ಸಾರಾಂಶ
ಕ್ರೈಸ್ತ ಬಾಂಧವರಿಂದ ಸಂಭ್ರಮ ಕ್ರಿಸ್ ಮಸ್ ಆಚರಣೆ । ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಪರಸ್ಪರ ಶುಭಾಷಯ ವಿನಿಮಯ
ಕನ್ನಡಪ್ರಭ ವಾರ್ತೆ ರಾಮನಗರಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು. ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ತಾಲೂಕುಗಳಲ್ಲಿನ ಚರ್ಚ್‌ಗಳಲ್ಲಿ ಕ್ರೈಸ್ತ ಬಾಂಧವರು ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ರಾಮನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಲೂರ್ದು ಮಾತಾ ಚರ್ಚ್, ಬಿಡದಿ ಬಳಿಯ ಸುವಿಶೇಷ ಆಶ್ರಮದ ಸಮಸ್ತ ದೇಶಗಳ ಪ್ರಾರ್ಥನಾ ಮಂದಿರದಲ್ಲಿ ಕ್ರಿಸ್ ಮಸ್ ಆಚರಿಸಲಾಯಿತು. ಭಾನುವಾರ ಮಧ್ಯರಾತ್ರಿಯಿಂದಲೇ ವಿಶೇಷ ಪ್ರಾರ್ಥನೆಗಳನ್ನು ನಡೆಸುವ ಮೂಲಕ ಏಸುಕ್ರಿಸ್ತ ಹುಟ್ಟಿದ ದಿನವನ್ನು ಸಮುದಾಯದವರು ಆಚರಿಸಿದರು.ಭಾನುವಾರ ರಾತ್ರಿ ಬಾಲ ಏಸುವಿನ ಮೂರ್ತಿಯನ್ನು ಮೆರವಣಿಗೆಯ ಮೂಲಕ ತಂದು ಭತ್ತದ ಹುಲ್ಲು, ಲಾಳದ ಕಡ್ಡಿ, ಮರಳು ಮತ್ತಿತರ ವಸ್ತುಗಳನ್ನು ಬಳಸಿ ಕ್ರಿಸ್ತನಿಗಾಗಿ ಮೊದಲೇ ನಿರ್ಮಿಸಿದ್ದ ತೊಟ್ಟಿಲಲ್ಲಿ (ಗೋದಲಿ) ಪ್ರತಿಷ್ಠಾಪಿಸಿ, ಪ್ರಾರ್ಥನೆ, ಪೂಜೆಯನ್ನು ಮಾಡಿ ಬಾಲ ಏಸುವನ್ನು ಬರಮಾಡಿಕೊಳ್ಳಲಾಗಿತ್ತು.
ಹೊಸ ಬಟ್ಟೆ ತೊಟ್ಟು ಕ್ರಿಶ್ಚಿಯನ್ ಬಾಂಧವರು ಸೋಮವಾರ ಬೆಳಗ್ಗೆ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನೆರೆಹೊರೆಯವರಿಗೆ ಸಿಹಿ ತಿನ್ನಿಸಿ, ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.ತಮ್ಮ ಜೀವನಗಳಲ್ಲಿ ಬೆಳಕಾಗಿ ಬಂದ ಕ್ರಿಸ್ತನನ್ನು ಸಮುದಾಯದ ಸದಸ್ಯರು ಚರ್ಚ್‌ನಲ್ಲಿ ಮೋಂಬತ್ತಿ ಬೆಳಗಿ ತಮ್ಮ ಇಷ್ಟಾರ್ಥವನ್ನು ನೆರೆವೇರಿಸುವಂತೆ ಪ್ರಾರ್ಥಿಸಿದರು. ವಿಶೇಷ ಗೀತೆಗಳನ್ನು ಹಾಡುವ ಮೂಲಕ ಶ್ರದ್ಧಾ ಭಕ್ತಿಯನ್ನು ಮೆರೆದರು.
