ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ಮಾರುಗೊಂಡನಹಳ್ಳಿಯಿಂದ ನಾಗತೀಹಳ್ಳಿ ರಸ್ತೆಯ ಮಧ್ಯದಲ್ಲಿರುವ ಹಳೇವೂರು ಕೆರೆ ಏರಿಯ ರಸ್ತೆಯು ಜಲಜೀವನ್ ಕಾಮಗಾರಿಯಿಂದ ಸಂಪೂರ್ಣ ಅದ್ವಾನಗೊಂಡಿದ್ದು ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ.ಈ ರಸ್ತೆ ಹಾಗೂ ಕೆರೆ ಏರಿ ಜಿಲ್ಲಾ ಪಂಚಾಯತ್ ಇಲಾಖೆಗೆ ಸೇರಿದ್ದು ಈ ಮೂಲಕ ಸುಮಾರು ಹತ್ತಾರು ಹಳ್ಳಿಗಳು ಸೇರಿದಂತೆ ತಿಪಟೂರು-ಅರಸೀಕೆರೆ-ಹುಳಿಯಾರು ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಕೆರೆ ಏರಿ ತೀರಾ ಕಿರಿದಾಗಿದ್ದರೂ ಈ ಕೆರೆ ಏರಿಯನ್ನು ಜಲ ಜೀವನ್ ಕಾಮಗಾರಿಗಾಗಿ ಪೈಪ್ ಅಳವಡಿಸಲು ಅಗೆದ ಪರಿಣಾಮ ಡಾಂಬರು ಸಂಪೂರ್ಣ ಕಿತ್ತುಹೋಗಿದೆ. ರಸ್ತೆಯ ಬದಿಯಲ್ಲಿ ಗುಂಡಿಗಳಾಗಿರುವ ಕಾರಣ ವಾಹನಗಳು ಕೆರೆ ಅಥವಾ ಏರಿ ಹಿಂಭಾಗದ ಕಂದಕಕ್ಕೆ ಬೀಳುವ ಪರಿಸ್ಥಿತಿ ಉಂಟಾಗಿದೆ. ಕಾಮಗಾರಿಯಿಂದ ಕೆರೆ ಏರಿಯ ಬಹು ಭಾಗ ಒಡೆದು ಹೋಗಿದ್ದು ಈ ಮೊದಲೇ ನಿರ್ಮಿಸಿದ್ದ ತಡೆಗೋಡೆಯನ್ನು ಕಿತ್ತುಹಾಕಲಾಗಿದೆ. ರಸ್ತೆ ಒಂದು ಬದಿ ಕೆರೆಯಾದರೆ ಮತ್ತೊಂದು ಬದಿ ೩೦ಕ್ಕೂ ಹೆಚ್ಚು ಆಳದ ಪ್ರಪಾತವಿದ್ದು ಸವಾರರು ಜೀವ ಕೈಯಲ್ಲಿಡಿದುಕೊಂಡು ಹೋಗಬೇಕಿದೆ. ಜಿಲ್ಲಾಪಂಚಾಯತ್ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ತಾಲೂಕು ಪಂಚಾಯಿತಿ ಹಾಗೂ ಜೆಜೆಎಂ ಇಲಾಖೆಗೆ ಹಲವು ಬಾರಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಪ್ರತಿನಿತ್ಯ ವಾಹನ ಸವಾರರು ಅಪಘಾತಕ್ಕೀಡಾಗಿ ಕೈ ಕಾಲು ಕಳೆದುಕೊಳ್ಳುತ್ತಿದ್ದಾರೆ. ಕೂಡಲೇ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾಧಿಕಾರಿಗಳು ಕೆರೆ ಏರಿಯನ್ನು ಸೂಕ್ತ ರಿತಿಯಲ್ಲಿ ರಿಪೇರಿ ಮಾಡಿಸಿ ಕೆರೆ ಏರಿಗೆ ತಡೆಗೋಡಿ ನಿರ್ಮಿಸಬೇಕಾಗಿದೆ. ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ತಾಲೂಕು ಪಂಚಾಯಿತಿ ಎಂಜಿನಿಯರ್ ಸ್ವಾಮಿ, ಹಳೆವೂರು ಕೆರೆ ಏರಿ ಒಡೆದು ಪೈಪ್ ಅಳವಡಿಸುತ್ತಿರುವ ಬಗ್ಗೆ ಪರಿಶೀಲಿಸಿ ಕಾಮಗಾರಿ ನಡೆಸಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೂ ರಿಪೇರಿ ಮಾಡಿಸಲು ಹೇಳುತ್ತೇವೆ ಎಂದು ತಿಳಿಸಿದ್ದಾರೆ. ಅದೇ ರೀತಿ ಜೆಜೆಎಂ ಎಂಜಿನೀಯರ್ ನಾಗೇಶ್ ಪ್ರತಿಕ್ರಿಯಿಸಿ ನಮಗೆ ತಿಳಿಸದೆ ಗುತ್ತಿಗೆದಾರರು ಕೆರೆ ಏರಿ ಒಡೆದಿರುವುದರ ಕುರಿತು, ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))