ಯುಪಿಎನಲ್ಲಿ ಜಾರಿಗೆ ತಂದ ಯೋಜನೆಗಳನ್ನು ಸಹ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಕೀರ್ತಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ಮನರೇಗಾಗೆ ಕೆಲ ಅಂಶಗಳನ್ನು ಸೇರಿಸಿ, ವಿಬಿ ಜಿ ರಾಮ್‌ ಜಿ ಕಾಯ್ದೆಯೆಂಬುದಾಗಿ ಹೊಸ ಯೋಜನೆಗೆ ಮಸೂದೆ ಅನುಮೋದನೆಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.

- ನಕಲಿ ಜಾಬ್ ಕಾರ್ಡ್, ಹಣ ದುರುಪಯೋಗಕ್ಕೆ ಸಂಪೂರ್ಣ ಕಡಿವಾಣ: ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯುಪಿಎನಲ್ಲಿ ಜಾರಿಗೆ ತಂದ ಯೋಜನೆಗಳನ್ನು ಸಹ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಕೀರ್ತಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ಮನರೇಗಾಗೆ ಕೆಲ ಅಂಶಗಳನ್ನು ಸೇರಿಸಿ, ವಿಬಿ ಜಿ ರಾಮ್‌ ಜಿ ಕಾಯ್ದೆಯೆಂಬುದಾಗಿ ಹೊಸ ಯೋಜನೆಗೆ ಮಸೂದೆ ಅನುಮೋದನೆಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರದಲ್ಲಿ ಹಲವಾರು ಮಹತ್ವದ ಕಾನೂನು ತಂದಿದೆಯಾದರೂ, ಅದನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ಇದೀಗ ವಿಬಿ ರಾಮ್ ಜಿ ಕಾಯ್ದೆಯಾಗಿ ಹೊಸ ಯೋಜನೆಯೇ ಬರುತ್ತಿದೆ ಎಂದರು.

ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಲು ಆಡಳಿತದಲ್ಲಿ ಅನೇಕ ಕಾನೂನು ಜಾರಿಗೊಳ್ಳುತ್ತ ಬಂದಿವೆ. 2005ರ ನರೇಗಾ ಯೋಜನೆ ಜಾರಿಗೆ ತಂದು, 2009ರಲ್ಲಿ ಮಹಾತ್ಮ ಗಾಂಧಿ ಹೆಸರನ್ನು ಅದಕ್ಕೆ ಸೇರಿಸಲಾಯಿತು. ಅದಕ್ಕಿಂತಲೂ ಹಿಂದೆ ಜವಾಹರ ಲಾಲ್ ನೆಹರು ಹೆಸರಿನಲ್ಲಿ ಜವಾಹರ್‌ ರೋಜಗಾರ್ ಯೋಜನೆ ಇತ್ತು. ಈಗ ಎನ್‌ಡಿಎ ಸರ್ಕಾರ ಹೊಸ ಅಂಶ ಸೇರ್ಪಡೆ ಮಾಡಿ, ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದೆ ಎಂದು ತಿಳಿಸಿದರು.

ಈ ಹಿಂದೆ ವರ್ಷಕ್ಕೆ 100 ದಿನ ಮಾತ್ರ ಕೆಲಸ ಕೊಡುವ ಕಾನೂನಿತ್ತು. ಅದನ್ನು 120 ದಿನಕ್ಕೆ ಹೆಚ್ಚಿಸಿ, ಕಾಯ್ದೆ ತರಲಾಗಿದೆ. ಈ ಹಿಂದಿನ ಕಾನೂನಿನಲ್ಲಿ ಉದ್ಯೋಗ ಖಾತ್ರಿ ಮಾತ್ರವೇ ಇತ್ತು. ಗ್ರಾಮೀಣ ಅಭಿವೃದ್ಧಿಗೆ ಪೂರಕ ಯೋಜನೆಗೆ ಯಾವುದೇ ಆದ್ಯತೆ ಮಾಡಿರಲಿಲ್ಲ. ಈಗ ಉದ್ಯೋಗ ಕಲ್ಪಿಸುವ ಜೊತೆಗೆ ಗ್ರಾಮಾಭಿವೃದ್ಧಿಗೆ ಪೂರಕ ಆಗುವಂತಹ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.

