ಜಿಗಜಿಣಗಿ ಬಂಜಾರ ಸಮುದಾಯದ ಕ್ಷಮೆ ಕೇಳಲಿ

| Published : Mar 29 2024, 12:52 AM IST

ಸಾರಾಂಶ

ವಿಜಯಪುರ ಸಂಸದ ರಮೇಶ ಜಿಗಜಿಣಗಿ ಬಂಜಾರಾ ಸಮುದಾಯದವರಿಗೆ ಕೇವಲವಾಗಿ ಮಾತನಾಡಿದ್ದಾರೆ. ತಕ್ಷಣವೇ ಬಂಜಾರಾ ಸಮಾಜದ ಕ್ಷಮೆ ಕೇಳಬೇಕು ಎಂದು ಕರ್ನಾಟಕ ರಾಜ್ಯ ಬಂಜಾರ ಮಹಾಸಭಾದ ರಾಜ್ಯಾಧ್ಯಕ್ಷ ಅರ್ಜುನ್ ರಾಠೋಡ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಸಂಸದ ರಮೇಶ ಜಿಗಜಿಣಗಿ ಬಂಜಾರಾ ಸಮುದಾಯದವರಿಗೆ ಕೇವಲವಾಗಿ ಮಾತನಾಡಿದ್ದಾರೆ. ತಕ್ಷಣವೇ ಬಂಜಾರಾ ಸಮಾಜದ ಕ್ಷಮೆ ಕೇಳಬೇಕು ಎಂದು ಕರ್ನಾಟಕ ರಾಜ್ಯ ಬಂಜಾರ ಮಹಾಸಭಾದ ರಾಜ್ಯಾಧ್ಯಕ್ಷ ಅರ್ಜುನ್ ರಾಠೋಡ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯ ಮುಖಂಡ ಡಾ.ಬಾಬುರಾಜೇಂದ್ರ ನಾಯ್ಕ ಅವರಿಗೆ ಟಿಕೆಟ್ ಸಿಕ್ಕಿಲ್ಲವೆಂದು ಬುಧವಾರ ಬಂಜಾರ ಸಮಾಜದ ಹಲವರು ಬಿಜೆಪಿ ಕಚೇರಿಗೆ ಹೋಗಿ ಪ್ರತಿಭಟನೆ ನಡೆಸಿದ್ದರು. ಈ ಸಮಯದಲ್ಲಿ ಸಂಸದ ಜಿಗಜಿಣಗಿ ರಾಜ್ಯದ ಎಲ್ಲ ಬಂಜಾರ ಸಮಾಜಕ್ಕೆ ಕೇವಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಬಂಜಾರ ಸಮಾಜದವರಿಗೆ ಯಾರವರು? ಇಲ್ಲಿಗೇಕೆ ಬಂದಿದ್ದಾರೆ? ಬೇರೆ ಏನಾದರೂ ಕೆಲಸ ಮಾಡಿಕೊಂಡು ಹೋಗಬೇಕೆಂದು ಬಂಜಾರ ಸಮಾಜಕ್ಕೆ ಕೀಳಾಗಿ ಮಾತಾಡಿದ್ದಾರೆ. ಅಲ್ಲದೇ ಬಂಜಾರ ಸಮಾಜದವರ ಮತ ಬೇಕಾಗಿಲ್ಲ ಎಂದಿದ್ದಾರೆ. ಹಿರಿಯ ರಾಜಕಾರಣಿಯಾಗಿ ಹೀಗೆ ಸೊಕ್ಕಿನಿಂದ ಮಾತನಾಡಬಾರದು. ಏಕವಚನದಲ್ಲಿ ಮಾತಾಡಿದ್ದಕ್ಕಾಗಿ ಸಮಾಜಕ್ಕೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ದೇವರಹಿಪ್ಪರಗಿ ಬ್ಲಾಕ್ ಅಧ್ಯಕ್ಷೆ ಸರಿತಾ ಚವ್ಹಾಣ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೂ ಆಲಗೂರ ಅವರಿಗೆ ಜಿಲ್ಲೆಯ 518 ತಾಂಡಾಗಳ ಸಮಾಜದ ಜನಮತ ಹಾಕಬೇಕು. ನಾವೆಲ್ಲರೂ ಮುಂದೆನಿಂತು 2 ಲಕ್ಷಕ್ಕೂ ಅಧಿಕವಿರುವ ಸಮಾಜದ ಮತಗಳನ್ನೆಲ್ಲ ರಾಜು ಆಲಗೂರ ಅವರಿಗೆ ಹಾಕಿಸಿ, ಅವರನ್ನು ಗೆಲ್ಲಿಸುತ್ತೇವೆ ಎಂದು ಗುಡುಗಿದರು.

