ಜಿನಗಲಗುಂಟೆ ಅರಣ್ಯ ಪ್ರದೇಶ ಭೂಮಿ ಒತ್ತುವರಿ ವಿವಾದ: ಸರ್ವೇ ನಡೆಸಲು ಹೈಕೋರ್ಟ್ ನಿರ್ದೇಶನ

| Published : Jan 02 2025, 12:33 AM IST

ಜಿನಗಲಗುಂಟೆ ಅರಣ್ಯ ಪ್ರದೇಶ ಭೂಮಿ ಒತ್ತುವರಿ ವಿವಾದ: ಸರ್ವೇ ನಡೆಸಲು ಹೈಕೋರ್ಟ್ ನಿರ್ದೇಶನ
Share this Article
  • FB
  • TW
  • Linkdin
  • Email

ಸಾರಾಂಶ

ಅಂದರೆ ಅರಣ್ಯ ಇಲಾಖೆಯವರಿಗೆ ಜಂಟಿ ಸರ್ವೇ ನಡೆಸುವ ಜವಾಬ್ದಾರಿ ಇದ್ದು, ಹೈಕೋರ್ಟಿನ ಆದೇಶದಂತೆ ಜಿಲ್ಲಾಧಿಕಾರಿಗಳು, ಡಿಡಿಎಲ್ ಆರ್ ಮತ್ತು ಒತ್ತುವರಿದಾರರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಡ್ಡಾಯವಾಗಿ ಜಂಟಿ ಸರ್ವೇ ಕಾರ್ಯದಲ್ಲಿ ಭಾಗವಹಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯ ಗ್ರಾಮದ ಜಿನಗಲಗುಂಟೆ ಅರಣ್ಯ ಪ್ರದೇಶದ ೧ ಮತ್ತು ೨ರ ಅರಣ್ಯ ಇಲಾಖೆ ಸರ್ವೇ ನಂಬರ್ ಗಳ ಜಮೀನು ಒತ್ತುವರಿ ವಿಚಾರದಲ್ಲಿ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರು ಹೊರಡಿಸಿದ್ದ, ಮೂರು ಅಧಿಸೂಚನೆಗಳು ಕರ್ನಾಟಕ ಹೈಕೋರ್ಟಿನ ಆದೇಶದ ಉಲ್ಲಂಘನೆಯ ವಿರುದ್ಧ ಹೈಕೋರ್ಟ್ ವಕೀಲ ಕೆವಿ ಶಿವಾರೆಡ್ಡಿ ದಾಖಲಿಸಿದ್ದ ರಿಟ್ ಅರ್ಜಿಯು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠದ ಮುಂದೆ ಬಂದಿದ್ದು, ವಾದ ಆಲಿಸಿದ ನ್ಯಾಯಮೂರ್ತಿ ಈಗಾಗಲೇ ಹೈಕೋರ್ಟ್ ನಿರ್ದೇಶನದಂತೆ ಜಂಟಿ ಸರ್ವೇ ಕಾರ್ಯ ಸುಮಾರು ೧೪ ವರ್ಷಗಳ ಕಾಲ ವಿಳಂಬವಾಗಿದೆ.

ಪ್ರಾದೇಶಿಕ ಆಯುಕ್ತರ ಅನಧಿಕೃತ ಪ್ರವೇಶವು ನ್ಯಾಯಾಲಯದ ಉಲ್ಲಂಘನೆ ಆಗಿರುವುದರಿಂದ ಅವರ ಆದೇಶಗಳನ್ನು ರದ್ದು ಮಾಡಿ ಈಗಾಗಲೇ ನಿಗದಿಯಾಗಿರುವ ಜ.೧೫ರ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೇ ಕಾರ್ಯವನ್ನು ಹೈಕೋರ್ಟ್ ನಿರ್ದೇಶನದಂತೆ ನಡೆಸಬೇಕು.

ಅಂದರೆ ಅರಣ್ಯ ಇಲಾಖೆಯವರಿಗೆ ಜಂಟಿ ಸರ್ವೇ ನಡೆಸುವ ಜವಾಬ್ದಾರಿ ಇದ್ದು, ಹೈಕೋರ್ಟಿನ ಆದೇಶದಂತೆ ಜಿಲ್ಲಾಧಿಕಾರಿಗಳು, ಡಿಡಿಎಲ್ ಆರ್ ಮತ್ತು ಒತ್ತುವರಿದಾರರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಡ್ಡಾಯವಾಗಿ ಜಂಟಿ ಸರ್ವೇ ಕಾರ್ಯದಲ್ಲಿ ಭಾಗವಹಿಸಬೇಕು.

