ಮಾನವರಿಗೆ ಪಾಪದಿಂದ ವಿಮುಕ್ತಿಗೊಳಿಸಿ, ದೇವರ ಸ್ವರ್ಗಕ್ಕೆ ತೆರಳಲು ಯೇಸು ಕಿಸ್ತರ ಕೊಡುಗೆ ಅಪಾರ. ಮನುಷ್ಯ ಮನುಷ್ಯನ ನಡುವೆ ಅನೋನ್ಯತೆ, ಸಂತೋಷದಿಂದ ಬದುಕಲು, ಶಾಂತಿ, ಸಮಾಧಾನ ಭಿತ್ತಲು ಜಗತ್ತಿಗೆ ದೇವಮಾನವನಂತೆ ಅಪ್ಪಳಿಸಿದವರು ಯೇಸುಪ್ರಭುಗಳು.

ಯುನೈಟೆಡ್ ಕ್ರಿಶ್ಚಿಯನ್ ಪೋರಂನಿಂದ ಕ್ರಿಸ್ಮಸ್ ರ್‍ಯಾಲಿ- 2025 ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಮಾನವ ಜನಾಂಗ ಉದ್ಧಾರಗೊಳಿಸಲು, ಪ್ರೀತಿ, ಐಕ್ಯತೆ ಸಾರಲು ಹಾಗೂ ದ್ವೇಷ, ಹಗೆತನವನ್ನು ಹೋಗಲಾಡಿಸಲು ಭೂಲೋಕದಲ್ಲಿ ಸಾವಿರಾರು ವರ್ಷಗಳ ಮೊದಲೇ ಯೇಸು ಕಿಸ್ತರು ಜನಿಸಿ ಮನುಷ್ಯ ಕುಲಕ್ಕೆ ಸಂದೇಶ ನೀಡಿದವರು ಎಂದು ಹಾಸನ - ಚಿಕ್ಕಮಗಳೂರು ಕ್ಯಾಥೋಲಿಕ್ ಧರ್ಮಾಧ್ಯಕ್ಷ ಡಾ. ಅಂತೋಣಿಸ್ವಾಮಿ ಹೇಳಿದರು.

ನಗರದ ಆಜಾದ್‌ ಪಾರ್ಕ್ ವೃತ್ತದಲ್ಲಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಪೋರಂ ಫಾರ್ ಹ್ಯೂಮನ್ ರೈಟ್ಸ್ ಚಿಕ್ಕಮಗಳೂರು ವಲಯದಿಂದ ಆಯೋಜಿಸಿದ್ಧ ಕ್ರಿಸ್ಮಸ್ ರ್‍ಯಾಲಿ- 2025 ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಅವರು ಮಾತನಾಡಿದರು.

ಮಾನವರಿಗೆ ಪಾಪದಿಂದ ವಿಮುಕ್ತಿಗೊಳಿಸಿ, ದೇವರ ಸ್ವರ್ಗಕ್ಕೆ ತೆರಳಲು ಯೇಸು ಕಿಸ್ತರ ಕೊಡುಗೆ ಅಪಾರ. ಮನುಷ್ಯ ಮನುಷ್ಯನ ನಡುವೆ ಅನೋನ್ಯತೆ, ಸಂತೋಷದಿಂದ ಬದುಕಲು, ಶಾಂತಿ, ಸಮಾಧಾನ ಭಿತ್ತಲು ಜಗತ್ತಿಗೆ ದೇವಮಾನವನಂತೆ ಅಪ್ಪಳಿಸಿದವರು ಯೇಸುಪ್ರಭುಗಳು ಎಂದು ಹೇಳಿದರು.

ಯೇಸು ಕಿಸ್ತರು ಸಾಕಷ್ಟು ನೋವುಗಳ ನಡುವೆ ಮನುಷ್ಯನಿಗೆ ಸಾತ್ವಿಕ ಜೀವನಕ್ಕೆ ಮಾರ್ಗ ತೋರಿದವರು. ಅಲ್ಲದೇ ಸಮಾಧಿಯಿಂದ ಪುನರ್‍ಜೀವಿಸಿ ನಿಂತ ಯೇಸು ದೇವನಿಗೆ ಮಾನವ ಸಂಕುಲವು ಚಿರಋಣಿಯಾಗಬೇಕು. ಕ್ರಿಸ್ಮಸ್ ಇಲ್ಲದಿದ್ದರೆ, ಯೇಸುವಿಲ್ಲದಂತೆ. ಹೀಗಾಗಿ ಈ ಹಬ್ಬವನ್ನು ಸಂತೋಷದಿಂದ ಆಚರಿಸಬೇಕು ಎಂದರು.

ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕ್ರಿಸ್ಮಸ್‌ನ್ನು ಸಂಭ್ರಮದಿಂದ ಆಚರಿಸುವರು. ಯೇಸುವಿನ ಸಂದೇಶವನ್ನು ಮನುಷ್ಯ ಹೃದಯದಲ್ಲಿ ನೆಲೆಸುವ ಮೂಲಕ ಇತರೆ ಹೃದಯಕ್ಕೆ ತಲುಪಿಸುವ ಕಾರ್ಯ ಮಾಡಬೇಕು. ಕ್ರೈಸ್ತರು ಸೇರಿದಂತೆ ಪ್ರತಿ ಮನುಷ್ಯನಲ್ಲಿ ದೇವರು ನೆಲೆಸಿದ್ದು ಕಲ್ಮಶ ತುಂಬಿರುವ ಮನಸ್ಸಿನಲ್ಲಿ ಒಳಿತಿನ ಸಂದೇಶ ರವಾನಿಸಬೇಕು ಎಂದು ತಿಳಿಸಿದರು.

