ದೇಶದ ಆರ್ಥಿಕತೆಯಲ್ಲಿ ಶೇ. 7ರಷ್ಟು ಉದ್ಯಮದ ಪಾಲಿದೆ. ಶುದ್ಧ ಚಿನ್ನಾಭರಣ ವಿಷಯದಲ್ಲಿ ಗ್ರಾಹಕರಿಗೆ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕ ಸೇವೆ ನೀಡಬೇಕು ಎಂದು ಆಲ್ ಇಂಡಿಯಾ ಜೆಮ್ ಆ್ಯಂಡ್ ಜುವೆಲರಿ ಡೊಮೆಸ್ಟಿಕ್ ಕೌನ್ಸಿಲ್ ಉಪಾಧ್ಯಕ್ಷ ಅವಿನಾಶ ಗುಪ್ತಾ ಹೇಳಿದರು.
ಹುಬ್ಬಳ್ಳಿ: ದೇಶದ ಆರ್ಥಿಕತೆಯಲ್ಲಿ ಶೇ. 7ರಷ್ಟು ಉದ್ಯಮದ ಪಾಲಿದೆ. ಶುದ್ಧ ಚಿನ್ನಾಭರಣ ವಿಷಯದಲ್ಲಿ ಗ್ರಾಹಕರಿಗೆ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕ ಸೇವೆ ನೀಡಬೇಕು ಎಂದು ಆಲ್ ಇಂಡಿಯಾ ಜೆಮ್ ಆ್ಯಂಡ್ ಜುವೆಲರಿ ಡೊಮೆಸ್ಟಿಕ್ ಕೌನ್ಸಿಲ್ ಉಪಾಧ್ಯಕ್ಷ ಅವಿನಾಶ ಗುಪ್ತಾ ಹೇಳಿದರು.
ನಗರದ ಗೋಕುಲ ರಸ್ತೆ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ಸ್ಟೇಟ್ ಜುವೆಲರ್ಸ್ ಫೆಡರೇಶನ್ ಬೆಂಗಳೂರು ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಜುವೆಲರ್ಸ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಹೊಸ ಚಿನ್ನದ ಹಣ ಗಳಿಕೆ ಯೋಜನೆಯನ್ನು (ಗೋಲ್ಡ್ ಮಾನಿಟೈಜೇಶನ್ ಸ್ಕೀಮ್) ಜಾರಿಗೊಳಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದು, ಈ ಯೋಜನೆಯು ಸಂಕಷ್ಟ ಸ್ಥಿತಿಯಲ್ಲಿರುವ ಜುವೆಲರಿ ಉದ್ಯಮಕ್ಕೆ ವರವಾಗಲಿದೆ. ಗೋಲ್ಡ್ ಮಾನಿಟೈಜೇಶನ್ ಸ್ಕೀಮ್ ಕುರಿತಾಗಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಅಂತಿಮ ಹಂತದಲ್ಲಿದೆ. ಈ ಯೋಜನೆಯಲ್ಲಿ ಭಾಗವಹಿಸಲು ಆಭರಣ ವ್ಯಾಪಾರಿಗಳಿಗೆ ಅವಕಾಶ ದೊರೆಯುತ್ತದೆ ಎಂದರು.ಕರ್ನಾಟಕ ಸ್ಟೇಟ್ ಜುವೆಲರ್ಸ್ ಫೆಡರೇಶನ್ ಅಧ್ಯಕ್ಷ ಡಾ. ಚೇತನಕುಮಾರ ಮೆಹ್ತಾ ಮಾತನಾಡಿ, ಜುವೆಲರಿ ಉದ್ಯಮ ಕಠಿಣ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಆದರೆ, ನಾವೆಲ್ಲ ಒಗ್ಗಟ್ಟಾಗಿ ಸಾಗುವುದರಿಂದ ಎಂಥ ಸವಾಲುಗಳನ್ನು ಎದುರಿಸಬಹುದು. ಇದರಿಂದ ಉದ್ಯಮ ಬೆಳೆಯಲು ಸಾಧ್ಯ ಎಂದರು.
ಆಲ್ ಇಂಡಿಯಾ ಜೆಮ್ ಆ್ಯಂಡ್ ಜುವೆಲರಿ ಡೊಮೆಸ್ಟಿಕ್ ಕೌನ್ಸಿಲ್ ಹಿಂದಿನ ಅಧ್ಯಕ್ಷ ನಿತಿನ ಖಂಡೇಲವಾಲ ಮಾತನಾಡಿ, ಗ್ರಾಹಕರೇ ನಮ್ಮ ಜೀವಾಳ. ನಮ್ಮ ಹಿನ್ನಡೆಗೆ ನಾವೇ ಕಾರಣ. ನಾವು ಯಾವ ದಿಕ್ಕಿನತ್ತ ಸಾಗಬೇಕು ಎಂಬುದನ್ನು ಯೋಚಿಸಬೇಕು. ವಂಶಪರಾಂಗತವಾಗಿ ಮುನ್ನಡೆಸಿಕೊಂಡು ಹೋಗುವ ಈ ಉದ್ಯಮವನ್ನು ಭವಿಷ್ಯದಲ್ಲೂ ಮುನ್ನಡೆಸಿಕೊಂಡು ಹೋಗಬೇಕಿದೆ. ಬದಲಾವಣೆಗೆ ನಾವು ಹೊಂದಿಕೊಳ್ಳಬೇಕು. ಉದ್ಯಮದಲ್ಲಿ ಹೊಸ ಕೌಶಲ್ಯಗಳೊಂದಿಗೆ ಸುಧಾರಣೆ ಕಂಡುಕೊಳ್ಳಬೇಕು ಎಂದರು.ಕರ್ನಾಟಕ ಸ್ಟೇಟ್ ಜುವೆಲರ್ಸ್ ಫೆಡರೇಶನ್ ಕಾರ್ಯದರ್ಶಿ ಮಲ್ಲಿಕಾರ್ಜುನ ಶೀಲವಂತ ಮಾತನಾಡಿದರು. ಕರ್ನಾಟಕ ರಾಜ್ಯ ಜುವೆಲ್ಲರಿ ಫೆಡರೇಶನ್ ಅಧ್ಯಕ್ಷ ಶ್ರೀಕಾಂತ ಕರಿ, ಬಿಐಎಸ್ ಸಹಾಯಕ ನಿರ್ದೇಶಕ ಪಿ.ಎನ್. ಮುರಳಿ, ಪಿ.ವಿ. ಜೋಶ್, ದಿವಾಕರ ಒಲೇಟಿ, ವಿನೋದಕುಮಾರ ಜೈನ, ಸುರೇಶ, ಸುದರ್ಶನ ಜೈನ, ರಮೇಶ ಎಸ್., ಅರವಿಂದ ದೇಶಪಾಂಡೆ, ರವಿ ಚಿಲ್ಲಾಳ, ಗೋವಿಂದ ನಿರಂಜನ, ಜೆ.ಎಚ್. ಆಚಾರ್ಯ ಸೇರಿದಂತೆ ಹಲವರಿದ್ದರು.