದಲ್ಲಿ ಇದೇ ಧ್ವನಿ ಕೇಳಿ ಬೇಸರಿಸಿದ್ದಾರೆ.ಜೋರಾದ ಮಳೆ, ಬಿರುಗಾಳಿ ಶುರುವಾದಾಗ ಜೆಸ್ಕಾಂ ಸಹಾಯವಾಣಿ, ತುರ್ತು ನೆರವಿನ ತಂಡಗಳು ಸಮರೋಪಾದಿಯಲ್ಲಿ ಸಿದ್ದವಾಗಿರಬೇಕು, ಆ ರೀತಿ ಜೆಸ್ಕಾಂ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಹೆಲ್ಪ್‌ಲೈನ್‌ಗೂ ಕರೆ ಮಾಡಿ ಗೋಳು ತೋಡಿಕೊಳ್ಳದಂತೆ ಆಗಿದೆ ಎಂದು ಗ್ರಾಹಕರು ಜೆಸ್ಕಾಂ ಬೇಕಾಬಿಟ್ಟಿತನಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಮಳಿ ಗಾಳಿಗೂ ಮುನ್ನ 1912 ಓಕೆ, ನಂತರ ಎಂಗೇಜ್ ಯಾಕೆ?: ಮಳೆ ಹನಿಗಳು ಉದುರೋವರೆಗೂ 1912 ರಿಂಗ್ ಆಗ್ತದೆ, ಕರೆಗಳನ್ನು ಆಚಿನವರು ಸ್ವೀಕರಿಸಿ ದೂರು ಸಂಖ್ಯೆ ಕೊಡ್ತಾರೆ, ಯಾವಾಗ ಮಳೆ, ಗಾಳಿ, ಸಿಡಿಲಿನಬ್ಬರ ಜೋರಾಗುತ್ತದೆಯೋ ಆಗ ಹೆಲ್ಪಲೈನ್ ತನ್ನ ಕೆಲಸವನ್ನು ನಿಲ್ಲಿಸುತ್ತದೆ. ಸದಾ ಎಂಗಜ್ ಬರುತ್ತದೆ, ಕಾರ್ಯನಿರತವಾಗಿದೆಎಂದು ಸುಮ್ಮನಿರ್ತೇವೆ. ಅರ್ಧಗಂಟೆ, 1 ಗಂಟೆ ಬಿಟ್ಟು ಕರೆ ಮಾಡಲು ಯತ್ನಿಸಿದರೂ ಎಂಗೇಜ್ ಬರ್ತದೆ. ಮುಂದೆ ಮಳೆ ನಿಂತು ವಾತಾವರಣ ಶುಭ್ರ ಹಾಗೂ ಶಾಂತವಾಗಿ 2, 3 ಗಂಟೆ ಉರುಳಿದ ನಂತರವಷ್ಟೇ ಜೆಸ್ಕಾಂ ಸಹಾಯವಾಣಿ ಮತ್ತೆ ರಿಂಗಣಿಸಲು ಶುರುವಾಗುತ್ತದೆ ಎಂದು ಜೆಸ್ಕಾಂ ಸಹಯವಾಣಿಯ ಈ ಮಳೆ- ಬಿರುಗಾಳಿ ಸಂದರ್ಭದ ಜಾಣ ಕಿವುಡುತನವನ್ನು ಗ್ರಾಹಕರೇ ತಾವು ಅನುಭವಿಸಿದಂತೆ ಬಣ್ಣಿಸುತ್ತಿದ್ದಾರೆ.ನಗರವಾಸಿಗಳ ಗೋಳಿಗೆ ಕ್ಯಾರೆ ಎನ್ನದ ಜೆಸ್ಕಾಂ: ಹಾಗಾದರೆ ಸಂಕಷ್ಟದಲ್ಲಿ ಗ್ರಾಹಕರಿಗೆ ನೆರವು ನೀಡೋದು ಜೆಸ್ಕಾಂಗೆ ಬೇಡವಾಗಿದೆಯೆ? ಎಂಬ ಪ್ರಶ್ನೆ ವಿದ್ಯುತ್ ಗ್ರಾಹಕರ ಈ ಕೆಟ್ಟ ಅನುಭವದ ಹಿನ್ನೆಲೆಯಲ್ಲಿ ಕಾಡಲಾರಂಭಿಸಿದೆ. ಹಿಂದೊಂದು ಕಲಬುರಗಿ ವ್ಯಾಪ್ತಿಯಲ್ಲಿ ಹೀಗೆ ಆಗಿರಲಿಲ್ಲ. ಈಗೇ ಯಾಕೋ ಜೆಸ್ಕಂ ಬೇಕಾಬಿಟ್ಟಿತನ ಹೆಚ್ಚುತ್ತಿದೆ ಎಂದು ಅನೇಕರು ದೂರುತ್ತಿದ್ದಾರೆ.