ಕೆರೆ, ಕಟ್ಟೆಗಳ ಅಭಿವೃದ್ಧಿ, ಮಳೆನೀರು ಕೊಯ್ಲು, ಅಂತರ್ಜಲ ಅಭಿವೃದ್ಧಿ, ಗ್ರಾಮೀಣ ಶಾಲಾ ಕಟ್ಟಡ ನಿರ್ಮಾಣ ಹೀಗೆ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.40 ಮತ್ತು ಶೇ.60 ಅನುದಾನದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಬೇಕಾಗುತ್ತದೆ. ಗ್ರಾಮದ ಅಭಿವೃದ್ಧಿಗೆ ಪೂರಕ ಆಗುವಂತಹ ಯೋಜನೆಗಳು ಇರಬೇಕೆಂದೇ ಕಾಯ್ದೆಯನ್ನು ತರಲಾಗಿದೆ. ಈ ಹಿಂದೆ ನಕಲಿ ಜಾಬ್ ಕಾರ್ಡ್‌ಗಳ ಸೃಷ್ಠಿಸಿ, ಹಣ ದುರುಪಯೋಗ ಆಗುತ್ತಿತ್ತು. ಈಗ ಅವುಗಳಿಗೆ ತೆರೆಬೀಳಲಿದೆ ಎಂದರು.

ಬಡವರಿಗೆ ಉದ್ಯೋಗವನ್ನೇ ನೀಡದೇ, ನಕಲಿ ಜಾಬ್ ಕಾರ್ಡ್ ಮೂಲಕ ಹಣ ಲಪಟಾಯಿಸುವ ಕೆಲಸವಾಗುತ್ತಿತ್ತು. ಭ್ರಷ್ಟಾಚಾರ ತಡೆಯಬೇಕು, ಅಭಿವೃದ್ಧಿಗೆ ಪೂರಕ ಆಗಿರಬೇಕೆಂಬ ಕಾರಣಕ್ಕೆ ಬಯೋಮೆಟ್ರಿಕ್ ಹಾಜರಾತಿಗೆ ಕ್ರಮ ವಹಿಸಲಾಗಿದೆ. ಭ್ರಷ್ಟಾಚಾರಕ್ಕೆ ಅವಕಾಶ ಕೊಡಬಾರದೆಂಬ ಕಾರಣಕ್ಕೆ ಡಿಜಿಟಲೀಕರಣ ಮಾಡಲಾಗಿದೆ. ಈ ಹಿಂದೆ ಕೃಷಿ ಚಟುವಟಿಕೆ ವೇಳೆ ನರೇಗಾ ಕೆಲಸಕ್ಕೆ ಹೋಗುವ ಅವಕಾಶ ಇತ್ತು. ಈ ಕಾಯ್ದೆಯಲ್ಲಿ ಕೃಷಿ ಚಟುವಟಿಕೆ ನಡೆಯುವ ಸಂದರ್ಭ ವರ್ಷಕ್ಕೆ 60 ದಿನ ಕಡಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಯೋಜನೆಯನ್ನು ನಿರ್ಧರಿಸಬೇಕು. ಈ ಯೋಜನೆಯಡಿ ಕಾನೂನಿನಲ್ಲಿ ಬದಲಾವಣೆ ತರುವ ಬೇಡಿಕೆ ಬಹಳ ದಿನಗಳಿಂದಲೂ ಇತ್ತು. ಈ ಯೋಜನೆಯನ್ನು ಅಕೌಂಟೆಬಲಿಟಿ ಮಾಡಿದ್ದಾರೆ. ಮೊದಲು ಹಳ್ಳಿಗಳಲ್ಲಿ ಈ ವರ್ಷ ಗುಂಡಿ ತೋಡುವುದು, ಮತ್ತೆ ಮುಚ್ಚುವುದಷ್ಟೇ ಕೆಲಸವಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿರಲಿಲ್ಲ. ಈಗ ಅಂತಹದ್ದಕ್ಕೆಲ್ಲಾ ಅವಕಾಶವಿಲ್ಲ. ಕಾಂಗ್ರೆಸ್ ಈಗ ಇದೇ ವಿಚಾರದಲ್ಲಿ ರಾಜಕೀಯ ಮಾಡಲು ಯತ್ನಿಸುತ್ತಿದೆ. ಮಹಾತ್ಮ ಗಾಂಧಿ ಹೆಸರು ತೆಗೆದು, ರಾಮನ ಹೆಸರಿಟ್ಟಿದ್ದಾರೆಂದು ಕಾಂಗ್ರೆಸ್‌ ಸರ್ಕಾರ ರಾಜಕೀಯ ಮಾಡುತ್ತಿದೆ. ಗಾಂಧೀಜಿ ಸಹ ರಾಮನಾಮ ಸ್ಮರಣೆ ಮಾಡುತ್ತಿದ್ದರು. ಜಿ ರಾಮ್ ಜಿ ಅಂದ್ರೆ ಬಿಜೆಪಿ ಅಂತಾ ಸಂಕುಚಿತ ಭಾವನೆ ಕಾಂಗ್ರೆಸ್‌ಗೆ ಇದೆ ಎಂದು ಎ.ಎಸ್‌. ಪಾಟೀಲ ನಡಹಳ್ಳಿ ಕುಟುಕಿದರು.

ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳು, ಅನಿಲಕುಮಾರ ನಾಯ್ಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ, ಮುಖಂಡರಾದ ಬಿ.ಜಿ. ಅಜಯಕುಮಾರ, ಚಂದ್ರಶೇಖರ ಪೂಜಾರ, ಜಿಲ್ಲಾ ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ, ಹಾಲೇಕಲ್ಲು ಮಂಜಾನಾಯ್ಕ ಇತರರು ಇದ್ದರು.

- - -

(ಬಾಕ್ಸ್‌)

* 15ರಿಂದ ಬಿಜೆಪಿ-ಜೆಡಿಎಸ್ ಜಂಟಿ ಜನಜಾಗೃತಿ

- ಜಿಲ್ಲಾ ಕೇಂದ್ರದಲ್ಲೂ ಸಮಾವೇಶ ನಡೆಸಿ ಕಾಂಗ್ರೆಸ್‌ ವಿರುದ್ಧ ಹೋರಾಟಕನ್ನಡಪ್ರಭ ವಾರ್ತೆ ದಾವಣಗೆರೆ ನರೇಗಾ ಯೋಜನೆ ಹೆಸರು ಬದಲಾವಣೆ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿರುವ ಬೆನ್ನಲ್ಲೇ ಜ.15ರಿಂದ 28ರವರೆಗೆ ರಾಜ್ಯವ್ಯಾಪಿ ಬಿಜೆಪಿ-ಜೆಡಿಎಸ್ ಮಿತ್ರಪಕ್ಷಗಳಿಂದ ಪ್ರತಿ ಹೋರಾಟಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.15ರಿಂದ 28ರವರೆಗೆ ರಾಜ್ಯಾದ್ಯಂತ ಜಿಲ್ಲಾಮಟ್ಟದಲ್ಲಿ ಸಮಾವೇಶ ಸಂಘಟಿಸಲಾಗುವುದು. ಪ್ರತಿ ಗ್ರಾ.ಪಂ. ಮಟ್ಟದಲ್ಲೂ ಕಾರ್ಮಿಕರನ್ನು ಸೇರಿಸಿ, ಜನಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದೇವೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿ ಎದುರು ಜಿ ರಾಮ್ ಜಿ ಯೋಜನೆ ಮಾಹಿತಿ ಫಲಕ ಅಳವಡಿಸಲು ತೀರ್ಮಾನ ಮಾಡಿದ್ದೇವೆ. ದಾವಣಗೆರೆ ಸೇರಿದಂತೆ ಇಡೀ ರಾಜ್ಯಾದ್ಯಂತ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೇರಿಕೊಂಡು, ಜಿ ರಾಮ್ ಜಿ ಯೋಜನೆ ಕುರಿತಂತೆ ಜನಜಾಗೃತಿ ಮೂಡಿಸಲಿದ್ದೇವೆ ಎಂದು ತಿಳಿಸಿದರು.

- - -

-12ಕೆಡಿವಿಜಿ1:

ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸುದ್ದಿಗೋಷ್ಠಿ ನಡೆಸುವ ಮುನ್ನ ಪಕ್ಷದ ಮುಖಂಡರು, ಕಾರ್ಯಕರ್ತರು ಸನ್ಮಾನಿಸಿದರು.