ಧರ್ಮಗುರು ಶಾಂತರಾಜ್ ಮಾತನಾಡಿ, ಕಿಸ್ಮಸ್ ಯಾವುದೇ ಒಂದು ಜಾತಿ, ಊರಿಗೆ ಸೇರಿದ ಹಬ್ಬವಲ್ಲ, ಜಾಗತಿಕ ಹಬ್ಬ. ಜಗತ್ತಿನ ನಾನಾ ಮೂಲೆಗಳಲ್ಲಿ ಈ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ. ಈ ಸಂಭ್ರಮ ಕೇವಲ ಕೇಕ್ ಕತ್ತರಿಸುವುದಲ್ಲ. ಪ್ರೀತಿ, ಶಾಂತಿ ಸಾರುವ ಕಿಸ್ಮಸ್ ಒಂದು ಬೆಳಕಿನ ಹಬ್ಬವೆಂದು ಬಣ್ಣಿಸಿದರು.

ವೃತ್ತದಲ್ಲಿ ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಪೋರಂ ಫಾರ್ ಹ್ಯೂಮನ್‌ ರೈಟ್ಸ್‌ನ ಕಾರ್ಯದರ್ಶಿ ಕೆ.ಕೆ.ವರ್ಗೀಸ್ ಮಾತನಾಡಿ, ಎರಡೂವರೆ ಸಾವಿರ ವರ್ಷಗಳ ಹಿಂದೆ ಮಾನವರ ಪಾಪ, ದ್ರೋಹ ಪರಿಹರಿಸಲು ಯೇಸು ಜನಿಸಿದರು. ಪಾಪದ ಕಾರ್ಯದಿಂದ ದೇವರ ಮಹಿಮೆ ಕಳೆದುಕೊಂಡಿದ್ದು ಆ ಮಹಿಮೆ ಪುನರ್ ಜೀವಿಸಲು ಧರೆಗಿಳಿದ ಜೊತೆಗೆ ಅಶುದ್ಧ ಮನಸ್ಸಿಗೆ ದೇವ ಸಂದೇಶವನ್ನು ಯೇಸು ನೀಡಿದವರು ಎಂದು ಹೇಳಿದರು.

ಮಾನವರು ದೇವರ ಸಂದೇಶ ಪಾಲಿಸಲು ಮತ್ತು ಪಾಪ, ಅಪರಾಧ ಹಾಗೂ ದ್ರೋಹವನ್ನು ಹೊರಹಾಕಲು ಮೊದಲು ಯೇಸುವನ್ನು ನಂಬಬೇಕು. ನಿತ್ಯಜೀವನದಲ್ಲಿ ಯೇಸುವಿನ ಸಂದೇಶವು ಬದುಕಿನ ಮಾರ್ಗಕ್ಕೆ ಸಹಾಯವಾಗುವ ಜೊತೆಗೆ ಯೇಸುವಿನ ಮಹಿಮೆ ಎಲ್ಲರಲ್ಲೂ ಸುಖ, ಶಾಂತಿ ನೆಲೆಸಲು ಕಾರಣವಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಯೇಸು ಶಿಲಬೆ, ಪುನರುತ್ಥಾನ ಯೇಸುವಿನ ಕಮಾನುಗಳು ಸೇರಿದಂತೆ ಕ್ರಿಶ್ಚಿಯನ್ ಬಾಂಧವರು ನಗರದ ತಾಲೂಕು ಕಚೇರಿಯಿಂದ ಚಂದ್ರಶೇಖರ್‌ ಆಜಾದ್ ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿ ಯೇಸುವಿನ ಸಂದೇಶವನ್ನು ದಾರಿಯುದ್ಧಕ್ಕೂ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಹ್ಯೂಮನ್‌ ರೈಟ್ಸ್‌ನ ಕಾರ್ಯಾಧ್ಯಕ್ಷ ಫಾದರ್ ರಾಯಪ್ಪ, ಖಜಾಂಚಿ ಜೇಮ್ಸ್ ಡಿಸೋಜಾ, ಸಹ ಕಾರ್ಯದರ್ಶಿ ಜೇಮಿನಿ ಜಾರ್ಜ್, ನಿರ್ದೇಶಕ ಶ್ರೀಧರ್ ಸ್ವಾಮಿಯಲ್, ಸಂಜು ಉಪಸ್ಥಿತರಿದ್ದರು.

ಪೋಟೋ ಫೈಲ್ ನೇಮ್‌ 21 ಕೆಸಿಕೆಎಂ 2

ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ಧ ಕ್ರಿಸ್ಮಸ್ ರ್‍ಯಾಲಿ - 2025 ಕಾರ್ಯಕ್ರಮವನ್ನು ಡಾ. ಅಂತೋಣಿಸ್ವಾಮಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

----------------------------------------