ನಗರ, ಗ್ರಾಮೀಣ ಭಾಗವೆನ್ನದೆ ಜೆಸ್ಕಾಂ ವ್ಯಾಪ್ತಿಯಲ್ಲಿ ಜಿಲ್ಲಾದ್ಯಂತ ಬೇಕಾಬಿಟ್ಟಿ ಕರೆಂಟ್ ಕಡಿತವಾಗುತ್ತಿದ್ದರೂ ಸ್ಪಂದನೆ ಶೂನ್ಯವಾಗಿದೆ. ದೂರುಗಳನ್ನು ಹಿಡಿದು ಗ್ರಾಹಕರು ಅತ್ತಿತ್ತ ಓಡಾಡಿಕೊಂಡಿದ್ದರೂ ಸಹ ಇಂಜಿನಿಯರ್‌ಗಳು ತಮಗೇನು ಸಂಬಂಧಿಲ್ಲವೆಂಬಂತೆ ವರ್ತಿಸುತ್ತಿರೋದು ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ.ನಗರದಲ್ಲಿರುವ ರಿಂಗ್ ರಸ್ತೆಯ ರಾಮ ಮಂದಿರ ವೃತ್ತದ ಇಕ್ಕೆಲಗಳಲ್ಲಿನ ಓಝಾ ಬಡಾವಣೆ, ಆರ್‌ಟಿ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಳೆದ 3 ದಿನದಿಂದ ನಿತ್ಯ 6 ರಿಂದ 8 ಗಂಟೆ ಕರೆಂಟ್ ಇಲ್ಲದಂತಾಗಿ ಜನ ಕಂಗಾಲಾಗಿದ್ದರೂ ಕೇಳೋರಿಲ್ಲದಂತಾಗಿದೆ.10 ನಿಮಿಷದಲ್ಲಿ ಹತ್ತಾರು ಬಾರಿ ಹೋಗಿಬರುವ ಕರೆಂಟ್!
ಈ ಬಡಾವಣೆಗಳಲ್ಲಿ ನಿತ್ಯ ಸಂಜೆಯಾಗುತ್ತಿದ್ದಂತೆಯೇ ಕರೆಂಟ್ ಕಣ್ಣಾಮುಚ್ಚಾಲೆ ಶುರುವಾಗುತ್ತಿದ್ದು ಜೆಸ್ಕಾಂಗೆ ದೂರು ನೀಡಿ ಕ್ರಮಕ್ಕೆ ಕೋರಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲವೆಂದು ಬಡಾವಣೆಯ ನಿವಾಸಿಗಳು ದೂರುತ್ತಿದ್ದಾರೆ.ಓಝಾ ಬಡಾವಣೆ, ಆರ್‌ಟಿ ನಗರ, ಸ್ವಾಮಿ ವಿವೇಕಾನಂದ ಬಡಾವಣೆಗಳಲ್ಲಿ ಕಳೆದೊಂದು ವಾರದಿಂದ ನಿತ್ಯ 100 ಕ್ಕೂ ಹೆಚ್ಚು ಸಾರಿ ಕೆರಂಟ್ ಕಣ್ಣಾಮುಚ್ಚಾಲೆ ಶುರುವಾಗಿದೆ. ಸಾಕಷ್ಟು ಸಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಯಾರೂ ಬಂದು ಇಂದಿಗೂ ನೋಡಿಲ್ಲ, ಏನಾಗಿದೆ, ಏನಾಗುತತಿದೆ ಎಂಬುದನ್ನು ಗಮನಿಸಲು ಸಿದ್ಧರಿಲ್ಲವೆಂದು ಈ ಬಡಾವಣೆಯ ನಿವಾಸಿ ಸಂಜೀವ ಸಿರನೂಕರ್ ದೂರಿದ್ದಾರೆ.
