ಸಾರಾಂಶ
ಹುಬ್ಬಳ್ಳಿ: ನಗರದ ಜ್ಯುವಲರ್ಸ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಮಹಾನಗರ ಪೊಲೀಸರು, ಆರೋಪಿಗಳಿಂದ ₹77 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಗ್ಯಾಸ್ ಕಟರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯನ್ನು ಶ್ಲಾಘಿಸಿದರು.ಕಳೆದ ಜು. 16ರಂದು ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಮೇಶಭವನದ ಎದುರುಗಡೆ ಇರುವ ಭುವನೇಶ್ವರಿ ಜ್ಯುವೆಲರ್ಸ್ ಕಳ್ಳತನವಾಗಿರುವ ಕುರಿತು ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ಫರಾನ್ ಶೇಖ್, ಮುಖೇಶ್ ಉರ್ಫ ರಾಜು ಯಾದವ್, ಫಾತಿಮಾ ಶೇಖ್, ಅಪ್ತಾಬಅಹ್ಮದ್ ಶೇಖ್, ತಲತ್ ಶೇಖ್ ಎಂಬುವರನ್ನು ಬಂಧಿಸಿದ್ದು, ಇನ್ನುಳಿದ ಮೂವರು ಪ್ರಮುಖ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದರು.
ಆರೋಪಿ ಕಾಲಿಗೆ ಗುಂಡುಫರಾನ್ ಶೇಖ್ ಮೇಲೆ ಈಗಾಗಲೇ 15 ಪ್ರಕರಣಗಳು ಇದ್ದು, ಫಾತಿಮಾ ಶೇಖ್ ಮೇಲೆ 2 ಪ್ರಕರಣ ಸೇರಿ ಆರೋಪಿಗಳ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ. ಈ ಹಿಂದೆ ಈ ಪ್ರಕರಣದ ಪ್ರಮುಖ ಆರೋಪಿ ಫರಾನ್ ಶೇಖ್ ಎಂಬಾತನನ್ನು ಬಂಧಿಸಿ ಹುಬ್ಬಳ್ಳಿಗೆ ಕರೆತಂದ ವೇಳೆ ಆರೋಪಿಯು ಇನ್ನುಳಿದವರ ಮಾಹಿತಿ ನೀಡುವುದಾಗಿ ಹೇಳಿ ಹುಬ್ಬಳ್ಳಿಯ ಹೊರವಲಯದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಆರೋಪಿ ಫರಾನ್ ಶೇಖ್ ಕಾಲಿಗೆ ಗುಂಡುಹಾರಿಸಿ ಪುನಃ ಬಂಧಿಸಿ ತನಿಖೆಗೊಳಪಡಿಸಿದ್ದರು ಎಂದು ವಿವರಿಸಿದರು.
ಪ್ರಕರಣ ಬೇಧಿಸಲು ಕೇಶ್ವಾಪುರ ಪೊಲೀಸ್ ಠಾಣೆ, ಗೋಕುಲ್ ರೋಡ್ ಹಾಗೂ ಕಮರಿಪೇಟ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಗಳ ನೇತೃತ್ವದಲ್ಲಿ 3 ತಂಡ ರಚಿಸಲಾಗಿತ್ತು, ಸುಮಾರು ಸಿಸಿ ಟಿವಿ ದೃಶ್ಯಾವಳಿ, ಆರೋಪಿಗಳ ಚಲನವಲನ ಹಾಗೂ ಮಾಹಿತಿ ಕಲೆ ಹಾಕಿ 20 ದಿನಗಳ ಕಾಲ ಮುಂಬೈ ನಗರದಲ್ಲಿ ಇದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದರು.₹55 ಲಕ್ಷ ಮೌಲ್ಯದ 780 ಗ್ರಾಂ ಬಂಗಾರ, ₹17 ಲಕ್ಷ ಮೌಲ್ಯದ 23.3 ಕೆಜಿ ಬೆಳ್ಳಿ ಹಾಗೂ ₹10 ಸಾವಿರ ನಗದು ಮತ್ತು ಕಳ್ಳತನಕ್ಕೆ ಬಳಸಿದ ₹5 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ ಎಂದರು.
ಬಂಗಾರದ ಅಂಗಡಿ ಮಾಲೀಕರು ತಮ್ಮ ಅಂಗಡಿಗಳ ಆಭರಣ ಹಾಗೂ ಅಂಗಡಿ ಸುರಕ್ಷೆತೆಗಾಗಿ ಇತ್ತೀಚಿಗೆ ವಿವಿಧ ತಂತ್ರಜ್ಞಾನ ಹಾಗೂ ವಿವಿಧ ಲಾಕರ್ ಗಳು ಬಂದಿದ್ದು, ಅವುಗಳ ಬಳಕೆಗೆ ಆದ್ಯತೆ ನೀಡಬೇಕು. ಅಗತ್ಯ ಕಾವಲುಗಾರರನ್ನು ನೇಮಿಸಿಕೊಂಡು ಎಚ್ಚರ ವಹಿಸಬೇಕು ಎಂದರು.ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್, ಎಸಿಪಿಗಳಾದ ಯು.ಬಿ. ಚಿಕ್ಕಮಠ, ಶಿವಪ್ರಕಾಶ ನಾಯ್ಕ, ಕೇಶ್ವಾಪುರ ಠಾಣೆ ಇನ್ಸಪೆಕ್ಟರ್ ಕೆ.ಎಸ್. ಹಟ್ಟಿ, ಗೋಕುಲ್ ರೋಡ್ ಇನ್ಸಪೆಕ್ಟರ್ ಪ್ರವೀಣ್ ನೀಲಮ್ಮಣ್ಣವರ, ಕಮರಿಪೇಟ್ ಇನ್ಸಪೆಕ್ಟರ್ ಮಹಾಂತೇಶ ಹೂಳಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಇದ್ದರು.