ಕನ್ನಡಪ್ರಭ ವಾರ್ತೆ ಬೆಳಗಾವಿ ಬಿವಿ ಜಿ ರಾಮ್ ಜಿ ಕಾಯ್ದೆಯು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತರಿಯನ್ನು 125 ದಿನಗಳಿಗೆ ವಿಸ್ತರಿಸುತ್ತದೆ. ಅಲ್ಲದೆ, ಗ್ರಾಮೀಣ ಜನರ ಜೀವನೋಪಾಯ ಬಲಪಡಿಸುತ್ತದೆ. ಇದರಿಂದ ಬಲಿಷ್ಠ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಿವಿ ಜಿ ರಾಮ್ ಜಿ ಕಾಯ್ದೆಯು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತರಿಯನ್ನು 125 ದಿನಗಳಿಗೆ ವಿಸ್ತರಿಸುತ್ತದೆ. ಅಲ್ಲದೆ, ಗ್ರಾಮೀಣ ಜನರ ಜೀವನೋಪಾಯ ಬಲಪಡಿಸುತ್ತದೆ. ಇದರಿಂದ ಬಲಿಷ್ಠ ಮತ್ತು ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಿವಿ ಜಿ ರಾಮ್ ಜಿ ಜಾಗೃತಿ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ತನ್ನದೇ ರಾಜ್ಯ ಸರ್ಕಾರಗಳನ್ನು ನಿಯಂತ್ರಿಸಲಾಗದ ಸ್ಥಿತಿಯಲ್ಲಿತ್ತು. ಇದರಿಂದ ನರೇಗಾ ಯೋಜನೆ ನಕಲಿ ಜಾಬ್ ಕಾರ್ಡ್‌ಗಳಿಗೆ ಮತ್ತು ಹಣ ಸೋರಿಕೆಗೆ ಬಲಿಯಾಯಿತು. ಈಗಿನ ಹೊಸ ಕಾಯ್ದೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಉದ್ಯೋಗ ಖಾತರಿ ದುರ್ಬಲಗೊಂಡಿದೆ, ಸಮಾಲೋಚನೆ ಇಲ್ಲದೆ ಜಾರಿಗೆ ತಂದಿದ್ದರಿಂದ ವಿಕೇಂದ್ರೀಕರಣ ಮತ್ತು ಬೇಡಿಕೆ ಹಕ್ಕುಗಳು ಹಾಳಾಗಿವೆ ಎಂದು ಹೇಳಿದರು.
ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ, ಜನರ ಜೀವನೋಪಾಯ ಬಲಪಡಿಸುವ ಕಲ್ಯಾಣ ಮತ್ತು ಶಾಶ್ವತ ಮೂಲಸೌಕರ್ಯ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಅಭಿವೃದ್ಧಿ ಇವೆರಡೂ ಒಂದಕ್ಕೊಂದು ಪೂರಕ. ಆದಾಯ ಹೆಚ್ಚಳ, ಆಸ್ತಿ ನಿರ್ಮಾಣ, ಕೃಷಿ ಸ್ಥಿರತೆ ಮತ್ತು ದೀರ್ಘಕಾಲದ ಗ್ರಾಮೀಣ ಉತ್ಪಾದಕತೆಯನ್ನು ಈ ಕಾನೂನಿನಲ್ಲಿ ನಿರಂತರ ಪ್ರಕ್ರಿಯೆಯಾಗಿ ನೋಡಲಾಗಿದೆ. ಇದು ಕೇವಲ ಆಶಯದ ಮಾತಲ್ಲ, ಕಾಯ್ದೆಯ ವಿನ್ಯಾಸದಲ್ಲೇ ಅಡಕವಾಗಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, ಈ ಹೊಸ ಕಾಯ್ದೆಯಲ್ಲಿ ಉದ್ಯೋಗಕ್ಕೆ ಕಾನೂನಿನ ಭದ್ರತೆ ದುರ್ಬಲಗೊಂಡಿದೆ ಎಂದು ಆರೋಪಿಸಲಾಗುತ್ತಿದೆ. ಇದು ಸಂಪೂರ್ಣ ತಪ್ಪು, ಕಾಯ್ದೆಯು ಉದ್ಯೋಗ ಖಾತರಿಯ ಕಾನೂನು ಬದ್ದ ಮತ್ತು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾದ ಹಕ್ಕನ್ನು ಉಳಿಸಿಕೊಂಡಿದೆ. ಅದರ ಜಾರಿಯನ್ನು ಇನ್ನಷ್ಟು ಬಲಪಡಿಸಿದೆ. ಉದ್ಯೋಗ ಖಾತರಿ ಹಿಂದಿನ 100 ದಿನದಿಂದ 125 ದಿನಗಳಿಗೆ ಹೆಚ್ಚಾಗಿದೆ. ಹಿಂದೆ ನಿರುದ್ಯೋಗ ಭತ್ಯೆಯನ್ನು ರದ್ದುಗೊಳಿಸುತ್ತಿದ್ದ ನಿಯಮಗಳನ್ನು ಈಗ ತೆಗೆದುಹಾಕಲಾಗಿದೆ. ಸಮಯಕ್ಕೆ ಸರಿಯಾಗಿ ದೂರು ನಿವಾರಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಸುಧಾರಣೆಯು ಕಾನೂನು ಭರವಸೆ ಮತ್ತು ನೈಜ ಜೀವನದ ನಡುವೆ ಇದ್ದ ದೊಡ್ಡ ಅಂತರವನ್ನು ನಿವಾರಣೆ ಮಾಡುತ್ತದೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಎಂ.ಬಿ.ಜಿರಲಿ ಮಾತನಾಡಿದರು. ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ರಮೇಶ್ ದೇಶಪಾಂಡೆ ಮಾಜಿ ಶಾಸಕ ಸಂಜಯ ಪಾಟೀಲ, ಡಾ.ವಿಶ್ವನಾಥ ಪಾಟೀಲ, ಪಕ್ಷದ ಜಿಪಂ, ತಾಪಂ ಮಾಜಿ ಸದಸ್ಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಸದಸ್ಯರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.-------
ಕೋಟ್.....ಯಾವುದೇ ಚರ್ಚೆ ಇಲ್ಲದೆ ಕಾಯ್ದೆಯ ಸುಧಾರಣೆ ಮಾಡಲಾಗಿದೆ. ರಾಜ್ಯಗಳಿಗೆ ಹಣ ಬಿಡುಗಡೆ ಕಡಿಮೆ ಮಾಡುವುದನ್ನು ಮರೆಮಾಚಿ ಕಾನೂನನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಈ ಎಲ್ಲ ಆರೋಪಗಳೂ ಕಾಯ್ದೆಯ ನಿಜವಾದ ಅಂತರ್ಯ ಮತ್ತು ಉದ್ದೇಶವನ್ನು ತಪ್ಪಾಗಿ ಓದಿದ್ದರಿಂದ ಬಂದಿವೆ. ಈ ತಪ್ಪು ತಿಳಿವಳಿಕೆಗೆ ಮೂಲ ಕಾರಣವೇನೆಂದರೆ ಕಲ್ಯಾಣ ಮತ್ತು ಅಭಿವೃದ್ಧಿಯನ್ನು ಒಂದಕ್ಕೊಂದು ವಿರೋಧಿ ಎಂದು ಭಾವಿಸುವುದು. ಆದರೆ, ಹೊಸ ಕಾಯ್ದೆಯನ್ನು ಇದಕ್ಕೆ ವಿರುದ್ಧವಾಗಿ ನಿರ್ಮಿಸಲಾಗಿದೆ.
- ಈರಣ್ಣಾ ಕಡಾಡಿ, ರಾಜ್ಯಸಭಾ ಸದಸ್ಯ