ಇವರು 1912 ಕರೆ ಮಾಡಿ ದೂರು ದಾಖಲಿಸಿದ್ದಾರೆ, ಟ್ವೀಟರ್‌ನಲ್ಲಿ ಸೇರಿದಂತೆ ಮೌಖಿಕವಾಗಿ ಎಲ್ಲರಿಗೂ ಸಮಸ್ಯೆ ವಿವರಿಸಿ ದೂರಿದರೂ ಇಂದಿಗೂ ಈ ಭಾಗದಲ್ಲಿನ ಕರೆಂಟ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.ಕೆಲವೊಮ್ಮೆಯಂತೂ ಈ ಬಡಾವಣೆಗಳಲ್ಲಿ 5 ರಿಂದ 10 ನಿಮಿಷಕ್ಕೊಮ್ಮೆ ಕರೆಂಟ್ ಬಂದು ಹೋಗುತ್ತಿದೆ, ಇದರಿಂದ ಮನೆಗಳಲ್ಲಿನ ಯೂಪಿಎಸ್ ವ್ಯವಸ್ಥೆ, ಫ್ರೀಡ್ಜ್, ಕೂಲರ್, ಹವಾ ನಿಯಂತ್ರಕ ಸೇರಿದಂತೆ ಎಲ್ಲಾ ಸವಲತ್ತುಗಳು ಗಡಗಡ ನಡುತ್ತ ಯಾವಾಗ ಏನಾಗುವುದೋ ಎಂಬ ಭಯದ ವಾತಾವರಣ ಹುಟ್ಟಿಕೊಳ್ಳುತ್ತಿದೆ ಎಂದು ಇದೇ ಬಡಾವಣೆಯ ಅನೇಕ ಗೃಹಿಣಿಯರು ಜೆಸ್ಕಾಂ ಅಲಕ್ಷತನಕ್ಕೆ ಶಪಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಜೆಸ್ಕಾಂ ಕಾರ್ಯವೈಖರಿ ಸುಧಾರಿಸಲಿ
ಸಂಜೆ ಕರೆಂಟ್ ಗಾಯಬ್ ಆದರೆ ತೀರಿತು, ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿ ಮಧ್ಯರಾತ್ರಯೋ, ಬೆಳಗಾ ಮುಂಜಾನೆಯೋ ಕರೆಂಟ್ ಬರುತ್ತದೆ. ಅಷ್ಟೊತ್ತಿಗೇ ನಾವು ಕರೆಂಟ್‌ಗಾಗಿ ಕಾದು ಸುಸ್ತಾಗಿ ನಿದ್ರೆಗೆ ಜಾರುತ್ತವೆ. ಸೊಳ್ಳೆ ಕಡಿಸಿಕೊಳ್ಳುತ್ತ ಮಲಗುತ್ತಿದ್ದೇವೆ. ಅನೇಕರಿಗೆ ಅನಾರೋಗ್ಯ ಕಾಡುತ್ತಿದೆ. ಇದಕ್ಕೆಲ್ಲ ಜೆಸ್ಕಾಂ ಅಲಕ್ಷತನವೇ ಕಾರಣವೆಂದು ರಿಂಗ್ ರಸ್ತೆಯ ದೇವ ನಗರ, ಕುಬೇರ ನಗರ, ನ್ಯೂ ಔಝಾ ಬಡಾವಣೆಯ ಜನ ದೂರುತ್ತಿದ್ದಾರೆ.ಪದೇ ಪದೇ ವಿದ್ಯುತ್ ಕಡಿತದಿಂದ ಆಗುತ್ತಿರುವ ತೊಂದರೆ, ತಾಪತ್ರಯಗಳ ಬಗ್ಗೆ ಜೆಸ್ಕಾಂಗೆ ಬಿಸಿ ಮುಟ್ಟಿಸುವ ಕೆಲಸವಾಗಬೇಕಿದೆ ಎನ್ನುವ ಜನ ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಜಿಲ್ಲಾಡಳಿತದವರೂ ಇತ್ತ ಗಮನ ಹರಿಸಬೇಕು. ಮಳೆಗಾಲದಲ್ಲಿ ಮಳೆ ಬರೋದು ಸಹಜ. ಹಾಗಂತ ಪವರ್ ಕಟ್ ಮಾಡಲೇಬೇಕೆ? ಮಳೆಗಾಳಿಗೂ ಜಪ್ಪೆನ್ನದಂತೆ ವ್ಯವಸ್ಥೆ ಗಟ್ಟಿಗೊಳಿಸಿರಬೇಕು. ಅದ್ಯಾವುದೂ ಮಾಡದೆ ಮಳೆ ಹನಿ ಉದುರುತ್ತಿದ್ದಂತೆಯೇ ಕರೆಂಟ್ ತೆಗೆದು ಜನರಿಗೆ ಗೋಳಾಡಿಸುವ ಜೆಸ್ಕಾಂ ಕಾರ್ಯವೈಖರಿಯಂತೂ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದೊಂದು ವಾರದಿಂದ ಹೆಚ್ಚಿರುವ ಕರೆಂಟ್ ಕಣ್ಣಾಮುಚ್ಚಲೆಗೆ ನೊಂದಿರುವ ನಗರವಾಸಿಗಳು, ವರ್ತಕರು, ಶಾಲೆ, ಕಾಲೇಜಿನ ಮಕ್ಕಳು, ಮನ ಮಂದಿ ಎಲ್ಲರೂ ವರ್ತಕರು, ಸಣ್ಣ ವ್ಯಾಪಾರಿಗಳು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ಎಲ್ಲಕ್ಕಿಂತ ಮೊದಲು ಸಂಕಷ್ಟದಲ್ಲಿ ಸಂಪರ್ಕಕ್ಕೆ ಸಿಗದೆ ಸದಾ ಎಂಗೇಜ್ ಇರುವ 1912 ವ್ಯವಸ್ಥೆಗೆ ಬಿಸಿ ಮುಟ್ಟಿಸಬೇಕು, ನಂತರ ಜೆಸಕಂಗೆ ಚುರುಕು ಮುಟ್ಟಿಸೋಣ ಎಂದು ಸಿದ್ಧರಾಗುತ್ತಿದ್ದಾರೆ.