ಜಿಲ್ಲಾಧಿಕಾರಿ ಒತ್ತುವರಿದಾರರಾದ ರಮೇಶ್ ಕುಮಾರ್‌ರಿಗೆ ನೋಟಿಸ್ ಕೊಟ್ಟು ಸರ್ವೇ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಬೇಕು. ಒಂದು ವೇಳೆ ಅವರು ಭಾಗವಹಿಸದೆ ಅನುಪಸ್ಥಿತಿ ಆದರೂ ಸಹ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಬೇಕು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸರ್ವೇ ಕಾರ್ಯದಲ್ಲಿ ಭಾಗವಹಿಸದೆ ಇದ್ದಲ್ಲಿ ಮುಂದೆ ಅವರಿಗೆ ಈ ವಿಷಯದಲ್ಲಿ ಯಾವುದೇ ಮೇಲ್ಮನವಿ ಹೋಗುವ ಅಧಿಕಾರ ಸಹ ಇರುವುದಿಲ್ಲ. ಏಕೆಂದರೆ ಈಗಾಗಲೇ ಅವರೇ ಕೋರಿರುವಂತೆ ಜಂಟಿ ಸರ್ವೇ ಕಾರ್ಯ ನಡೆಸಲು ಹೈಕೋರ್ಟ್ ನಿರ್ದೇಶನ ಕೊಟ್ಟಿದ್ದರೂ ಅವರ ಗೈರು ಹಾಜರಿ ಪದೇ ಪದೇ ಇರುವುದರಿಂದ ನ್ಯಾಯಾಲಯದ ನಿರ್ದೇಶನಕ್ಕೆ ಅಡ್ಡಿಪಡಿಸುತ್ತಿದ್ದಾರೆ.

ಈಗ ನಿರ್ದೇಶಿಸಿರುವ ಜಂಟಿ ಸರ್ವೇ ಕಾರ್ಯವನ್ನು ಜ.೧೫ರಂದು ಹೈಕೋರ್ಟಿನ ಆದೇಶದಂತೆ ಮುಗಿಸಿ, ಜ.೩೦ ರೊಳಗೆ ವರದಿ ಒಪ್ಪಿಸಿ ಮುಂದಿನ ಕ್ರಮ ಜರುಗಿಸತಕ್ಕದ್ದು ಎಂದು ಹೈಕೋರ್ಟಿನ ನಿರ್ದೇಶನ ನೀಡಿದೆ.

ಏಡುಕೊಂಡಲುಗೆ ಮುಂಬಡ್ತಿ, ವರ್ಗ:

ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ವಿ.ಏಡುಕೊಂಡಲುರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

೨೦೨೨ರಲ್ಲಿ ಡಿಸಿಎಫ್ ಆಗಿ ಬಂದಿದ್ದ ಅವರು ಸುಮಾರು ೨೮ ತಿಂಗಳ ಕಾಲ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯ ಪ್ರದೇಶದ ಒತ್ತುವರಿ ತೆರವು ಕಾರ್ಯಾಚರಣೆ ಮೂಲಕ ಹಲವರಿಗೆ ಬಿಸಿ ಮುಟ್ಟಿಸಿದ್ದರು. ಅವರಿಗೆ ಮುಂಬಡ್ತಿ ಸಿಕ್ಕಿದ್ದು, ಹಾಸನ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಸಿಎಫ್) ವರ್ಗಾವಣೆ ಮಾಡಲಾಗಿದೆ.

ಆದರೆ, ಅವರಿಂದ ತೆರವಾಗಿರುವ ಸ್ಥಾನಕ್ಕೆ ಹೊಸ ಡಿಸಿಎಫ್ ಅನ್ನು ಇನ್ನೂ ನಿಯೋಜಿಸಿಲ್ಲ. ಶ್ರೀನಿವಾಸಪುರ ತಾಲೂಕಿನ ಜಿಗಲಕುಂಟೆ ಅರಣ್ಯ ಪ್ರದೇಶದ ಸರ್ವೇ ನಂಬರ್ ೧ ಮತ್ತು ೨ರಲ್ಲಿ ೬೧.೩೯ ಎಕರೆ ಪ್ರದೇಶ ಒತ್ತುವರಿ ಆಗಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಜ.೧೫ರಂದು ಜಂಟಿ ಸರ್ವೇ ಕಾರ್ಯವನ್ನು ನಿಗದಿಪಡಿಸಿದ್ದು, ಈ ಸಂದರ್ಭದಲ್ಲೇ ಏಡುಕೊಂಡಲು ಅವರ ವರ್ಗಾವಣೆ ನಡೆದಿದೆ.