ಜೀವದಯಾ ಮನೋಧರ್ಮ ಅತ್ಯಂತ ಶ್ರೇಷ್ಠ ವ್ರತ: ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀ
KannadaprabhaNewsNetwork | Published : Oct 23 2023, 12:16 AM IST
ಜೀವದಯಾ ಮನೋಧರ್ಮ ಅತ್ಯಂತ ಶ್ರೇಷ್ಠ ವ್ರತ: ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀ
ಸಾರಾಂಶ
ಸಿರಿಧಾನ್ಯಗಳ ಸಹಿತ ನವಧಾನ್ಯ, ಅಕ್ಕಿಮುಡಿ, ಬೇಳೆಗಳ ಸಮರ್ಪಣೆ
ರಿಪ್ಪನ್‍ಪೇಟೆ: ಪರಸ್ಪರ ಪ್ರೀತಿ, ವಾತ್ಸಲ್ಯದಿಂದ ಅನ್ಯೂನ್ಯ ಸಂಬಂಧಗಳ ಹೊಂದಿದ ಜೀವನ ನಿರ್ವಹಣೆಯಲ್ಲಿ ವಿಘ್ನಗಳು, ಸಂಘರ್ಷಗಳು ಬರಲಾರವು ಎಂದು ಹೊಂಬುಜ ಜೈನ ಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನುಡಿದರು. ರಿಪ್ಪನ್‍ಪೇಟೆ ಸಮೀಪದ ಹೊಂಬುಜ ಜೈನ ಮಠದಲ್ಲಿ ಶರನ್ನವರಾತ್ರಿ ಮಹೋತ್ಸವದ 8ನೇ ದಿನದಂದು ಜೀವದಯಾಷ್ಟಮಿ ಆಚರಣೆ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಪ್ರವಚನ ನೀಡಿದ ಅವರು, ಯಾವುದೇ ಪ್ರಾಣಿ-ಸಸ್ಯ ಜೀವಿಗೂ ನೋವುಂಟು ಮಾಡಬಾರದೆಂಬ ಜೈನಧರ್ಮದ ತತ್ತ್ವಗಳು ಮಾನವ ಕಲ್ಯಾಣ ಬಯಸುತ್ತದೆ ಎಂದರು. ಇತರರನ್ನು ಸಹೋದರ- ಸಹೋದರಿಯರಂತೆ ಗೌರವಿಸಬೇಕು. ಪ್ರಕೃತಿಯ ಸಸ್ಯ-ಪ್ರಾಣಿ ಜೀವರಾಶಿಗಳನ್ನು ಪೋಷಿಸುವ ಮೂಲಕ ನಿರ್ಮಲ ಮನಸ್ಸಿನ ಜೀವನವು ಸಹಬಾಳ್ವೆಯ ಫಲಶ್ರುತಿ ಶ್ರೇಷ್ಠವಾದುದು ಎಂದು ಹರಸಿದರು. ಸಿರಿಧಾನ್ಯಗಳ ಸಹಿತ ನವಧಾನ್ಯ, ಅಕ್ಕಿಮುಡಿ, ಬೇಳೆಗಳ ಸಮರ್ಪಣೆ ಮಾಡಲಾಯಿತು. ಶ್ರೀ ಕ್ಷೇತ್ರದ ಶ್ರೀ ಪಾರ್ಶ್ವನಾಥ ಸ್ವಾಮಿ, ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿದೇವಿ ಸನ್ನಿಧಿಯಲ್ಲಿ ಅಷ್ಟವಿಧಾರ್ಚನೆ, ವಿಶೇಷ ಆರಾಧನಾ ಪೂಜೆ ನೆರವೇರಿತು. ಪ್ರಾತಃಕಾಲ ಐಶ್ವರ್ಯ ಆನೆಯೊಂದಿಗೆ ಅಗ್ರೋದಕವನ್ನು ಕುಮದ್ವತಿ ತೀರ್ಥದಿಂದ ವಾದ್ಯಗೋಷ್ಠಿಯೊಂದಿಗೆ ತರಲಾಯಿತು. ಸೇವಾಕರ್ತೃರಾದ ಮುಂಬೈನ ಶ್ರೀ ರಾಜೀವ್- ಸಚಿನ್ ಜೈನ್ ಹಾಗೂ ಶ್ರೀ ದಿಲೀಪ್ ಗೆವಾರೆ ಮತ್ತು ಕುಟುಂಬದವರನ್ನು ಪೂಜ್ಯ ಶ್ರೀಗಳವರು ಗೌರವಿಸಿ ಹರಸಿದರು. ರಾತ್ರಿ ಸಂಗೀತ, ಭಜನೆ, ಸಾಮೂಹಿಕ ಜಿನನಾಮ ಸ್ತುತಿಯೊಂದಿಗೆ ಸ್ವಸ್ತಿಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ಭಕ್ತವೃಂದದವರು ಜೀವದಯಾಷ್ಟಮಿ ಪರ್ವದಲ್ಲಿ ಭಾಗಿಯಾದರು. ಪುರೋಹಿತ ಶ್ರೀ ಪದ್ಮರಾಜ ಇಂದ್ರ ಅವರು ಪೂಜಾವಿಧಿ ನೆರವೇರಿಸಿದರು. - - - -22ಆರ್‌ಪಿಟಿ1ಪಿ: ಹೊಂಬುಜ ಜೈನಮಠ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕರು ಆಶೀರ್ವಚನ ನೀಡಿದರು.