ಮಹಾನಗರ ಪಾಲಿಕೆ ಸದಸ್ಯ ರಾಜು ಚವ್ಹಾಣ, ಡಿ.ಎಲ್.ಚವ್ಹಾಣ, ರಾಜು ಜಾಧವ, ವಾಮನ ಜಾಧವ, ವೀಣಾ ರಾಠೋಡ, ಲಲಿತಾ ದೊಡಮನಿ, ಶೈಲಶ್ರೀ ಜಾಧವ, ರವಿದಾಸ ಜಾಧವ, ಪ್ರವೀಣ ಚೌರ, ಬಿ.ಬಿ.ಲಮಾಣಿ ಉಪಸ್ಥಿತರಿದ್ದರು.

------------

ಟಿಕೆಟ್‌ ಸಿಗದಿದ್ದಕ್ಕೆ ಹಣ ಕೊಟ್ಟು ಕರೆತಂದಿದ್ದಾನೆ: ಜಿಗಜಿಣಗಿ

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿಯಿಂದ ಬಂಜಾರಾ ಸಮಾಜದ ಡಾ.ಬಾಬುರಾಜೇಂದ್ರ ನಾಯ್ಕ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆ ಬುಧವಾರ ಬಿಜೆಪಿ ಕಚೇರಿ ಎದುರು ಸಮಾಜದ ಜನರು ಪ್ರತಿಭಟನೆ ನಡೆಸಿದ್ದರು. ಇದರಿಂದ ಅಸಮಾಧಾನಗೊಂಡ ಜಿಗಜಿಣಗಿ ಡಾ.ಬಾಬುರಾಜೇಂದ್ರ ನಾಯ್ಕ ವಿರುದ್ಧ ಆಕ್ರೊಶ ಹೊರಹಾಕಿದ್ದಾರೆ. ಅವನು ನಮ್ಮ ಜಿಲ್ಲೆಯವನೇ ಅಲ್ಲ, ಎಲ್ಲಿಂದಲೋ ತಾಂಡಾದಿಂದ ಬಂದು ಇಲ್ಲಿ ಹೇಗೆ ರಾಜಕಾರಣ ಮಾಡುತ್ತಾನೆ ಎಂದು ಕಾಂಗ್ರೆಸ್ ಲೀಡರ್‌ಗಳು ಸಹ ನನಗೆ ಕೇಳುತ್ತಿದ್ದಾರೆ. ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ತಾಂಡಾದವನು ಇಲ್ಲಿಗೆ ಬಂದು ರಾಜಕಾರಣಕ್ಕೆ ಮುಂದಾಗಿದ್ದಾನೆ. ಆತನಿಗೆ ಟಿಕೆಟ್ ಸಿಗದ ಹಿನ್ನೆಲೆ ಬಂಜಾರ ಸಮಾಜದ ಜನರಿಗೆ ಹಣ ಕೊಟ್ಟು ಕರೆತಂದಿದ್ದಾರೆ ಎಂದು ಆರೋಪಿಸಿದರು. ಅವನು ಮೀಟಿಂಗ್ ಕರೆದರೂ ಬಂಜಾರಾ ಸಮಾಜದವರು ಒಬ್ಬರೂ ಹೋಗಿಲ್ಲ, ನಿಮಗೆ ಬುದ್ಧಿ ಇದೆಯೋ ಇಲ್ಲವೋ, ಅವರಿಗೆ ತಿಳಿ ಹೇಳಲು ಬರುವುದಿಲ್ಲವೆ ಎಂದು ಬಂಜಾರಾ ಸಮಾಜದ ಜನ ನನಗೆ ಕರೆ ಮಾಡಿ ಕೇಳುತ್ತಿದ್ದಾರೆ ಎಂದರು.