ಚರ್ಚ್‌ನ ಆವರಣದಲ್ಲಿ ರಚಿಸಲಾಗಿದ್ದ ಗೋದಲಿ ಸಾರ್ವಜನಿಕ ಗಮನ ಸೆಳೆಯಿತು. ಕ್ರಿಸ್ತನ ಜನನ ವೃತ್ತಾಂತವನ್ನು ಬಿಂಬಿಸುವ ಗೊಂಬೆಗಳು ಅಲ್ಲಿದ್ದವು. ಬಣ್ಣ ಬಣ್ಣದ ನಕ್ಷತ್ರಗಳ ಮಿಂಚು, ಬಲೂನ್ ಗಳ ಚಿತ್ತಾರ, ಹಚ್ಚ ಹಸಿರಿನ ಕ್ರಿಸ್ ಮಸ್ ಟ್ರೀಗಳು, ವಿಭಿನ್ನ ವಿನ್ಯಾಸದ ಗೋದಲಿ, ಸಾಂತಾಕ್ಲಾಸ್ ಪ್ರತಿಬಿಂಬ, ಶುಭ ಸಂಕೇತದ ಗಂಟೆಗಳ ಮೂಲಕ ಸುವಿಶೇಷ ಪ್ರಾರ್ಥನಾ ಮಂದಿರ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿತ್ತು.ಕ್ರಿಸ್ ಮಸ್ ಹಬ್ಬ ಕ್ರೈಸ್ತ ಸಮುದಾಯವರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಹಿಂದೂಗಳೂ ಸಹ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆಯಲ್ಲಿ ಭಾಗಿಯಾಗಿ ಧಾರ್ಮಿಕ ಭಾವೈಕ್ಯತೆ ಮೆರೆದರು. ಅಲ್ಲದೇ ಸಮುದಾಯವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿ, ಅವರೊಟ್ಟಿಗೆ ಮನೆಗಳಿಗೆ ಭೇಟಿ ನೀಡಿ, ಸಿಹಿ ಪದಾರ್ಥ, ತಾಜ ಕೇಕ್, ಘಮಘಮಿಸುವ ಬಿರಿಯಾನಿ ಸೇರಿದಂತೆ ಭಕ್ಷ್ಯ ಭೋಜನ ಸವಿದರು.
ಕನಕಪುರ ವರದಿ:ನಗರದ ಸಂತಮೇರಿ ಚರ್ಚ್ ನಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ರಾತ್ರಿ ಯಿಂದಲೇ ಕ್ರೈಸ್ತ ಬಾಂಧವರು ಚರ್ಚ್ ಗೆ ಭೇಟಿ ನೀಡಿ ಯೇಸು ಕ್ರಿಸ್ತನ ಭಕ್ತಿ ಗೀತೆಗಳನ್ನು ಹಾಡಿ ಇಡೀ ಜಗತ್ತಿಗೇ ಒಳಿತನ್ನು ಮಾಡುವಂತೆ ಪ್ರಾರ್ಥಿಸಿದರು. ಚರ್ಚಿನ ಆವರಣದಲ್ಲಿ ಏಸುಕ್ರಿಸ್ತನ ಬಾಲಾ ಲೀಲೆಯ ರೂಪ ಆಕರ್ಷಣಿಯವಾಗಿತ್ತು.----
25ಕೆಆರ್ ಎಂಎನ್ 1,2.ಜೆಪಿಜಿ1.ರಾಮನಗರದ ಲೂರ್ದು ಮಾತಾ ಚರ್ಚ್ ನ ಆವರಣದಲ್ಲಿ ಗೋದಲಿ ಪ್ರತಿಷ್ಠಾಪಿಸಿರುವುದು.
2.ಕನಕಪುರದ ಕೆನರಾ ಬ್ಯಾಂಕ್ ರಸ್ತೆಯಲ್ಲಿರುವ ಚರ್ಚ್ ಒಳಗಿನ ದೃಶ್ಯ----