ಒಕ್ಕೂಟದ ಕೊಡಗು ಜಿಲ್ಲಾ ಸಂಯೋಜಕ ಹೆಚ್ ಪಿ ಶಿವಕುಮಾರ್ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ ಹಲವು ಬೇಡಿಕೆ

ಕುಶಾಲನಗರ: ಗ್ರಾಮ ಪಂಚಾಯಿತಿ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಒಳ ಮೀಸಲಾತಿ ಅಳವಡಿಸಬೇಕು ಎಂದು ಆಗ್ರಹಿಸಿ ಮಾದಿಗ ಜಾತಿ ಉಪಜಾತಿ ಸಂಘಟನೆಗಳ ರಾಜ್ಯ ಒಕ್ಕೂಟದ ಕೊಡಗು ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಒಕ್ಕೂಟದ ಕೊಡಗು ಜಿಲ್ಲಾ ಸಂಯೋಜಕ ಹೆಚ್ ಪಿ ಶಿವಕುಮಾರ್ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಕ್ಕೊತ್ತಾಯ ಮಾಡಲಾಯಿತು.

2020 - 25 ಸಾಂವಿಧಾನಿಕ ಚೌಕಟ್ಟಿನಲ್ಲಿ ಅನುಸೂಚಿತ ಜಾತಿಗಳಿಗೆ ಶೇ. 15 ರಿಂದ 17ರ ತನಕ ಹಾಗೂ ಅನುಸೂಚಿತ ಪಂಗಡಗಳಿಗೆ ಶೇ. 3ರಿಂದ 7ರ ತನಕ ಹೆಚ್ಚಿಸಿರುವುದನ್ನು ರಾಜ್ಯ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ. ಸರ್ಕಾರ ಕೂಡಲೇ ಈ ಬಗ್ಗೆ ಮೇಲ್ಮನವಿ ಸಲ್ಲಿಸುವಂತಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬಡ್ತಿ ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕು, ಪರಿಶಿಷ್ಟ ಜಾತಿ ಪಂಗಡಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ವಿಶೇಷ ಘಟಕ ಯೋಜನೆ ರೂಪಿಸಲಾಗಿದೆ. ಇದನ್ನು ಇತರೆ ಉದ್ದೇಶಗಳಿಗೆ ದುರ್ಬಳಕೆ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ಈ ಸಂದರ್ಭ ಜಿಲ್ಲಾ ಅಧ್ಯಕ್ಷ ಹೆಚ್ ಡಿ ನಾಗಕುಮಾರ್, ಪ್ರಮುಖ ಕುಮಾರಸ್ವಾಮಿ, ಕಾವೇರಪ್ಪ ಹೆಚ್ ಟಿ ವಸಂತ್ ಮತ್ತಿತರರು ಇದ್ದರು.