ಏಸುಕ್ರಿಸ್ತ ಜಗತ್ತು ಕಂಡ ಮಹಾನ್‌ ದಾರ್ಶನಿಕ

| Published : Dec 26 2023, 01:31 AM IST

ಸಾರಾಂಶ

ದಾರ್ಶನಿಕರಾದ ಏಸುಕ್ರಿಸ್ತರ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸೋಣ. ಎಲ್ಲ ಧರ್ಮಗ್ರಂಥಗಳಾದ ಕುರಾನ್, ಬೈಬಲ್, ಭಗವದ್ಗೀತೆ, ವೇದಗಳಲ್ಲಿಯೂ ಸೌಹಾರ್ದತೆಯ ಜೀವನವನ್ನು ಬೋಧಿಸಿರುತ್ತಾರೆ.

ಹೊಸಪೇಟೆ: ವಿಜಯನಗರ ಜಿಲ್ಲೆಯ ವಿವಿಧೆಡೆ ಕ್ರೈಸ್ತರು ಸಂಭ್ರಮದಿಂದ ಕ್ರಿಸ್‌ಮಸ್‌ ಹಬ್ಬವನ್ನು ಸೋಮವಾರ ಆಚರಿಸಿದರು. ಸೋಮವಾರ ಬೆಳಗಿನ ಜಾವ ಎರಡು ಗಂಟೆ ಹೊತ್ತಿಗೆ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡಿದರು.

ನಗರದ ಎಂ.ಜೆ. ನಗರದ ಸಮಾಧಾನ ಸುವಾರ್ತಾ ಮಂದಿರದಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಎಚ್ಎನ್ಎಫ್‌ ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ದಾರ್ಶನಿಕರಾದ ಏಸುಕ್ರಿಸ್ತರ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸೋಣ. ಎಲ್ಲ ಧರ್ಮಗ್ರಂಥಗಳಾದ ಕುರಾನ್, ಬೈಬಲ್, ಭಗವದ್ಗೀತೆ, ವೇದಗಳಲ್ಲಿಯೂ ಸೌಹಾರ್ದತೆಯ ಜೀವನವನ್ನು ಬೋಧಿಸಿರುತ್ತಾರೆ. ದೇವನೊಬ್ಬ ನಾಮ ಹಲವು ಎಂಬಂತೆ ಸಕಲ ಜೀವರಾಶಿಗಳಿಗೂ ಸೃಷ್ಟಿಕರ್ತನೊಬ್ಬನೇ ಆಗಿರುತ್ತಾನೆ. ಆದರೆ ಭೂಮಿಯ ಮೇಲೆ ಧರ್ಮದ ಉದ್ಧಾರಕ್ಕಾಗಿ ಸಮಯಕ್ಕೆ ತಕ್ಕಂತೆ ದಾರ್ಶನಿಕರು, ಪ್ರವಾದಿಗಳು ಬಂದು ಧಾರ್ಮಿಕವಾಗಿ ಬೋಧನೆಗಳನ್ನು ತಿಳಿಸಿರುತ್ತಾರೆ. ಅವರೆಲ್ಲರ ಧ್ಯೇಯ, ಉದ್ದೇಶಗಳು ಸಮಾಜದಲ್ಲಿ ಪ್ರೀತಿ, ಪ್ರೇಮ ಶಾಂತಿಯ ಸ್ಥಾಪನೆಯೇ ಆಗಿರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಎಲ್ಲ ರಕ್ತದಾನಿಗಳಿಗೂ ಪ್ರಮಾಣಪತ್ರಗಳನ್ನು ವಿತರಿಸಿದರು.

ನಿವೃತ್ತ ಉಪನ್ಯಾಸಕ ಚಂದ್ರಶೇಖರ್ ಶಾಸ್ತ್ರಿ ಮಾತನಾಡಿ, ಆರೋಗ್ಯದ ಕುರಿತು ಯಾವುದೇ ಭಯ ಬೇಡ, ಕಾರಣ ಸಾಕ್ಷಿ ನಾನೇ ಆಗಿರುತ್ತೇನೆ. ಇಲ್ಲಿಯವರೆಗೆ 107 ಬಾರಿ ರಕ್ತದಾನವನ್ನು ಮಾಡಿದ್ದೇನೆ ಎಂದರು. ಚರ್ಚ್ ಫಾದರ್ ಸ್ಯಾಮ್ಸನ್ ಮಾತನಾಡಿದರು. ನಗರಸಭೆ ಸದಸ್ಯ ಎಚ್.ಕೆ. ಮಂಜುನಾಥ್‌ ಹಾಗೂ ಚರ್ಚ್‌ನ ಪದಾಧಿಕಾರಿಗಳು ಇದ್ದರು.

ಮಹಿಳಾ ಕಾಂಗ್ರೆಸ್‌ನಿಂದ ಆಚರಣೆ:

ನಗರದಲ್ಲಿ ಮಹಿಳಾ ಕಾಂಗ್ರೆಸ್‌ನಿಂದ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಯಿತು. ನಗರದಲ್ಲಿ ರಂಗೋಲಿ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳಾ ಕಾಂಗ್ರೆಸ್‌ನ ತಾಧ್ಕಾಧ್ಯಕ್ಷೆ ಯೋಗಲಕ್ಷ್ಮಿ ನೇತೃತ್ವದಲ್ಲಿ ಕ್ರಿಸ್‌ಮಸ್‌ ಹಬ್ಬ ಆಚರಣೆ ಮಾಡಲಾಯಿತು.

ವಿವಿಧೆಡೆ ಆಚರಣೆ:

ನಗರದ ಹೂವಿನ ಮಾರುಕಟ್ಟೆ ಬಳಿ ಚರ್ಚ್‌, ಲಿಟ್ಲ್‌ಫ್ಲವರ್‌ ಶಾಲೆ ಬಳಿ ಚರ್ಚ್, ಕಾಲೇಜ್‌ ರಸ್ತೆ ಚರ್ಚ್‌, ಡ್ಯಾಂ ರಸ್ತೆ ಚರ್ಚ್‌, ಅನಂತಶಯನ ಗುಡಿ ಗ್ರಾಮದ ಬಳಿಯ ಚರ್ಚ್‌ ಸೇರಿದಂತೆ ನಗರದ ವಿವಿಧೆಡೆ ಇರುವ ಚರ್ಚ್‌ಗಳಲ್ಲೂ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿ ಕ್ರಿಸ್‌ಮಸ್‌ ಹಬ್ಬ ಆಚರಣೆ ಮಾಡಿದರು. ಇನ್ನೂ ಜಿಲ್ಲೆಯ ಆರು ತಾಲೂಕುಗಳಲ್ಲೂ ಕ್ರಿಸ್‌ಮಸ್‌ ಹಬ್ಬ ಆಚರಿಸಲಾಯಿತು.